ಬ್ಯಾಡಗಿ: ಕಾಡು ಪ್ರಾಣಿಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಲು ತಮ್ಮ ಹೊಲಗಳಿಗೆ ಉಚಿತವಾಗಿ ಸೋಲಾರ್ ತಂತಿಬೇಲಿ ನಿರ್ಮಾಣ ಮಾಡಿ ಕೊಡುವಂತೆ ಶಿಡೇನೂರ ಗ್ರಾಮದ ರೈತರು ಅರಣ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ರೈತ ಮುಖಂಡ ಕಿರಣಕುಮಾರ ಗುಡಿಗೊಳ ಅವರು, ರೈತರು ಈಗಾಗಲೇ ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಹಲವು ನೈಸರ್ಗಿಕ ವಿಕೋಪಗಳಿಂದ ತತ್ತರಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲೇ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿ ಬೆಳೆಗಳನ್ನು ಹಾನಿಗೊಳಿಸುತ್ತಿದ್ದು, ರೈತರಿಗೆ ಇನ್ನಷ್ಟು ನಷ್ಟ ಉಂಟಾಗುತ್ತಿದೆ. ಆದ್ದರಿಂದ ಇದೀಗ ರೈತರನ್ನು ರಕ್ಷಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ತಕ್ಷಣ ಕ್ರಮ ಕೈಗೊಂಡು ಉಚಿತವಾಗಿ ಸೋಲಾರ್ ತಂತಿಬೇಲಿ ಅಳವಡಿಸಿಕೊಡುವಂತೆ ಆಗ್ರಹಿಸಿದರು. ಕಲವೀರಪ್ಪ ಬ್ಯಾಡಗಿ ಮಾತನಾಡಿ, ಗ್ರಾಮದ ಸುತ್ತ ಮುತ್ತ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ರೈತರ ಬೆಳೆಗಳು ಪ್ರತಿ ವರ್ಷ ಹಾಳಾಗುತ್ತಿವೆ. ಇದರಿಂದ ರೈತರ ಬದುಕು ಬೀದಿಗೆ ಬರುತ್ತಿದೆ. ರೈತರು ಎಲ್ಲ ಕೆಲಸ ಕಾರ‍್ಯ ಬಿಟ್ಟು ಕಾಡು ಪ್ರಾಣಿಗಳ ಹಾವಳಿ ತಡೆಯಲು ನಿಲ್ಲಬೇಕಿದೆ. ಆದ್ದರಿಂದ ಕೂಡಲೇ ಸರಕಾರ ಸೋಲಾರ ತಂತಿಬೇಲಿ ಅಳವಡಿಸಲಿ. ಇಲ್ಲದೇ ಹೋದಲ್ಲಿ ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಂದ ನಾಶವಾಗುವ ಬೆಳೆಗಳಿಗೆ ಅರಣ್ಯ ಇಲಾಖೆಯೇ ಸಂಪೂರ್ಣ ಪರಿಹಾರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಬಸಪ್ಪ ಅಂಗರಗಟ್ಟಿ, ಚಂದ್ರಪ್ಪ ನೆಲ್ಲಿಕೊಪ್ಪ, ನಾಗರಾಜ ಕರೂರು, ತಿರಕಪ್ಪ ಕರೂರು, ರಾಜಪ್ಪ ಅಂಗರಗಟ್ಟಿ, ನವೀನ ಅಂಗರಗಟ್ಟಿ, ಪರಮೇಶ ದೊಡ್ಡಮನಿ ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು.