ದಾವಣಗೆರೆ ಮಹಾನಗರ, ಜಿಲ್ಲೆಯ ವ್ಯಾಪ್ತಿಯ ಗೋಮಾಂಸದ ಅಂಗಡಿಗಳನ್ನು ಬಂದ್ ಮಾಡಿಸುವಂತೆ ವಿಶ್ವ ಮುಸ್ಲಿಂ ಪರಿಷತ್ ರಾಜ್ಯ ಘಟಕದಿಂದ ನಗರದಲ್ಲಿ ಮಂಗಳವಾರ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಯಿತು.
- ಗೋಹತ್ಯೆ ನಿಷೇಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿಶ್ವ ಮುಸ್ಲಿಂ ಪರಿಷತ್‌ನ ಸುಭಾನ್ ಖಾನ್ ಆಗ್ರಹ । ಜಿಲ್ಲಾಡಳಿತಕ್ಕೆ ಮನವಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ ಮಹಾನಗರ, ಜಿಲ್ಲೆಯ ವ್ಯಾಪ್ತಿಯ ಗೋಮಾಂಸದ ಅಂಗಡಿಗಳನ್ನು ಬಂದ್ ಮಾಡಿಸುವಂತೆ ವಿಶ್ವ ಮುಸ್ಲಿಂ ಪರಿಷತ್ ರಾಜ್ಯ ಘಟಕದಿಂದ ನಗರದಲ್ಲಿ ಮಂಗಳವಾರ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಯಿತು.
ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರನ್ನು ಭೇಟಿ ಮಾಡಿದ ವಿಶ್ವ ಮುಸ್ಲಿಂ ಪರಿಷತ್ ಸಂಸ್ಥಾಪಕ, ರಾಜ್ಯಾಧ್ಯಕ್ಷ ಸುಭಾನ್ ಖಾನ್ ನೇತೃತ್ವದ ನಿಯೋಗವು ದಾವಣಗೆರೆಯ ಗೋಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಅರ್ಪಿಸಿದರು.ಸುಭಾನ್ ಖಾನ್ ಮಾತನಾಡಿ, ಕಾನೂನು ಪ್ರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧವಿದೆ. ದಾವಣಗೆರೆಯ ಆಜಾದ್ ನಗರ, ಬಾಷಾ ನಗರ, ಕೆಟಿಜೆ ನಗರದ ವ್ಯಾಪ್ತಿಯಲ್ಲಿ ಗೋಮಾಂಸ ಅಂಗಡಿಗಳು ಕಾರ್ಯನಿರ್ವಹಿಸುತ್ತಿವೆ. ವಿಶ್ವ ಮುಸ್ಲಿಂ ಪರಿಷತ್‌ನಿಂದ ಮೇ ತಿಂಗಳಲ್ಲಿ ಸುದ್ದಿಗೋಷ್ಠಿ ನಡೆಸಿ, ಗೋವು, ದನ, ಕರುಗಳನ್ನು ಕೊಲ್ಲಬೇಡಿ, ಹತ್ಯೆ ಮಾಡಬೇಡಿ, ವಧೆ ಮಾಡಬೇಡಿ ಎಂಬುದಾಗಿ ಮನವಿ ಮಾಡಿಕೊಂಡಿದ್ದೆವು. ಆದರೆ, ಗೋ ಮಾಂಸ ಅಂಗಡಿಗಳ ಮಾಲೀಕರು ವಿಶ್ವ ಮುಸ್ಲಿಂ ಪರಿಷತ್ ಮನವಿಗೆ ಸ್ಪಂದಿಸಿಲ್ಲ, ಕಿವಿಗೊಟ್ಟಿಲ್ಲ ಎಂದರು.
ಜೂ.1ರಂದು ಬಾಷಾ ನಗರ, ಆಜಾದ್ ನಗರ, ಕೆಟಿಜೆ ನಗರದ ವ್ಯಾಪ್ತಿಯಲ್ಲಿರುವ ಪರವಾನಿಗೆ ಇಲ್ಲದ ಗೋಮಾಂಸದ ಅಂಗಡಿಗಳನ್ನು ತೆರೆದುಕೊಂಡು, ರಾಜಾರೋಷವಾಗಿ ಗೋವುಗಳನ್ನು ಹತ್ಯೆ ಮಾಡಿ, ಮಾಂಸವನ್ನು ಎಗ್ಗಿಲ್ಲದೇ ಮಾರಾಟ ಮಾಡುತ್ತಿದ್ದಾರೆ. ಮಹಾ ನಗರ ಪಾಲಿಕೆಯಿಂದ ಯಾವುದೇ ಅಧಿಕೃತ ಆದೇಶವಾಗಲೀ, ಪರವಾನಿಗೆಯನ್ನಾಗಲೀ ಇಂತಹ ಗೋಮಾಂಸದ ಅಂಗಡಿಗಳು, ಗೋಮಾಂಸದ ವ್ಯಾಪಾರಸ್ಥರು ಪಡೆದಿಲ್ಲ. ಗೂಂಡಾಗಿರಿ ಮಾಡಿಕೊಂಡು, ಗೋಮಾಂಸದ ಅಂಗಡಿ ನಡೆಸುತ್ತಿದ್ದಾರೆ ಎಂದು ಅವರು ದೂರಿದರು.ಕಾನೂನು ಗಾಳಿಗೆ ತೂರಿ, ಪಾಲಿಕೆಯಿಂದ ಯಾವುದೇ ಲೈಸೆನ್ಸ್ ಇಲ್ಲದೇ ಗೋಮಾಂಸದ ಅಂಗಡಿ ತೆರೆದು, ಗೋಮಾಂಸವನ್ನು ಮಾರಾಟ ಮಾಡುತ್ತಿದ್ದಾರೆ. ಗೂಂಡಾಗಿರಿ ಮಾಡಿಕೊಂಡು, ಗೋಮಾಂಸದ ಅಂಗಡಿಯನ್ನು ತೆರೆದು, ವ್ಯವಹರಿಸುತ್ತಿದ್ದಾರೆ. ರಾಣೆಬೆನ್ನೂರು, ಹಾವೇರಿ ಇತರೆ ಕಡೆಗಳಿಂದ ಗೋವುಗಳನ್ನು ಖರೀದಿಸಿ, ತಂದು ಗೋಮಾಂಸ ದಂಧೆ ಮಾಡುತ್ತಿದ್ದಾರೆ. ಗೋವುಗಳನ್ನು ಅಕ್ರಮವಾಗಿ ದಾವಣಗೆರೆಗೆ ಸಾಗಿಸುವ ವೇಳೆ ಹಿಂದೂ ಪರ ಸಂಘಟನೆಗಳು ಅಂತಹ ಗೋವುಗಳು ತುಂಬಿದ ವಾಹನಗಳನ್ನು ಅಡ್ಡ ಹಾಕಿ, ತಡೆದು, ಚಾಲಕನಿಗೆ ಥಳಿಸುವುದು, ಹಲ್ಲೆ ಮಾಡುವುದು ಸಾಮಾನ್ಯವಾಗಿರುತ್ತದೆ. ಗೋವುಗಳನ್ನು ಸಾಗಿಸುವ ವಾಹನಗಳ ಚಾಲಕರಿಗೂ ಹೆಂಡತಿ, ಮಕ್ಕಳು, ಪಾಲಕರು ಇರುತ್ತಾರೆ. ಅಂತಹವರಿಗೂ ಇನ್ನಿಲ್ಲದ ತೊಂದರೆ ಆಗುತ್ತದೆ. ಆಕಸ್ಮಾತ್ ಚಾಲಕರು ಹೊಡೆತ ತಾಳಲಾರದೇ ಸಾವನ್ನಪ್ಪಿದರೆ ಯಾರು ಹೊಣೆ ಎಂದು ಸುಭಾನ್ ಖಾನ್ ಪ್ರಶ್ನಿಸಿದರು.
ಹಲವಾರು ಊರುಗಳಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ವಾಹನಗಳ ಚಾಲಕರ ಹತ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ನಗರ, ಜಿಲ್ಲೆಯಲ್ಲಿ ಗೋಮಾಂಸದ ಅಂಗಡಿಗಳನ್ನು ಮುಚ್ಚಿಸುವ ಕೆಲಸ ಮಾಡಬೇಕು. ಜಿಲ್ಲಾಧಿಕಾರಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ದಾವಣಗೆರೆಯ ಆಜಾದ್ ನಗರ, ಬಾಷಾ ನಗರ, ಕೆಟಿಜೆ ನಗರದ ವ್ಯಾಪ್ತಿಯಲ್ಲಿರುವ ಅನಧಿಕೃತ, ಅಕ್ರಮ ಗೋಮಾಂಸದ ಅಂಗಡಿಗಳನ್ನು ಪ್ರಥಮ ಆದ್ಯತೆ ಮೇರೆಗೆ ಮುಚ್ಚಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭ ಪರಿಷತ್ ನ ಮಹಮ್ಮದ್ ಯೂಸೂಫ್, ಅಲ್ಲಾಬಕ್ಷಿ, ನೂರುಲ್ಲಾ, ಶೇಕ್ ಅಹಮ್ಮದ್, ಫರ್ವೇಜ್, ಎಂ.ಎಸ್.ಅಬ್ದುಲ್ಲಾ, ಎಂ.ಮಂಜುನಾಥ, ನೂರ್ ಅಹಮ್ಮದ್ ಇತರರು ಇದ್ದರು.
- - -(ಬಾಕ್ಸ್)
* ಗೋ ಹತ್ಯೆ ತಡೆಗೆ ಅಭಿಯಾನ ಗೋವುಗಳ ವಿಚಾರದಲ್ಲಿ ದಾವಣಗೆರೆಯಲ್ಲೂ ಹೊಡೆದಾಟಗಳಾಗಿವೆ. ಕೆಲವರ ಮನಸ್ಸನ್ನು ನೋಯಿಸಿ, ಗೋ ಹತ್ಯೆ ಮಾಡುವುದು ಬೇಡವೆಂದು ಮುಸ್ಲಿಮರಿಗೂ ಮನವಿ ಮಾಡುತ್ತೇವೆ. ದೇಶದಲ್ಲಿ ಸರ್ವಧರ್ಮೀಯರೂ ಸಹೋದರರಿದ್ದಂತೆ. ವಿರೋಧ ಕಟ್ಟಿಕೊಂಡು ಗೋಹತ್ಯೆ ಮಾಡುವುದು ಬೇಡ. ಗೋಹತ್ಯೆ ನಿಷೇಧ ಅಭಿಯಾನ ಶುರು ಮಾಡಿದ್ದೇವೆ. ನಾವೇ ಮುಂದೆ ನಿಂತು, ಗೋ ಕಳ್ಳತನ, ಗೋ ಸಾಗಾಣಿಕೆ, ಗೋ ಹತ್ಯೆ ನಿಲ್ಲಿಸುತ್ತೇವೆ. ನಮಗೆ ಹಿಂಸೆ ಬೇಡ, ಅಹಿಂಸೆ ದಾರಿಯಲ್ಲಿ ನಾವು, ನೀವೆಲ್ಲಾ ಸಾಗೋಣ.- ಸುಭಾನ್ ಖಾನ್, ಸಂಸ್ಥಾಪಕ ಅಧ್ಯಕ್ಷ, ವಿಶ್ವ ಮುಸ್ಲಿಂ ಪರಿಷತ್.
- - --9ಕೆಡಿವಿಜಿ1:
ದಾವಣಗೆರೆಯಲ್ಲಿ ಗೋಮಾಂಸದ ಅಂಗಡಿ ಬಂದ್ ಮಾಡಿಸುವಂತೆ ವಿಶ್ವ ಮುಸ್ಲಿಂ ಪರಿಷತ್ ರಾಜ್ಯ ಘಟಕದಿಂದ ಮಂಗಳವಾರ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಸುಭಾನ್ ಖಾನ್ ನೇತೃತ್ವದಲ್ಲಿ ಒತ್ತಾಯಿಸಿ ಮನವಿ ಅರ್ಪಿಸಲಾಯಿತು.