ಸಾರಾಯಿ ಅಂಗಡಿ ಮುಚ್ಚುವಂತೆ ಆಗ್ರಹ

| Published : Jun 12 2024, 12:37 AM IST

ಸಾರಾಂಶ

ಗ್ರಾಮದ ಸಾರಾಯಿ ಅಂಗಡಿಯ ಶಾಶ್ವತವಾಗಿ ಮುಚ್ಚುವಂತೆ ಆಗ್ರಹಿಸಿ ಕೆಸಾಪೂರ ಹಾಗೂ ಆಲೂರು ಗ್ರಾಮದ ಮಹಿಳೆಯರು ಸಾರಾಯಿ ಅಂಗಡಿಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಗ್ರಾಮದ ಸಾರಾಯಿ ಅಂಗಡಿಯ ಶಾಶ್ವತವಾಗಿ ಮುಚ್ಚುವಂತೆ ಆಗ್ರಹಿಸಿ ಕೆಸಾಪೂರ ಹಾಗೂ ಆಲೂರು ಗ್ರಾಮದ ಮಹಿಳೆಯರು ಸಾರಾಯಿ ಅಂಗಡಿಗಳನ್ನು ಬಂದ್ ಮಾಡಿಸಿ ಪ್ರತಿಭಟನೆ ನಡೆಸಿದರು‌‌.

ತಾಲೂಕಿನ ಕೆಸಾಪೂರ ಹಾಗೂ ಆಲೂರು ಗ್ರಾಮದ ಸಾರಾಯಿ ಅಂಗಡಿಗಳಿಗೆ ಸೋಮವಾರ ಆಗಮಿಸಿದ್ದ ಗ್ರಾಮದ ನೂರಾರು ಮಹಿಳೆಯರು ಸಾರಾಯಿ ಅಂಗಡಿಗಳಿಂದ ತಮ್ಮ ಕುಟುಂಬದ ಸುಃಖ, ಶಾಂತಿ ಮಾಯವಾಗಿದೆ. ದುಡಿಮೆ ಮಾಡಿದ ಹಣವನ್ನು ನಮ್ಮ ಪತಿಗಳು ಇದಕ್ಕೆ ಹಾಕುತ್ತಿದ್ದಾರೆ. ಇದರಿಂದ ಮನೆಯಲ್ಲಿ ಜಗಳವಾಗುತ್ತಿವೆ ಎಂದು ಸಾರಾಯಿ ಅಂಗಡಿಗಳನ್ನು ಸಂಪೂರ್ಣ ಮುಚ್ಚಿಸುವಂತೆ ಆಗ್ರಹಿಸಿದರು.

ದಿನದಿಂದ ದಿನಕ್ಕೆ ಈ ಎರಡು ಗ್ರಾಮಗಳಲ್ಲಿ ಕುಡಿತಕ್ಕೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಣ್ಣ ವಯಸ್ಸಿನ ಯುವಕರು ಸಹ ಮದ್ಯಪಾನ ವ್ಯಸನಿಗಳು ಆಗುತ್ತಿದ್ದಾರೆ. ಕೆಲ ಗಂಡಸರು ತಾವು ದುಡಿದ ಹಣವನ್ನೆಲ್ಲ ಕುಡಿತಕ್ಕೆ ಖರ್ಚು ಮಾಡುತ್ತಿದ್ದು, ಮಕ್ಕಳು ಸೇರಿದಂತೆ ಕುಟುಂಬಸ್ಥರು ಹಸಿವಿಯಲ್ಲಿ ಕಾಲ ಕಳೆಯುವಂತಾಗಿದೆ. ಹೆಣ್ಣುಮಕ್ಕಳು ದುಡಿದದ್ದನ್ನು ಸಹ ಗಂಡಸರು ಕಸಿದುಕೊಂಡು ಕುಡಿಯಲು ಖರ್ಚು ಮಾಡುತ್ತಿದ್ದು, ಕೂಡಲೇ ನಮ್ಮ ಬಡಕುಟುಂಬಗಳಿಗೆ ಕಂಟಕವಾದ ಸಾರಾಯಿ ಅಂಗಡಿಗಳನ್ನು ಬಂದ್ ಮಾಡಿಸಬೇಕೆಂದು ಮಹಿಳೆಯರು ಆಗ್ರಹಿಸಿ, ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಉಗ್ರಹೋರಾಟ ನಡೆಸುವುದಾಗಿ ಇಲ್ಲಿನ ಅಬಕಾರಿ ಇಲಾಖೆಗೆ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕ ವೈ.ಬಿ ತಳವಾರ, ಸಂಗನಗೌಡ ಪಾಟೀಲ್, ಗದ್ದೆಪ್ಪ ಭೋವೆರ, ಸುರೇಶ್ ಭೈರವಾಡಗಿ, ಜಿ.ಜಿ ಗೌಡರ್, ನಾಗೇಶ ಹಡಪದ, ಸಂಗಮ್ಮ ಭೋವೆರ್, ಗಿರೆಮ್ಮ ಪೂಜಾರಿ, ಈರಮ್ಮ ಉಪ್ಪಿನಕಾಯಿ, ಅಯ್ಯಮ್ಮ ಹಿರೇಕುರುಬರ, ಗದ್ದೆವ್ವ ಮಾದರ, ತಿಪ್ಪವ್ವ ಮಾದರ ಸೇರಿದಂತೆ ಅನೇಕರಿದ್ದರು.