ಅಪ್ಪಾಜಿಯನ್ನು ಕಪ್ಪುಪಟ್ಟಿಗೆ ಸೇರಿಸಲು ಒತ್ತಾಯ

| Published : Mar 07 2025, 12:45 AM IST

ಸಾರಾಂಶ

ಹನೂರಿನಲ್ಲಿ ಆರ್‌ಟಿಐ ಕಾರ್ಯಕರ್ತ ಅಪ್ಪಾಜಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಸಭೆ ನಡೆಸಿತು.

ಕನ್ನಡಪ್ರಭ ವಾರ್ತೆ ಹನೂರು

ಮಾಹಿತಿ ಹಕ್ಕು ಕಾಯ್ದೆಯಡಿ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿರುವ ಆರ್‌ಟಿಐ ಕಾರ್ಯಕರ್ತ ಅಪ್ಪಾಜಿಯನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಒಕ್ಕೊರಲಿನಿಂದ ಖಂಡಿಸಿದೆ.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಪ್ರಭುಸ್ವಾಮಿ ಮಾತನಾಡಿ, ಹನೂರು ತಾಲೂಕು ವ್ಯಾಪ್ತಿಯಲ್ಲಿ ಆರ್‌ಟಿಐ ಕಾರ್ಯಕರ್ತ ಅಪ್ಪಾಜಿಯ ಕಿರುಕುಳ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೂ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿ ಅಧಿಕಾರಿಗಳಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾನೆ. ಈಗಾಗಲೇ ಮಾಹಿತಿ ಹಕ್ಕು ಆಯೋಗ ಯಾವುದೇ ಒಬ್ಬ ವ್ಯಕ್ತಿ ಮಾಹಿತಿ ಹಕ್ಕಿನಡಿ 30 ಅರ್ಜಿಗಳನ್ನು ಮಾತ್ರ ಸಲ್ಲಿಸಬೇಕು ಅದುವೇ ಸಾರ್ವಜನಿಕ ಹಿತಾಸಕ್ತಿಗೆ ಒಳಪಟ್ಟಿರಬೇಕು ಇಲ್ಲದಿದ್ದರೆ ಅಂತಹವರನ್ನು ಕಪ್ಪುಪಟ್ಟಿಗೆ ಸೇರಿಸಲು ಮಾಹಿತಿ ಹಕ್ಕು ಆಯೋಗ ತೀರ್ಮಾನಿಸಿದೆ.ಅದರಂತೆ ಹನೂರು ತಾಲೂಕು ವ್ಯಾಪ್ತಿಯಲ್ಲಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಆರ್‌ಟಿಐ ಕಾರ್ಯಕರ್ತ ಅಪ್ಪಾಜಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ಈತನ ವಿರುದ್ಧ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ದೇವರಾಜ ನಾಯ್ಡು ಮಾತನಾಡಿ, ಹನೂರು ಪಟ್ಟಣದ ಹುಲ್ಲೇಪುರ ಗ್ರಾಮ ವ್ಯಾಪ್ತಿಯ ಸರ್ವೆ ನಂ.208ಸಿ ನಲ್ಲಿ ಸರ್ಕಾರಿ ವಿದ್ಯಾರ್ಥಿ ನಿಲಯ ರೈತ ಸಂಪರ್ಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಗಳಿಗೆ ನಿವೇಶದ ಮಂಜೂರು ಮಾಡಿದೆ. ಆರ್‌ಟಿಐ ಕಾರ್ಯಕರ್ತ ಅಪ್ಪಾಜಿ ಹನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಭವನ ನಿರ್ಮಾಣ ಕಾಮಗಾರಿಗೆ ತೊಂದರೆ ನೀಡುವ ಉದ್ದೇಶದಿಂದ ಈ ರೀತಿ ವಿನಾಕಾರಣ ಅರ್ಜಿ ನೀಡುತ್ತಿದ್ದಾರೆ. ಹನೂರು ತಾಲೂಕಿನ ಪತ್ರಕರ್ತರು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲರಾಗಿದ್ದಾರೆ. ಇಂತಹ ಸಂಸ್ಥೆಗೆ ತೊಂದರೆ ನೀಡುವ ಉದ್ದೇಶದಿಂದ ಜಿಲ್ಲಾಧಿಕಾರಿ, ತಹಸೀಲ್ದಾಲ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ. ಫೆ.25ರಲ್ಲಿ ಪಟ್ಟಣ ಪಂಚಾಯಿತಿ ಕಚೇರಿಗೆ ಅರ್ಜಿ ಬರೆದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಭವನ ನಿರ್ಮಾಣ ಮಾಡಲು ಯಾವುದಾದರೂ ಅನುಮತಿ ಪಡೆದುಕೊಂಡಿದ್ದಾರೆಯೇ ಎಂದು ಅರ್ಜಿ ಸಲ್ಲಿಸಿ ಮುಖ್ಯಾಧಿಕಾರಿಗಳಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡುವಂತೆ ಒತ್ತಡ ಹೇರುತ್ತಿದ್ದಾರೆ.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮಹಾದೇಶ್, ಖಜಾಂಚಿ ಮಹದೇವಸ್ವಾಮಿ,ಸಹ ಕಾರ್ಯದರ್ಶಿ ಗೋವಿಂದ, ನಿರ್ದೇಶಕ ರಮೇಶ್ , ಮಧು,ಸದಸ್ಯರಾದ ಸೋಮಶೇಖರ್, ಲಿಂಗರಾಜು,ಮಹಾದೇವ,ರವಿ, ಶಿವಕುಮಾರ್ ,ಶಾಗ್ಯ ನಂದೀಶ್, ನಿರಂಜನ್ , ಮಹಾದೇವ ಸ್ವಾಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.