ಆಶಾ, ಅಂಗನವಾಡಿ ಸಿಬ್ಬಂದಿ ಸರ್ಕಾರಿ ನೌಕರರನ್ನಾಗಿ ಪರಿಗಣಿಸಲು ಆಗ್ರಹ

| Published : May 22 2025, 01:16 AM IST

ಸಾರಾಂಶ

ಕಾರ್ಮಿಕ ವಿರೋಧಿ ಮತ್ತು ಬಂಡವಾಳಶಾಹಿ ಪರ ಲೇಬರ್ ಕೋಡ್‌ಗಳನ್ನು ರದ್ದುಪಡಿಸಬೇಕು. ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವರು ಆಶಾ ಕಾರ್ಯಕರ್ತೆಯರಿಗೆ ಘೋಷಿಸಿದ ಪ್ರೋತ್ಸಾಹಧನ ಹೆಚ್ಚಳದ ಬಗ್ಗೆ ಕೂಡಲೇ ಆದೇಶ ನೀಡಬೇಕು.

ಹಾವೇರಿ: ದೇಶವ್ಯಾಪಿ ಕಾರ್ಮಿಕರ ಹೋರಾಟದ ಅಂಗವಾಗಿ ಎಐಯುಟಿಯುಸಿಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಪ್ರಧಾನಮಂತ್ರಿಗಳಿಗೆ ಮತ್ತು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಬೇಡಿಕೆಗಳ ಮನವಿ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ರತ್ನಾ ಗಿರಣಿ ಮಾತನಾಡಿ, ಕಾರ್ಮಿಕ ವಿರೋಧಿ ಮತ್ತು ಬಂಡವಾಳಶಾಹಿ ಪರ ಲೇಬರ್ ಕೋಡ್‌ಗಳನ್ನು ರದ್ದುಪಡಿಸಬೇಕು. ಇತ್ತೀಚೆಗೆ ಕೇಂದ್ರ ಆರೋಗ್ಯ ಸಚಿವರು ಆಶಾ ಕಾರ್ಯಕರ್ತೆಯರಿಗೆ ಘೋಷಿಸಿದ ಪ್ರೋತ್ಸಾಹಧನ ಹೆಚ್ಚಳದ ಬಗ್ಗೆ ಕೂಡಲೇ ಆದೇಶ ನೀಡಬೇಕು. ಹಾಗೆಯೇ ರಾಜ್ಯ ಸರ್ಕಾರ ಕೂಡ ಈಗಾಗಲೇ ಘೋಷಿಸಿದಂತೆ ₹10 ಸಾವಿರ ನಿಗದಿತ ಮಾಸಿಕ ಪ್ರೋತ್ಸಾಹಧನ ನೀಡುವ ಕುರಿತಾಗಿ ಕೂಡಲೇ ಆದೇಶಿಸಬೇಕು.

ಅಲ್ಲದೆ ಆಶಾ ಅಂಗನವಾಡಿ ಬಿಸಿ ಊಟ ಸ್ಕೀಮ್ ಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಎಂಟು ಗಂಟೆಗಳ ದುಡಿಮೆಯ ಅವಧಿಯನ್ನು ಲಾಭದಾಹಿ ಮಾಲೀಕ ವರ್ಗದ ಪರವಾಗಿ ಬದಲಾವಣೆ ಮಾಡಬಾರದು. ಈ ಬೇಡಿಕೆಗಳನ್ನು ಇಟ್ಟುಕೊಂಡು ಜು. 9ರಂದು ದೇಶವ್ಯಾಪಿ ಸಾರ್ವತ್ರಿಕ ಪುಷ್ಕರವಿದ್ದು, ನಮ್ಮ ಸಮಿತಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ ಮತ್ತು ಮುಷ್ಕರದಲ್ಲಿ ಭಾಗವಹಿಸುತ್ತದೆ ಎಂದರು.ನಿಯೋಗದಲ್ಲಿ ಮಂಗಳಾ ಪಾಟೀಲ್, ಲಕ್ಷ್ಮಿ ಬಸನಳ್ಳಿ, ಗಂಗಮಳವ್ವ, ಮಮತಾ ಉಕ್ಕುಂದ, ಮಲ್ಲಮ್ಮ ಗಾಜಿ, ಉಮಾ ಕಡಕೋಳ, ರಿಹಾನಾ ಬಾನು ಮೆಲ್ಲಳ್ಳಿ, ವಿದ್ಯಾ ಉಳಗುತ್ತಿ, ಲಕ್ಷ್ಮಿ ಹರಾಕುಣಿ, ಶಂಕ್ರಮ್ಮ ಕರ್ಜಗಿ ಇತರರು ಇದ್ದರು.ಪ್ರೋತ್ಸಾಹಧನ ಹೆಚ್ಚಳ ಮಾಡಿ

ಕೇಂದ್ರದಲ್ಲಿ ಇತ್ತೀಚಿನ ಪಾರ್ಲಿಮೆಂಟ್ ಅಧಿವೇಶನದ ಸಮಯದಲ್ಲಿ ಕೇಂದ್ರ ಆರೋಗ್ಯ ಮಂತ್ರಿಗಳು ಘೋಷಿಸಿದಂತೆ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಹೆಚ್ಚಳ ಕೂಡಲೇ ಮಾಡಬೇಕು.ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಮಿಕರ ಸೇವೆಗಳನ್ನು ಕಾಯಂಗೊಳಿಸಿ, ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ. ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ತುರ್ತು ಕ್ರಮ ಕೈಗೊಳ್ಳಿ. ವಿದ್ಯುತ್ ಕಾಯ್ದೆ ತಿದ್ದುಪಡೆ ಮಸೂದೆ 2023 ಹಿಂಪಡೆಯರಿ. ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ಕೆಲಸದ ಅವಧಿಯನ್ನು ಪ್ರಸ್ತುತದಲ್ಲಿರುವ ದಿನಕ್ಕೆ 8 ಗಂಟೆ ಮತ್ತು ವಾರಕ್ಕೆ 48 ಗಂಟೆ ಮಿತಿಯನ್ನು ಖಾತ್ರಿಗೊಳಿಸಿ. ಮಹಿಳೆಯರಿಗೆ ಪಾಳಿ ಅವಕಾಶ ನೀಡುವ ಆದೇಶವನ್ನು ಪಡೆಯಿರಿ. ಕಾರ್ಮಿಕ ವಿರೋಧಿ ಬಂಡವಾಳಶಾಹಿಪರ ನಾಲ್ಕು ಲೇಬರ್ ಕೋಡ್‌ಗಳನ್ನು ರದ್ದುಗೊಳಿಸಬೇಕು.

ಎಲ್ಲ ಅಸಂಘಟಿತ ವಲಯದ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿ ಸಾಮಾಜಿಕ ಭದ್ರತೆ ಸವಲತ್ತುಗಳನ್ನು ಖಾತ್ರಿಪಡಿಸಬೇಕು. ಎಲ್ಲ ನಿರುದ್ಯೋಗಿಗಳಿಗೆ ಉದ್ಯೋಗ ನೀಡಿ, ಉದ್ಯೋಗದ ಹಕ್ಕನ್ನು ಮೂಲಭೂತ ಸಾಂವಿಧಾನಿಕ ಹಕ್ಕನ್ನಾಗಿ ಮಾಡಬೇಕು.