ಗ್ರಾಮೀಣ ಸಾರಿಗೆ ರಸ್ತೆಗಳ ಗುಂಡಿ ಮುಚ್ಚುವಂತೆ ಹಾಗೂ ಡಾಂಬರೀಕರಣ ಮಾಡುವಂತೆ ಒತ್ತಾಯ

ಹಗರಿಬೊಮ್ಮನಹಳ್ಳಿ: ತಾಲೂಕಿನ ಗ್ರಾಮೀಣ ಸಾರಿಗೆ ರಸ್ತೆಗಳ ಗುಂಡಿ ಮುಚ್ಚುವಂತೆ ಹಾಗೂ ಡಾಂಬರೀಕರಣ ಮಾಡುವಂತೆ ಒತ್ತಾಯಿಸಿ ತಂಬ್ರಹಳ್ಳಿ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ ಇವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಜಿ.ಪಂ.ಮಾಜಿ ಸದಸ್ಯ ಅಕ್ಕಿ ತೋಟೇಶ್ ಮಾತನಾಡಿ, ತಂಬ್ರಹಳ್ಳಿ-ಹಗರಿಬೊಮ್ಮನಹಳ್ಳಿ, ಮತ್ತು ಹಗರಿಕ್ಯಾದಿಗಿಹಳ್ಳಿ-ಉಪನಾಯಕನಹಳ್ಳಿವರೆಗಿನ, ಕೋಡಿಹಳ್ಳಿ ಸಾರಿಗೆ ರಸ್ತೆಯೂ ಸಂಪೂರ್ಣ ಹದೆಗೆಟ್ಟಿದ್ದು, ಕೂಡಲೇ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಬೇಕು. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರಿಂದ ರಸ್ತೆ ಅವಘಡಗಳು ಹೆಚ್ಚಾಗುತ್ತಿವೆ. ಪ್ರಯಾಣಿಕರು ಅತ್ಯಂತ ನೋವಿನಿಂದ ಸಂಚರಿಸುವಂತಾಗಿದೆ. ಲೋಕೋಪಯೋಗಿ ಇಲಾಖೆಯವರು ಕೂಡಲೇ ಈ ರಸ್ತೆಗಳತ್ತ ಚಿತ್ತಹರಿಸಿ ಸುಗಮವಾಗಿ ಸಂಚಾರ ಮಾಡಲು ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು.ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರಪ್ಪ ಮಾತನಾಡಿ, ರಸ್ತೆಗಳಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನಗಳ ಇಂಜಿನ್‌ಗಳು ರಿಪೇರಿಗೆ ಬಂದು ವಾಹನದ ಮಾಲೀಕರು ಅಧಿಕ ನಷ್ಟವನ್ನು ಅನುಭವಿಸುವಂತಾಗಿದೆ. ಪ್ರಯಾಣಿಕರು ಕೈಯಲ್ಲಿ ಜೀವಹಿಡಿದುಕೊಂಡು ಪ್ರಾಣಭಯದಿಂದ ಸಂಚರಿಸುAತಾಗಿದೆ. ಕೂಡಲೇ ಇಲಾಖೆಯವರು ಇತ್ತ ಗಮನಹರಿಸಿ ರಿಪೇರಿಗೆ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ಸಂಧರ್ಭದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಸೊನ್ನದ ಗುರುಬಸವರಾಜ, ಸದಸ್ಯ ಗೌರಜ್ಜನವರ ಗಿರೀಶ, ಪ್ರವೀಣ್, ಪರುಶುರಾಮ ಇತರರಿದ್ದರು.

ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆಗಳ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ತಂಬ್ರಹಳ್ಳಿ ಗ್ರಾಮಸ್ಥರು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದರು.