ಮೈಸೂರು ರಸ್ತೆ ಸಂಪರ್ಕಕ್ಕೆರ್‍ಯಾಂಪ್‌ ನಿರ್ಮಿಸಲು ಆಗ್ರಹ

| Published : Sep 03 2025, 02:00 AM IST

ಮೈಸೂರು ರಸ್ತೆ ಸಂಪರ್ಕಕ್ಕೆರ್‍ಯಾಂಪ್‌ ನಿರ್ಮಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬಡಾವಣೆಯಲ್ಲಿ ಹಾದುಹೋಗಿರುವ ಮೇಜರ್‌ ಆರ್ಟೀರಿಯಲ್‌ ರಸ್ತೆಯಿಂದ ಮೈಸೂರು ರಸ್ತೆಗೆ ಹತ್ತಲು ಮತ್ತು ಇಳಿಯಲು (ಅಪ್ ಆ್ಯಂಡ್‌ ಡೌನ್‌) ರ್‍ಯಾಂಪ್‌ ನಿರ್ಮಿಸಬೇಕು ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ನಾಗರಿಕರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಡಾವಣೆಯಲ್ಲಿ ಹಾದುಹೋಗಿರುವ ಮೇಜರ್‌ ಆರ್ಟೀರಿಯಲ್‌ ರಸ್ತೆಯಿಂದ ಮೈಸೂರು ರಸ್ತೆಗೆ ಹತ್ತಲು ಮತ್ತು ಇಳಿಯಲು (ಅಪ್ ಆ್ಯಂಡ್‌ ಡೌನ್‌) ರ್‍ಯಾಂಪ್‌ ನಿರ್ಮಿಸಬೇಕು ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ನಾಗರಿಕರು ಆಗ್ರಹಿಸಿದ್ದಾರೆ.

ಬೆಂಗಳೂರು ಹೊರವಲಯದ ಮೈಸೂರು ರಸ್ತೆಯ ಕೆಂಗೇರಿ ಹೋಬಳಿಯ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 12 ಹಳ್ಳಿಗಳಲ್ಲಿ 4040 ಎಕರೆ ಪ್ರದೇಶದಲ್ಲಿ ಬಿಡಿಎ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯು 40 ಸಾವಿರ ನಿವೇಶನಗಳನ್ನು ಹೊಂದಿದೆ. ಬಡಾವಣೆಯ ಮಧ್ಯಭಾಗದಲ್ಲಿ 330 ಅಡಿ 10.7 ಕಿ.ಮೀ ರಸ್ತೆಯನ್ನು (ಮೇಜರ್‌ ಆರ್ಟಿರಿಯಲ್ ರಸ್ತೆ) ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸಲು ನಿರ್ಮಿಸಲಾಗುತ್ತಿದೆ. ಈ ರಸ್ತೆಯು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ ಕೆಳಭಾಗದಲ್ಲಿ ಮೈಸೂರು ರಸ್ತೆಗೆ ಚಲ್ಲಘಟ್ಟ ಮೆಟ್ರೋ ನಿಲ್ದಾಣ ಮತ್ತು ರಾಜರಾಜೇಶ್ವರಿ ವೈದ್ಯಕೀಯ ಮಹಾವಿದ್ಯಾಲಯದ ಬಳಿ ಸಂಪರ್ಕಿಸುತ್ತದೆ.

ಮೈಸೂರು ರಸ್ತೆಯ ಮೇಲ್ಸೇತುವೆಯು ಪಂಚಮುಖಿ ದೇವಾಲಯದಿಂದ ಪ್ರಾರಂಭವಾಗುತ್ತದೆ. ಮೈಸೂರು ರಸ್ತೆಯ ಮೇಲ್ಸೇತುವೆಯನ್ನು ಹತ್ತಲು, ಇಳಿಯಲು ಕುಂಬಳಗೋಡು ಅಥವಾ ಬಿಡದಿಯಲ್ಲಿ ಅವಕಾಶವಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯ ಆರ್ಟಿರಿಯಲ್‌ ರಸ್ತೆಯಿಂದ ಬರುವ ವಾಹನಗಳು ಕುಂಬಳಗೋಡು, ಬಿಡದಿವರೆಗೂ ಮಾಮೂಲಿ ರಸ್ತೆಯನ್ನು ಉಪಯೋಗಿಸಿ ರಾಷ್ಟ್ರೀಯ ಹೆದ್ದಾರಿಯನ್ನು ಉಪಯೋಗಿಸಬೇಕು. ಮೈಸೂರಿನಿಂದ ಬರುವ ವಾಹನಗಳು ಕುಂಬಳಗೋಡು, ಬಿಡದಿಯಿಂದ ಮಾಮೂಲಿ ರಸ್ತೆಯನ್ನು ಉಪಯೋಗಿಸಿ ಬಡಾವಣೆಯ ಮೇಜರ್‌ ಆರ್ಟಿರಿಯಲ್‌ ರಸ್ತೆಯನ್ನು ಪ್ರವೇಶಿಸಬೇಕಿದ್ದು ತ್ರಾಸದಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಂಚಮುಖಿ ದೇವಾಲಯದ ಬಳಿ ಮೈಸೂರು ರಸ್ತೆಯ ಮೇಲ್ಸೇತುವೆಯನ್ನು ಹತ್ತಲು ಕೆಂಪೇಗೌಡ ಬಡಾವಣೆಯ ಮೇಜರ್‌ ಆರ್ಟಿರಿಯಲ್‌ ರಸ್ತೆಯಿಂದ ಬರುವ ವಾಹನಗಳಿಗೆ ಅವಕಾಶವಿಲ್ಲ. ಮೈಸೂರಿನಿಂದ ಬಂದ ವಾಹನಗಳು ಪಂಚಮುಖಿ ದೇವಾಲಯದಿಂದ ಮಾಗಡಿ ರಸ್ತೆ ಭಾಗಕ್ಕೆ ಹೋಗಲು ಮೇಜರ್‌ ಆರ್ಟಿರಿಯಲ್‌ ರಸ್ತೆಯನ್ನು ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಕೆಂಗೇರಿ ತನಕ ಹೋಗಿ ಅಲ್ಲಿ ಯೂ-ಟರ್ನ್‌ ಮಾಡಿಕೊಂಡು ಮೈಸೂರು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯನ್ನು ಹತ್ತಬಹುದು ಮತ್ತು ಮೇಜರ್‌ ಆರ್ಟಿರಿಯಲ್ ರಸ್ತೆಗೆ ಪ್ರವೇಶ ಪಡೆಯಬೇಕಾಗಿದ ಪರಿಸ್ಥಿತಿ ಇದೆ ಎಂದಿದ್ದಾರೆ.

ಮೇಜರ್‌ ಆರ್ಟಿರಿಯಲ್‌ ರಸ್ತೆಯಿಂದ ಮೈಸೂರು ರಸ್ತೆಗೆ ಹತ್ತಲು ಮತ್ತು ಇಳಿಯಲು ರ್‍ಯಾಂಪ್‌ ನಿರ್ಮಿಸುವುದರಿಂದ ಲಕ್ಷಾಂತರ ಜನರಿಗೆ ಅನುಕೂಲವಾಗಲಿದೆ. ಆದ್ದರಿಂದ ಬಿಡಿಎ ಅಥವಾ ನಗರಾಭಿವೃದ್ಧಿ ಇಲಾಖೆ ಇಲ್ಲವೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರ್‍ಯಾಂಪ್‌ ನಿರ್ಮಿಸಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಒತ್ತಾಯಿಸಿದೆ.