ವಿದ್ಯುತ್ ಪೂರೈಕೆ ಸಮಯ ಬದಲಿಸುವಂತೆ ಆಗ್ರಹ

| Published : Mar 12 2025, 12:50 AM IST

ಸಾರಾಂಶ

ವಿದ್ಯುತ್ ಪೂರೈಕೆಯ ಸಮಯ ಬದಲಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದಿಂದ ರೈತರು ಮಂಗಳವಾರ ಪ್ರತಿಭಟನೆ ನಡೆಸಿ ಬಳಿಕ ಇಲ್ಲಿನ ಜೆಸ್ಕಾಂ ಕಚೇರಿಯ ಎಇಇಗೆ ಮನವಿ ಸಲ್ಲಿಸಿದರು.

ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದಿಂದ ಜೆಸ್ಕಾಂ ಕಚೇರಿಯ ಎಇಇಗೆ ಮನವಿ

ಕನ್ನಡಪ್ರಭ ವಾರ್ತೆ ಕಂಪ್ಲಿ

ವಿದ್ಯುತ್ ಪೂರೈಕೆಯ ಸಮಯ ಬದಲಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದಿಂದ ರೈತರು ಮಂಗಳವಾರ ಪ್ರತಿಭಟನೆ ನಡೆಸಿ ಬಳಿಕ ಇಲ್ಲಿನ ಜೆಸ್ಕಾಂ ಕಚೇರಿಯ ಎಇಇಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾಧ್ಯಕ್ಷ ಬಿ.ಗಂಗಾಧರ್ ಮಾತನಾಡಿ, ತಾಲೂಕಿನ ರಾಮಸಾಗರ, ಕಣವಿ ತಿಮ್ಮಲಾಪುರ, ನಂ. 10 ಮುದ್ದಾಪುರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ಜಮೀನುಗಳ ಪಂಪ್ ಸೆಟ್ ಗಳಿಗೆ ರಾತ್ರಿ ವೇಳೆಯಲ್ಲಿ ವಿದ್ಯುತ್ ಪೂರೈಸುತ್ತಿದ್ದು, ಇದರಿಂದ ರೈತರಿಗೆ ತುಂಬಾ ಸಮಸ್ಯೆಯಾಗಿದೆ. ಅಲ್ಲದೇ ಜಮೀನಿನಲ್ಲಿ ಬೆಳೆದ ಬೆಳೆಗೆ ನೀರು ಪೂರೈಸಲು ರಾತ್ರಿ ಸಮಯದಲ್ಲಿ ತೆರಳುವುದರಿಂದ ಕಾಡು ಪ್ರಾಣಿಗಳು ಹಾಗೂ ಹಾವು, ಚೇಳುಗಳಂತಹ ವಿಷ ಜಂತುಗಳಿಂದ ಪ್ರಾಣ ಹಾನಿಯಾಗುವ ಸಾಧ್ಯತೆಗಳಿದ್ದು, ನಿತ್ಯ ರೈತರು ಜೀವದ ಹಂಗನ್ನು ತೊರೆದು ಕೃಷಿ ಕಾರ್ಯಕ್ಕೆ ತೆರಳುತ್ತಿದ್ದಾರೆ. ರೈತರ ಹಿತ ದೃಷ್ಟಿಯಿಂದಾಗಿ ಅಧಿಕಾರಿಗಳು ವಿದ್ಯುತ್ ಪೂರೈಕೆ ಸಮಯವನ್ನು ಬದಲಿಸಿ ಹಗಲಿನಲ್ಲಿ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು. ಅಲ್ಲದೇ ಅಧಿಕಾರಿಗಳು ನಮ್ಮ ಸಮಸ್ಯೆಗೆ ಪರಿಹಾರ ಒದಗಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಜೆಸ್ಕಾಂ ಕಚೇರಿಯ ಮುಂಭಾಗದಲ್ಲಿಯೇ ಹೋರಾಟ ಮುಂದುವರೆಸಿದರು.

ಬಳಿಕ ಸ್ಥಳಕ್ಕೆ ಜೆಸ್ಕಾಂ ಕಂಪ್ಲಿ ಉಪ ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಗೌಡ ಆಗಮಿಸಿ ರೈತರ ಮನವಿ ಪಡೆದು ಪ್ರತಿಕ್ರಿಯಿಸಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬೆಳಗ್ಗೆ 4 ರಿಂದ 11 ವರೆಗೆ, ಎರಡನೇ ವಾರ ಬೆಳಗ್ಗೆ 11 ರಿಂದ 6ರವರೆಗೆ ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

ಈ ಸಂದರ್ಭ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷಗುಬಾಜಿ ರಾಮಾಂಜನಿ, ಪ್ರಮುಖರಾದ ಕುರಿ ನಾಗಪ್ಪ, ಜೆ.ಮಂಜುನಾಥ್, ಸಿ.ಮಲ್ಲಿಕಾರ್ಜುನ, ಜೆ.ಕಿರಣ್, ಎನ್.ಶಿವಪ್ಪ, ಯು. ರಾಮು, ಹರ್ಷಿತ್, ಬಿ.ವೆಂಕಟೇಶ್, ಬಿ.ಪ್ರದೀಪ್, ಬಿ.ಶಂಕರ್, ಲಕ್ಷ್ಮಣ ಸೇರಿದಂತೆ ರೈತರಿದ್ದರು.