ಜಾತಿನಿಂದನೆ ಕಾಯಿದೆ ದುರ್ಬಳಕೆಯಾಗದಂತೆ ಎಚ್ಚರ ವಹಿಸಲು ಆಗ್ರಹ

| Published : Feb 21 2024, 02:01 AM IST

ಜಾತಿನಿಂದನೆ ಕಾಯಿದೆ ದುರ್ಬಳಕೆಯಾಗದಂತೆ ಎಚ್ಚರ ವಹಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಕಾಫಿ ಬೆಳೆಗಾರರನ್ನು ಟಾರ್ಗೆಟ್ ಮಾಡಿ ಕಾರ್ಮಿಕರನ್ನು ಪ್ರಚೋದಿಸಿ ಬೆಳೆಗಾರರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಜೀತ ವಿಮುಕ್ತ ಮತ್ತು ಜಾತಿ ನಿಂದನೆ ಕಾಯಿದೆ ಹಿಂದಿನಿಂದಲೂ ವ್ಯಾಪಕವಾಗಿ ದುರುಪಯೋಗವಾಗುತ್ತಿದ್ದು, ಈ ಕಾನೂನುಗಳನ್ನು ದುರ್ಬಳಕೆ ಪಡಿಸಿಕೊಳ್ಳದಂತೆ ಪೊಲೀಸ್ ಇಲಾಖೆ ವಿಶೇಷ ಗಮನ ಹರಿಸಬೇಕೆಂದು ಕೊಡಗು ಬೆಳೆಗಾರ ಒಕ್ಕೂಟ ಮನವಿ ಮಾಡಿದೆ.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಕೊಡಗು ಜಿಲ್ಲೆಯಲ್ಲಿ ಬೆಳೆಗಾರರು ಮತ್ತು ಕಾರ್ಮಿಕರ ನಡುವೆ ಉತ್ತಮ ಬಾಂಧವ್ಯವಿದ್ದು, ಈ ಸಾಮರಸ್ಯಗಳನ್ನು ಕೆಡಿಸಲು ಕೆಲವು ಮಧ್ಯವರ್ತಿಗಳಿಂದ ಕಾರ್ಮಿಕರನ್ನು ಪ್ರಚೋದಿಸಿ ಬೆಳೆಗಾರರನ್ನು ಬೆದರಿಸಿ ಬೆಳೆಗಾರರ ಮೇಲೆ ಪ್ರಕರಣ ದಾಖಲಿಸುತ್ತಿವೆ ಎಂದು ಕೊಡಗು ಬೆಳೆಗಾರ ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಶ್ರೀಮಂಗಲ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಒಕ್ಕೂಟದ ಪ್ರಮುಖರು, ಕೊಡಗು ಜಿಲ್ಲೆಯ ತೋಟಗಳಲ್ಲಿ ಹೊರ ರಾಜ್ಯದ,ಹೊರ ಜಿಲ್ಲೆಯ ಹಾಗೂ ಸ್ಥಳೀಯ ಕಾರ್ಮಿಕರು ಕೆಲಸಕ್ಕೆ ಅನುಗುಣವಾಗಿ ನೆಲೆಸಿ ತೋಟದ ಕೆಲಸ ಮಾಡುತ್ತಿದ್ದಾರೆ. ಕೈಗಾರಿಕೆ, ಹೊಟೇಲ್ ಉದ್ಯಮ, ಕಟ್ಟಡ ಕೆಲಸ, ಪ್ರವಾಸೋದ್ಯಮ ಆಟೋಮೊಬೈಲ್, ರಸ್ತೆ ಕಾಮಗಾರಿಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವಂತೆ ಕಾಫಿ ಪ್ಲಾಂಟೇಶನ್ ನಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಕಾಫಿ ಬೆಳೆಗಾರರನ್ನು ಟಾರ್ಗೆಟ್ ಮಾಡಿ ಕಾರ್ಮಿಕರನ್ನು ಪ್ರಚೋದಿಸಿ ಬೆಳೆಗಾರರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದೆ. ಜೀತ ವಿಮುಕ್ತ ಮತ್ತು ಜಾತಿ ನಿಂದನೆ ಕಾಯಿದೆ ಹಿಂದಿನಿಂದಲೂ ವ್ಯಾಪಕವಾಗಿ ದುರುಪಯೋಗವಾಗುತ್ತಿದ್ದು, ಈ ಕಾನೂನುಗಳನ್ನು ದುರ್ಬಳಕೆ ಪಡಿಸಿಕೊಳ್ಳದಂತೆ ಪೊಲೀಸ್ ಇಲಾಖೆ ವಿಶೇಷ ಗಮನ ಹರಿಸಬೇಕೆಂದು ಮನವಿ ಮಾಡಿದರು.ಹಲವು ದಶಕಗಳಿಂದ ಬೆಳೆಗಾರರು ವಿವಿಧ ಸಮಸ್ಯೆ ಎದುರಿಸುತ್ತಿದ್ದು, ಇದೀಗ ಹಲವು ದಸಕಗಳಿದ್ದ ಮಾರುಕಟ್ಟೆ ಚೇತರಿಕೆ ಕಂಡಿರುವ ಸಮಯದಲ್ಲಿ ಬೆಳೆಗಾರರನ್ನು ಸುಲಿಗೆ ಮಾಡುವ ಪ್ರಯತ್ನ ಕೆಲವರಿಂದ ನಡೆದಿದೆ ಎಂದು ಆರೋಪಿಸಿದರು. ಕಾರ್ಮಿಕರಿಗೆ ತೋಟದ ಲೈನ್ ಮನೆಗಳಲ್ಲಿ ಮೂಲ ಸೌಕರ್ಯಗಳೊಂದಿಗೆ ಆಶ್ರಯನೀಡಿ ಕೆಲಸ ಕೊಡುವುದೇ ತಪ್ಪು ಎಂದು ಪ್ರತಿಪಾದಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಇತರ ಉದ್ಯಮಗಳಲ್ಲಿ ಶೆಡ್ ಹಾಕಿ ಮೂಲ ಸೌಕರ್ಯ ಇಲ್ಲದೇ ಕೆಲಸಮಾಡಿಸುತ್ತಾರೆ. ಕಾಫಿ ಬೆಳೆಗಾರರನ್ನು ಬೆದರಿಸಿ ಪ್ರಕರಣ ದಾಖಲಿಸುತ್ತಿದ್ದು ಈ ಬಗ್ಗೆ ಬೆಳೆಗಾರರು ಎಚ್ಚರವಾಗಬೇಕು ಗ್ರಾಮದಲ್ಲಿ ಬೆಳೆಗಾರರ ಮೇಲೆ ಉಂಟಾಗುವ ಸಮಸ್ಯೆಗಳಿಂದ ವಿಚಲಿತರಾಗದೆ, ಸಂಕಷ್ಟದ ಸ್ಥಿತಿಯಲ್ಲಿ ಬೆಳೆಗಾರರು ಸಂಘಟಿತರಾಗಿ ಬೆಂಬಲಿಸಿ ಆ ಪ್ರಕರಣವನ್ನು ಎದುರಿಸಬೇಕಾಗಿದೆ ಎಂದು ಕರೆ ನೀಡಿದರು.ಕೊಡಗು ಬೆಳೆಗಾರ ಒಕ್ಕೂಟದ ಅಧ್ಯಕ್ಷ ಕೆ. ಎಂ. ಕುಶಾಲಪ್ಪ, ಸ್ಥಾಪಕ ಸದಸ್ಯ ಎಂ.ಕೆ.ಮುತ್ತಪ್ಪ,ಕಾರ್ಯದರ್ಶಿ ಹರೀಶ್ ಮಾದಪ್ಪ, ಖಜಾಂಚಿ ಎಂ.ಎನ್. ವಿಜಯ, ನಿರ್ದೇಶಕ ಮುತ್ತಣ್ಣ, ವಿಶ್ವನಾಥ್,ವೇದಿತ್ ಮುತ್ತಪ್ಪ ಹಾಜರಿದ್ದರು.