ಇಸ್ಪೀಟ್ ಕ್ಲಬ್ ಬಂದ್ ಮಾಡಲು ಆಗ್ರಹ

| Published : Jul 13 2024, 01:38 AM IST

ಸಾರಾಂಶ

ತಕ್ಷಣ ಈ ಬಗ್ಗೆ ಪರಿಶೀಲನೆ ನಡೆಸಿ ಇಸ್ಪೀಟ್ ಕ್ಲಬ್‌ ಬಂದ್ ಮಾಡಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರೆಲ್ಲ ಸೇರಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಪಂ ವ್ಯಾಪ್ತಿಯ ಅಗಡಿ ಗ್ರಾಮದ ಕಲಘಟಗಿ ರಸ್ತೆಯಲ್ಲಿ ಅನುಮತಿ ಪಡೆಯದೆ ಇಸ್ಪೀಟ್ ಕ್ಲಬ್ ತೆರೆದಿದ್ದು, ಗ್ರಾಮದ ಅಪ್ರಾಪ್ತ ಯುವಕರು ಹಾಳಾಗುತ್ತಿದ್ದಾರೆ. ಹಾಗಾಗಿ ತಕ್ಷಣ ಕ್ಲಬ್ಅನ್ನು ಬಂದ್ ಮಾಡಿಸಬೇಕು ಎಂದು ಅಗಡಿ ಗ್ರಾಮಸ್ಥರು ಶುಕ್ರವಾರ ಹುನಗುಂದ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಅಧ್ಯಕ್ಷರ ಮೂಲಕ ತಹಸೀಲ್ದಾರ್‌ ಮತ್ತು ಪೊಲೀಸ್‌ ಇಲಾಖೆಗೆ ಮನವಿ ಸಲ್ಲಿಸಿದರು.

ನಿತ್ಯ ಕ್ಲಬ್‌ನಲ್ಲಿ ಜೂಜು ಆಡುವುದು ಮಾತ್ರವಲ್ಲದೇ ಕುಡಿದು ಜಗಳವಾಡುತ್ತಾರೆ. ಇದರಿಂದ ಗ್ರಾಮಸ್ಥರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರೆ ಹೈಕೋರ್ಟ್‌ನಿಂದ ಅನುಮತಿ ಪಡೆದಿದ್ದೇವೆ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಉಡಾಫೆಯ ಮಾತು ಹೇಳುವ ಮೂಲಕ ಗೂಂಡಾಗಳಂತೆ ವರ್ತಿಸುತ್ತಾರೆ. ತಕ್ಷಣ ಈ ಬಗ್ಗೆ ಪರಿಶೀಲನೆ ನಡೆಸಿ ಕ್ಲಬ್‌ ಬಂದ್ ಮಾಡಿಸಬೇಕು. ಇಲ್ಲದಿದ್ದರೆ ಗ್ರಾಮಸ್ಥರೆಲ್ಲ ಸೇರಿ ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಗ್ರಾಮಸ್ಥರಾದ ಬಸವರಾಜ ಲಮಾಣಿ, ಶಂಕರ ಲಮಾಣಿ, ರಾಜು ಲಮಾಣಿ, ಮಂಜುನಾಥ ಲಮಾಣಿ, ಸಂಜು ಲಮಾಣಿ, ಯುವರರಾಜ ಲಮಾಣಿ, ಲಕ್ಷ್ಮಣ ಲಮಾಣಿ, ಅಪ್ಪಿ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.ವ್ಯಕ್ತಿ ಮೇಲೆ ಹಲ್ಲೆ: ಅಪರಾಧಿಗೆ ಶಿಕ್ಷೆ

ಶಿರಸಿ: ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಅಪರಾಧಿಗೆ ೧ ವರ್ಷ ಸಾದಾ ಕಾರಾಗೃಹ ಶಿಕ್ಷೆ, ₹೧೦ ಸಾವಿರ ದಂಡ, ಅದರಲ್ಲಿ ₹೮ ಸಾವಿರ ದೂರುದಾರರಿಗೆ ಪರಿಹಾರ ನೀಡುವಂತೆ ನಗರದ ಸೀನಿಯರ್ ಸಿಜೆ ಮತ್ತು ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.ಸಿರಾಜ್ ಆಯ್ಯುಬ್ ಖಾನ್ ಜವಳಿ ಎಂಬಾತನಿಗೆ ಶಿಕ್ಷೆ ವಿಧಿಸಿ, ದಂಡ ವಿಧಿಸಿದೆ. 2017ರ ಜು. ೯ರಂದು ಆರೋಪಿತನಾದ ಸಿರಾಜ್ ಆಯ್ಯುಬ್ ಖಾನ ಜವಳಿ ವ್ಯಕ್ತಿಯೊಬ್ಬರಿಗೆ ಅವಾಚ್ಯವಾಗಿ ಬೈಯ್ದು ಹಲ್ಲೆ ಮಾಡಿರುವ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಗರ ಠಾಣೆಯ ಅಂದಿನ ಪಿಎಸ್‌ಐ ಮಾದೇಶ ಎಂ. ತನಿಖೆಯನ್ನು ಕೈಗೊಂಡು ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ಕುರಿತು ನಗರದ ಸೀನಿಯರ್ ಸಿಜೆ ಮತ್ತು ಪ್ರಧಾನ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ಶಾರದಾದೇವಿ ಸಿ. ಹಟ್ಟಿ ಅವರು, ಆರೋಪಿತನ ವಿರುದ್ಧ ಆರೋಪವು ಸಾಬೀತಾಗಿದ್ದರಿಂದ ಸಿರಾಜ್ ಆಯ್ಯುಬ್ ಖಾನ್ ಜವಳಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್ ಚೇತನಾ ಜಿ.ಎಸ್. ವಾದ ಮಂಡಿಸಿದ್ದರು.