ಹಾವೇರಿ ವಿವಿ ಮುಚ್ಚುವ, ವಿಲೀನ ಪ್ರಕ್ರಿಯೆ ರದ್ದು ಮಾಡಲು ಆಗ್ರಹ

| Published : Apr 04 2025, 12:46 AM IST

ಹಾವೇರಿ ವಿವಿ ಮುಚ್ಚುವ, ವಿಲೀನ ಪ್ರಕ್ರಿಯೆ ರದ್ದು ಮಾಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು. ಶಾಂತಿಯುತವಾದ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಹೋರಾಟವನ್ನು ತೀವ್ರಗೊಳಸಬೇಕಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಸಿದರು.

ಹಾವೇರಿ: ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನಗೊಳಿಸುವುದನ್ನು ವಿರೋಧಿಸಿ ನಡೆಸುತ್ತಿರುವ ಹೋರಾಟಕ್ಕೆ ವಿವಿಧ ಮಠಾಧೀಶರು ಕೈಜೋಡಿಸಿದ್ದು, ಈ ಪ್ರಕ್ರಿಯೆಯನ್ನು ಸರ್ಕಾರ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಹಾವೇರಿ ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಪಾಲ್ಗೊಂಡು ವಿವಿ ಉಳಿಸಿ ಹೋರಾಟಕ್ಕೆ ಬಲ ತುಂಬಿದರು.

ಈ ಸಂದರ್ಭದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ರಾಜ್ಯ ಸರ್ಕಾರ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚುವ ಅಥವಾ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕೂಡಲೇ ರದ್ದುಪಡಿಸಬೇಕು. ಶಾಂತಿಯುತವಾದ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲೆಯ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕಾಗಿ ಹೋರಾಟವನ್ನು ತೀವ್ರಗೊಳಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯಾಗಿ ಇಪ್ಪತೈದು ವರ್ಷಗಳಾಗಿದ್ದರೂ ಅಭಿವೃದ್ಧಿಯಲ್ಲಿ ಹಿಂದೆಯೇ ಇದ್ದೇವೆ. ಶೈಕ್ಷಣಿಕವಾಗಿಯಾದರೂ ಮುಂದುವರಿದಿದ್ದೇವೆ ಎಂದು ಹೇಳಿಕೊಳ್ಳಲಾಗುತ್ತಿಲ್ಲ. ಈ ಕಾರಣದಿಂದಾಗಿ ಜಿಲ್ಲೆಯ ಬಡತನ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯಬೇಕು. ಶಿಕ್ಷಣಕ್ಕಾಗಿ ದಾವಣಗೆರೆ, ಧಾರವಾಡದಂತಹ ದೂರದ ನಗರಗಳಿಗೆ ಬಡ ಮಕ್ಕಳು ಅಲೆದಾಡುವಂತಾಗಬಾರದು. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸುಲಭವಾಗಿ ಸಿಗುವಂತಾಗಲು ಸರ್ಕಾರ ನಮ್ಮ ಮನವಿಗೆ ಕಣ್ತೆರೆದು ಸ್ಪಂದಿಸಬೇಕು. ಹಾವೇರಿ ವಿವಿಯನ್ನು ವಿಲೀನ ಅಥವಾ ವಿಸರ್ಜನೆ ಮಾಡದೇ ಅಗತ್ಯ ಅನುದಾನ ನೀಡಿ ಬೆಳೆಸುವ ಮೂಲಕ ಜಿಲ್ಲೆಗೆ ಶೈಕ್ಷಣಿಕ ಕೊಡುಗೆ ಕೊಡಬೇಕು ಎಂದು ಒತ್ತಾಯಿಸಿದರು.

ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲವಾಗಿರುವ ಹಾವೇರಿ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಕ್ರಿಯೆಯಿಂದ ಸರ್ಕಾರ ಹಿಂದೆ ಸರಿಯಬೇಕು. ಇದಕ್ಕಾಗಿ ಜಿಲ್ಲೆಯ ಜನತೆ ಶಾಂತಿಯುತವಾಗಿ ಧ್ವನಿ ಎತ್ತಿರುವುದನ್ನು ಸರ್ಕಾರ ಪರಿಗಣಿಸಬೇಕು ಎಂದರು.

ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಒಂದು ಬಾರಿ ನಮಗೆ ಸಿಕ್ಕ ಈ ವಿಶ್ವವಿದ್ಯಾಲಯದ ಅವಕಾಶವನ್ನು ಕಳೆದುಕೊಂಡರೆ ಮತ್ತೆ ಪಡೆದುಕೊಳ್ಳಲು ಸಾಧ್ಯವಿಲ್ಲ. ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ನಿರಂತರವಾಗಿ ವಂಚನೆಗೊಳಗಾಗುತ್ತಿದೆ. ಹಾಗೇನಾದರೂ ವಿಲೀನಗೊಳಿಸಲು ಮುಂದಾದರೆ ಎಲ್ಲ ಮಠಾಧೀಶರು ಹಾಗೂ ಜಿಲ್ಲೆಯ ಜನತೆ ಈಗಾಗಲೇ ವಿವಿ ಉಳಿಸಿಕೊಳ್ಳಲು ಕಂಕಣಬದ್ಧರಾಗಿದ್ದೇವೆ. ಮುಂದೆ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.

ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮಾತನಾಡಿದರು. ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು.

ಹಾವೇರಿ ಬಣ್ಣದ ಮಠದ ಅಭಿನರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಮೌಲ್ವಿಗಳಾದ ಜನಾಬ್ ಮುಕ್ತಿಯಾರ್ ಅಹಮದ್ ಭಾವಿಕಟ್ಟಿ, ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ಸತೀಶ ಕುಲಕರ್ಣಿ, ಬಸವರಾಜ ಪೂಜಾರ, ಎಂ. ಆಂಜನೇಯ, ಏಳುಕೋಟೆಪ್ಪ ಪಾಟೀಲ, ಹನುಮಂತ ಹಲಗೇರಿ, ಬಸವರಾಜ ಎಸ್., ಹೊನ್ನಪ್ಪ ಮರೆಮ್ಮನವರ, ಎಸ್.ಎನ್. ತಿಪ್ಪನಗೌಡ್ರ, ಗಿರೀಶ ಬಾರ್ಕಿ, ಉಡಚಪ್ಪ ಮಾಳಗಿ, ನಾರಾಯಣ ಕಾಳೆ, ಶೆಟ್ಟಿ ವಿಭೂತಿ ನಾಯಕ, ರಮೇಶ ಆನವಟ್ಟಿ, ನೀಲಪ್ಪ ಹರಿಜನ, ರಫೀಕ್ ಸಾಬ್ ಅತ್ತಾರ, ಸಿ.ಆರ್. ಮಾಳಗಿ, ಪರಿಮಳ ಜೈನ, ಸಿ.ಎಸ್. ಮರಳಿಹಳ್ಳಿ, ಜುಬೇದಾ ನಾಯ್ಕ್, ರಾಜೇಂದ್ರ ಹೆಗಡೆ, ಸತೀಶ ಎಂ.ಬಿ., ವಿರೂಪಾಕ್ಷ ಹಾವನೂರ, ಅನಿತಾ ಮಂಜುನಾಥ, ನೇತ್ರಾ ಅಂಗಡಿ, ಆನಂದ ಕೆಳಗಿನಮನಿ, ಮಂಜಪ್ಪ ಕಂಕನವಾಡ, ಎಸ್.ಆರ್. ಹಿರೇಮಠ, ಈರಣ್ಣ ಬೆಳವಡಿ, ಮಂಜುನಾಥ ಸಣ್ಣಿಂಗಣ್ಣನವರ ಸೇರಿದಂತೆ ಇತರರಿದ್ದರು.