ಈಗಾಗಲೇ ಸಾಕಷ್ಟು ಜವಾಬ್ದಾರಿಯನ್ನು ಹೊತ್ತು ಕಾರ್ಯನಿರ್ವಹಿಸುತ್ತಿರುವ ಸರಕಾರಿ ಶಾಲಾ ಶಿಕ್ಷಕರಿಗೆ ಶನಿವಾರ ಶಾಲಾ ಅವಧಿ ಮುಗಿದ ನಂತರ, ಅಜೀಂ ಪ್ರೇಮ್‌ಜೀ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕಾ ಮಟ್ಟ ಹೆಚ್ಚಿಸುವ ಸಲುವಾಗಿ ತಾಲೂಕಿನ ಆಯಾ ಟಿ.ಎಲ್.ಸಿ ಕೇಂದ್ರದಲ್ಲಿ ಸಮಾಲೋಚನೆ ಸಭೆ ಆಯೋಜಿಸಿದ್ದರಿಂದ ಮಾನಸಿಕ ಹಿಂಸೆಗೆ ಕಾರಣವಾಗುತ್ತಿದೆ ಅನ್ನೋ ಅಳಲು ಶಿಕ್ಷಕರದ್ದು.
ಬಸವರಾಜ ಎಂ.ಕಟ್ಟಿಮನಿ
ಕನ್ನಡಪ್ರಭ ವಾರ್ತೆ ಹುಣಸಗಿಈಗಾಗಲೇ ಸಾಕಷ್ಟು ಜವಾಬ್ದಾರಿಯನ್ನು ಹೊತ್ತು ಕಾರ್ಯನಿರ್ವಹಿಸುತ್ತಿರುವ ಸರಕಾರಿ ಶಾಲಾ ಶಿಕ್ಷಕರಿಗೆ ಶನಿವಾರ ಶಾಲಾ ಅವಧಿ ಮುಗಿದ ನಂತರ, ಅಜೀಂ ಪ್ರೇಮ್‌ಜೀ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ಕಲಿಕಾ ಮಟ್ಟ ಹೆಚ್ಚಿಸುವ ಸಲುವಾಗಿ ತಾಲೂಕಿನ ಆಯಾ ಟಿ.ಎಲ್.ಸಿ ಕೇಂದ್ರದಲ್ಲಿ ಸಮಾಲೋಚನೆ ಸಭೆ ಆಯೋಜಿಸಿದ್ದರಿಂದ ಮಾನಸಿಕ ಹಿಂಸೆಗೆ ಕಾರಣವಾಗುತ್ತಿದೆ ಅನ್ನೋ ಅಳಲು ಶಿಕ್ಷಕರದ್ದು.
2026-27 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರಿಗೆ ಸವಾಲಿನ ವರ್ಷವಾಗಿದ್ದು, ಶಿಕ್ಷಕರಿಗೆ ವಿದ್ಯಾರ್ಥಿಗಳ ನಿರಂತರ ಆ್ಯಪ್ ಹಾಗೂ ಶಿಕ್ಷಕರ ಕಾಮ್ಸ್ ಅಟೆಂಡೆನ್ಸ್, ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಕ್ಷರ ದಾಸೋಹ, ಪ್ರತಿಭಾ ಕಾರಂಜಿ, ಕ್ರೀಡಾಕೂಟ, ಶಾಲಾ ಕಟ್ಟಡ ನಿರ್ಮಾಣ, ಗೈರು ಹಾಜರಾತಿ ಆಂದೋ ಲನ, ಸಮುದಾಯದತ್ತ ಶಾಲೆ, ಜನಗಣತಿ, ಮಕ್ಕಳ ಗಣತಿ, ಆರ್ಥಿಕ ಗಣತಿ, ಆನೆಕಾಲು ರೋಗದ ಸಮೀಕ್ಷೆ ಹಾಗೂ ಕಬ್ಬಿಣಾಂಶ ಹೊಂದಿರುವ ಮಾತ್ರೆಗಳ ವಿತರಣೆ, ಮತದಾರರ ಪಟ್ಟಿ ಪರಿಷ್ಕರಣೆ ಕಂದಾಯ ಇಲಾಖೆ ಮಾಡಬೇಕಾದ ಕೆಲಸ ಶಿಕ್ಷಕರ ಹೆಗಲಿಗೆ... ಹೀಗೆ ವರ್ಷವಿಡೀ ಬಿಡುವಿಲ್ಲದಂತೆ ಶಿಕ್ಷಕರು ಪಾಲ್ಗೊಂಡರೆ ಅದೆಷ್ಟರ ಮಟ್ಟಿಗೆ ಮಕ್ಕಳಿಗೆ ಪಾಠ ಹೇಳಿಕೊಡುವುದು ಸಾಧ್ಯವಾಗುತ್ತದೆ. ಇದು ಒಂದು ಕಡೆಯಾದರೆ ಕಾಲಕಾಲಕ್ಕೆ ಇಲಾಖಾಧಿಕಾರಿಗಳು ಬೇಡುವ ವರದಿಗಳನ್ನು ಸಮಯದ ಪರಿಮಿತಿಯೊಳಗೆ ನೀಡುತ್ತಾ, ಶಿಕ್ಷಣದ ಗುಣಮಟ್ಟ ಕಾಯ್ದುಕಳ್ಳುವ ಸವಾಲು ಶಿಕ್ಷಕರಿಗೆ ಎದುರಾಗಿದೆ ಅಂತಾರೆ ನೊಂದ ಶಿಕ್ಷಕರ ವರ್ಗ.ಈ ಮಧ್ಯೆ, ವಿದ್ಯಾರ್ಥಿಗಳಿಗೆ ಕಲಿಕಾ ಮಟ್ಟ ಹೆಚ್ಚಿಸುವ ಸಲುವಾಗಿ, ತಾಲೂಕಿನ ಆಯಾ ಟಿ.ಎಲ್.ಸಿ ಕೇಂದ್ರದಲ್ಲಿ ಶಿಕ್ಷಕರಿಗೆ ಸಮಾಲೋಚನೆ ಸಭೆ ಆಯೋಜಿಸಿ ದ್ದರಿಂದ ಶಿಕ್ಷಕರಿಗೆ ಪರದಾಡುವಂತಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ ಶಿಕ್ಷಕರ ಹಾಗೂ ಶಿಕ್ಷಕರ ಸಂಘದ ಮನವಿ ಮೇರೆಗೆ ಸಮಾಲೋಚನೆ ಸಭೆ ರದ್ದುಪಡಿಸಿ ಶಿಕ್ಷಕರಿಗೆ ಅನುಕೂಲ ಮಾಡಿಕೊಡಲಾಗಿದೆ. ಅದೇ ರೀತಿಯಲ್ಲಿ ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಹಿತದೃಷ್ಟಿಯಿಂದ ಸಭೆ ರದ್ದುಪಡಿಸಿ ಶಿಕ್ಷಕರ ಹಿತ ಕಾಪಾಡಬೇಕೆಂದು ಶಿಕ್ಷಕರ ಒತ್ತಾಯವಾಗಿದೆ.
ನಿರಂತರ ಆ್ಯಪ್‌ನಲ್ಲಿ ಎರಡು ಸಲ ಹಾಜರಾತಿ ಬೋಧನೆ ಸಮಯ ವ್ಯರ್ಥ :ನಿರಂತರ ಆ್ಯಪ್ ನಲ್ಲಿ ಎರಡು ಎರಡು ಬಾರಿ ಹಾಜರಾತಿ ಹಾಕಬೇಕಾಗಿರುವುದರಿಂದ, ಬೋಧನೆಯ ಸಮಯ ತುಂಬಾ ವ್ಯರ್ಥವಾಗುವುದರ ಜೊತೆಗೆ ನೆಟ್ ವರ್ಕ್ ಸಿಗದ ಶಾಲೆಯ ನಿರಂತರ ಹಾಜರಾತಿ ಪರಿಸ್ಥಿತಿಯು ಹೇಳತೀರದು. ಅದಕ್ಕಾಗಿ ಇಲಾಖೆಯ ರಾಜ್ಯದ ಅಧಿಕಾರಿಗಳು ಒಂದು ದಿನಕ್ಕೆ ಒಂದೇ ಸಲ ನಿರಂತರ ಹಾಜರಾತಿ ಹಾಕುವ ವ್ಯವಸ್ಥೆ ಆಗಬೇಕು, ಜೊತೆಗೆ ನೆಟ್ ವರ್ಕ ಸಿಗದ ಜಾಗದಲ್ಲಿರುವ ಶಾಲೆಯಗಳನ್ನು ಆ್ಯಪ್‌ನಲ್ಲಿಯೂ ನಿರಂತರ ಹಾಜರಾತಿ ಹಾಕುವ ಹಾಗೆ ವ್ಯವಸ್ಥೆಯಾದರೆ ಅನುಕೂಲ ಅಂತಾರೆ.ಸುರಪುರ, ಹುಣಸಗಿ ಶಿಕ್ಷಕರಿಗೆ ಪ್ರತಿ ಶನಿವಾರ ಸಮಾಲೋಚನೆ ಸಭೆಯಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಯಾದಗಿರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಮಾಲೋಚನೆ ಸಭೆ ರದ್ದು ಮಾಡಿರುವ ಹಾಗೆ ಸುರಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆ ರದ್ದು ಪಡಿಸಿ ಶಿಕ್ಷಕರ ಹಿತ ಕಾಪಾಡಬೇಕು. ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಕರು ತಿಳಿಸಿದ್ದಾರೆ.
ಯಾವುದೇ ಶಿಕ್ಷಕರಿಗೆ ಒತ್ತಾಯವಿಲ್ಲದೆ ಮಕ್ಕಳ ಕಲಿಕಾ ಹಿತದೃಷ್ಟಿಯಿಂದ ಹೊಸತನದ ಕಾರ್ಯಕ್ರಮವನ್ನು ಅಳವಡಿಸಿಕೊಂಡು ಸಮಾಲೋಚನೆ ಸಭೆ ನಡೆಸಲಾಗುತ್ತದೆ. ಇದರಿಂದ ಶಿಕ್ಷಕರಿಗೆ ಮಾನಸಿಕ ಒತ್ತಡ ಆಗುತ್ತಿದ್ದರೆ ಉಪನಿರ್ದೇಶಕ ಗಮನಕ್ಕೆ ತಂದು ಸಭೆ ರದ್ದು ಪಡಿಸಲಾಗುತ್ತದೆ ಎಂದು ಡಾ: ನಿಂಗರಾಜ ಮೂಲಿಮನಿ ತಿಳಿಸಿದರು.