ಸಾರಾಂಶ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಜಲ ಜೀವನ್ ಮಿಷನ್ ಅಡಿಯಲ್ಲಿ ಪೈಪ್ ಲೈಲ್‌ಗಾಗಿ ಅಗೆದಿರುವ ಕಾಲುವೆಯನ್ನು ಮುಚ್ಚದೆ ಗುತ್ತಿಗೆದಾರ ಕಡೆಗಣಿಸಿರುವುದರಿಂದ ವಾಹನಗಳ ಸವಾರರಿಗೆ ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಕೂಡಲೇ ಅಗೆದಿರುವ ರಸ್ತೆಯನ್ನು ಮುಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.ತಾಲೂಕಿನ ಎಳೇಸಂದ್ರ ಗ್ರಾಮ ಪಂಚಾಯತಿಯ ದಿನ್ನೂರುದಿಂದ ದಿನ್ನಕೊತ್ತೂರು ಗ್ರಾಮದವರೆಗೂ ಜಲ ಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆಗೂ ನಲ್ಲಿ ಮೂಲಕ ನೀರು ಕಲ್ಪಿಸುವ ಕಾಮಗಾರಿಯನ್ನು ಗ್ರಾಮದಲ್ಲಿ ಗುತ್ತಿಗೆದಾರ ಕಳೆದ ಐದು ತಿಂಗಳ ಹಿಂದೆ ಆರಂಭಿಸಿ ಪೈಪ್ ಲೈಲ್ ಅಳವಡಿಸಲು ರಸ್ತೆ ಪಕ್ಕದಲ್ಲಿ ಕಾಲುವೆ ತೆಗೆದು ಅದರ ಮಣ್ಣನನ್ನು ರಸ್ತೆ ಪಕದಲ್ಲೆ ಹಾಕಿದ್ದಾರೆ.
ಕಾಲುವೆಗೆ ಮಣ್ಣು ಮುಚ್ಚಿಲ್ಲಆದರೆ ಪೈಪ್ ಲೈನ್ ಕಾಮಗಾರಿ ಮುಗಿದ ಬಳಿಕ ಮತ್ತೆ ಅಗೆದಿರುವ ಕಾಲುವೆಯನ್ನು ಮುಚ್ಚದೆ ಕಡೆಗಣಿಸಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗಿದೆ.ಅಲ್ಲದೆ ಕಾಲುವೆಯಲ್ಲಿರುವ ಮಣ್ಣು ರಸ್ತೆ ಪಕ್ಕದಲ್ಲಿ ಹಾಕಿರುವುದರಿಂದ ಅದು ರಸ್ತೆ ತುಂಬ ಆವರಿಸಿಕೊಂಡಿದೆ. ಮಣ್ಣಿನಿಂದಾಗಿ ರಸ್ತೆ ಕಿರಿದಾಗುತ್ತಿದೆ. ಧೂಳಿನಿಂದಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ. ಮೊದಲೇ ರಸ್ತೆ ಕಿರಿದಾಗಿರುವುದರಿಂದ ಎರಡು ದೊಡ್ಡ ವಾಹನಗಳು ಬಂದರೆ ಮತ್ತಷ್ಟು ಕಿರಿಕಿರಿ ರಾತ್ರಿಯ ವೇಳೆ ದ್ವಿಚಕ್ರ ವಾಹನ ಸವಾರರು ಕಾಲುವೆಯಲ್ಲಿ ಬೀಳುವ ಸಂಬವ ಹೆಚ್ಚಿದೆ.ಮೊದಲೇ ತಾಲೂಕಿನಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ, ಇಂತಹದರಲ್ಲಿ ಮನೆ ಮನೆಗೂ ನಲ್ಲಿ ಮೂಲಕ ನೀರು ಪೂರೈಸುವ ಯೋಜನೆ ಕಾಮಗಾರಿ ಪೂರ್ಣಗೊಳಿಸದೆ ಅರ್ಧಕ್ಕೆ ನಿಂತಿದೆ.
ಕಾಮಗಾರಿ ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗುತ್ತಿಗೆದಾರ ವಿಳಂಬ ಮಾಡದೆ ಅಗೆದಿರುವ ಕಾಲುವೆಯನ್ನು ಮುಚ್ಚಿಸಿ ವಾಹನ ಸಂಚಾರಕ್ಕೆ ಸುಗಮ ಮಾಡಿಕೊಟ್ಟು ಕೇಂದ್ರದ ಮಹತ್ವಕಾಂಕ್ಷೆ ಯೋಜನೆಯನ್ನು ಪೂರ್ಣಗೊಳಿಸುವಂತೆ ಆಗ್ರಹಿಸಿದ್ದಾರೆ.