ಸಾರಾಂಶ
ಗದಗ: ಅಸಂವಿಧಾನಿಕವಾಗಿ ರಚನೆಗೊಂಡ ರೈತರ, ಮಠ, ಮಂದಿರಗಳ ಆಸ್ತಿ ಪಾಸ್ತಿ ಕಬಳಿಸುತ್ತಿರುವ ವಕ್ಫ್ ಸಂಬಂಧ ಗೆಜೆಟ್ ಅಧಿಸೂಚನೆ ರದ್ದುಪಡಿಸುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಸಂಗನಗೌಡ ಎಸ್.ಪಾಟೀಲ ಮಾತನಾಡಿ, ಇತ್ತೀಚೆಗೆ ರಾಜ್ಯ ಸರ್ಕಾರದ ಗೆಜೆಟ್ ಅಧಿಸೂಚನೆಯ ನಂತರ ರಾಜ್ಯದಲ್ಲಿ ಸಾವಿರಾರು ಎಕರೆ ಭೂಮಿಯನ್ನು ಮಠ, ಮಂದಿರ, ಮಸೀದಿಗಳ ಆಸ್ತಿಗಳನ್ನು ವಕ್ಫ್ ಹೆಸರಿನಲ್ಲಿ ಪಹಣಿಯಲ್ಲಿ ನಮೂದಿಸಿ ರೈತರ, ಜನಸಾಮಾನ್ಯರ ನಿದ್ದೆ ಹಾಳು ಮಾಡಿ ಆತಂಕ ಸೃಷ್ಟಿಸಲಾಗುತ್ತಿದೆ. ಅನೇಕ ದಶಕಗಳಿಂದ ಭೂಮಿ ಉಳುಮೆ ಮಾಡುತ್ತಿರುವ ರೈತರ ಜಮೀನಿಗೆ ವಕ್ಫ್ ಆಸ್ತಿಯೆಂದು ಪಹಣಿಯಲ್ಲಿ ನಮೂದಿಸಲಾಗಿದೆ. ಗದಗ ಜಿಲ್ಲೆಯಾದ್ಯಂತಹ ಎಲ್ಲ ತಾಲೂಕುಗಳಲ್ಲಿ ಕಂದಾಯ ಇಲಾಖೆಯ ಭೂಮಿ ವಕ್ಫ್ ಹೆಸರಿನಲ್ಲಿ ವರ್ಗಾಯಿಸಿ ಪಹಣಿಯಲ್ಲಿ ದಾಖಲು ಮಾಡುತ್ತಿದೆ. ರೈತರ, ಸಾಮಾನ್ಯ ನಾಗರಿಕರ ಆತಂಕ, ಧರಣಿ, ಆಂದೋಲನ ವಿರೋಧದ ಕಾವು ಅರಿತ ಮುಖ್ಯಮಂತ್ರಿಗಳು ಪಹಣಿಯಲ್ಲಿಯ ಸದರಿ ನಮೂದು ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದರು, ಅಧಿಕಾರಿಗಳು ಕ್ರಮ ಜರುಗಿಸದೆ ಹೊಸದಾಗಿ ಪಹಣಿಗಳಲ್ಲಿ ಪಕ್ಷ ಅಂತಾ ದಾಖಲು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಾಮಾನ್ಯವಾಗಿ ತಂಟೆ-ತಕರಾರು ಬಂದರೆ ದೇಶದ ಪ್ರತಿಯೊಬ್ಬ ಪ್ರಜೆಯು ಟ್ರಯಲ್ ಕೋರ್ಟಿನಿಂದ ಸುಪ್ರೀಂ ಕೊರ್ಟಿನವರೆಗೂ ವಿಚಾರಣೆ ನಡೆಯುತ್ತದೆ. ಆದರೆ ಬೋರ್ಡಿಗೆ ಸಂಬಂಧಿಸಿದ ಯಾವುದೇ ತಕರಾರಿನ ವಿಚಾರಣೆ ಏಕಪಕ್ಷಿಯ ಸದಸ್ಯರನ್ನೊಳಗೊಂಡಿರುವ ಬೋರ್ಡಿನಲ್ಲಿ ನಡೆಯುತ್ತದೆ. ಮಂಡಳಿಯ ವಿರುದ್ಧವೇ ತಕರಾರಿದ್ದರೂ ಅದೇ ಮಂಡಳಿ ಸದಸ್ಯರು ಕೈಗೊಳ್ಳುವ ನಿರ್ಧಾರಗಳೇ ಇಲ್ಲಿ ಅಂತಿಮ, ಮಂಡಳಿ ನಿರ್ಧಾರದ ವಿರುದ್ಧ ಮೇಲ್ಮನವಿ ಹೋಗುವಂತಿಲ್ಲ. ಇದೊಂದು ಅಸಂವಿಧಾನಕ ಕ್ರಮ.
ಗದಗ ತಾಲೂಕಿನಲ್ಲಿ ಒಟ್ಟು ವಕ್ಫ್ ಆಸ್ತಿಗಳು 159 ಇದರ ಪೈಕಿ ಈಗಾಗಲೇ ವಕ್ಫ್ ಹೆಸರಿಗೆ 66 ದಾಖಲಾಗಿರುತ್ತವೆ. ಮುಂಡರಗಿ ತಾಲೂಕಿನಲ್ಲಿ 35, ನರಗುಂದ ತಾಲೂಕಿನಲ್ಲಿ 44, ರೋಣ ತಾಲೂಕಿನಲ್ಲಿ 44, ಲಕ್ಷೇಶ್ವರ ತಾಲೂಕಿನಲ್ಲಿ 32, ಶಿರಹಟ್ಟಿ ತಾಲೂಕಿನಲ್ಲಿ18 ಹಾಗೂ ಗಜೇಂದ್ರಗಡ ತಾಲೂಕಿನಲ್ಲಿ 22 ದಾಖಲಾಗಿರುತ್ತವೆ ಈ ಎಲ್ಲ ಪಹಣಿಗಳ ಕಾಲಂ ನಂ. 9 ಮತ್ತು 11 ರಲ್ಲಿ ದಾಖಲು ಮಾಡಿರುವ ವಕ್ಫ್ ದಾಖಲಿಸಿದ್ದನ್ನು ನೋಡಿ ಗದಗ ಜಿಲ್ಲೆಯ ರೈತರು ಆತಂಕದಲ್ಲಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೇ ದಾಖಲಾಗಿರುವುದನ್ನು ತಕ್ಷಣ ರದ್ದುಪಡಿಸಬೇಕು. ಅಲ್ಲದೇ ರಾಜ್ಯದಲ್ಲಿ ಸಮಸ್ತ ರೈತರು ಈ ವಿಷಯಕ್ಕೆ ಅಣುಗುಣವಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಆದದರಿಂದ ರಾಜ್ಯ ಸರ್ಕಾರ ಹೊರಡಿಸಿರುವ 1974 ರ ವಕ್ಫ್ ಸಂಬಂಧಿ ಕಾಯ್ದೆ ಅಧಿಸೂಚನೆ ರದ್ದು ಪಡಿಸಬೇಕು. ಒಂದು ವೇಳೆ ನೀವು ವಕ್ಫ್ ದಾಖಲಿಸಿದ್ದನ್ನು ಹಿಂಪಡೆಯದಿದ್ದರೇ ಉಗ್ರ ಹೋರಾಟ ಮಾಡಲಾಗುವುದು ಮತ್ತು ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಈ ವೇಳೆ ಪ್ರಧಾನ ಕಾರ್ಯದರ್ಶಿ ರಮೇಶ ಕೋಳಿವಾಡ, ಉಪಾಧ್ಯಕ್ಷ ಮಂಜುನಾಥ ಜಲರಡ್ಡಿ, ಉಮೇಶಗೌಡ ಪಾಟೀಲ, ಲಕ್ಷ್ಮಣ ಗಾಜಿ, ಸೋಮಶೇಖರ ಹಿರೇಮಠ, ಹಾಲಪ್ಪ ಶಿವಶೆಟ್ಟಿ, ಶಿವಪುತ್ರಪ್ಪ ನೆಲಗುಡ್ಡದ, ಶಕುಂತಲಾ ಕುಂದಿ, ಆನಂದಗೌಡ ನೀಲಪ್ಪಗೌಡ್ರ, ಬಸನಗೌಡ ಪಾಟೀಲ, ವಿಠ್ಠಲ ಮುಧೋಳೆ, ರಾಮನಗೌಡ ಪಾಟೀಲ ಸೇರಿದಂತೆ ನೂರಾರು ರೈತರು ಇದ್ದರು.