ಸಾರಾಂಶ
ಹಾನಗಲ್ಲ: ಪಟ್ಟಣದಲ್ಲಿ ನಿಯಮಬಾಹಿರವಾಗಿ ತಲೆ ಎತ್ತಿರುವ ಮಾಂಸದ ಅಂಗಡಿಗಳನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿ ತಾಲೂಕು ಅಲ್ಪಸಂಖ್ಯಾತರ ಹಿತರಕ್ಷಣಾ ಸಮಿತಿ ವತಿಯಿಂದ ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.ಕಾನೂನು ಮತ್ತು ಆರೋಗ್ಯ ನಿಯಮಗಳನ್ನು ಉಲ್ಲಂಘಿಸಿ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಸರ್ಕಾರದಿಂದ ಮಾನ್ಯತೆ ಪಡೆದ ಅಥವಾ ಪುರಸಭೆ ಅಧಿಕಾರಿಗಳ ಪರಿಶೀಲನೆ ಇಲ್ಲದೆ ಅನಧಿಕೃತವಾಗಿ ಕುರಿ, ಆಡು, ಕೋಳಿಗಳ ವಧೆ ಮಾಡಿ ಮಾಂಸ ಮಾರಾಟ ಮಾಡಲಾಗುತ್ತದೆ.ಕೆಲಬಾರಿ ರೋಗಗ್ರಸ್ತ ಪ್ರಾಣಿಗಳ ಬಲಿಯಾಗುತ್ತದೆ. ಅಲ್ಲದೆ, ಮಾಂಸದ ಅಂಗಡಿಗಳ ತ್ಯಾಜ್ಯ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ನಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಲಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಹೀಗಾಗಿ ಪರವಾನಗಿ ಇಲ್ಲದೆ ಮಾಂಸ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಮಾಂಸ ಮಾರಾಟ ಮಳಿಗೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ವೈದ್ಯರನ್ನು ನಿಯೋಜನೆಗೊಳಿಸಿ ವಧೆಯಾಗುವ ಪ್ರಾಣಿಗಳ ಆರೋಗ್ಯ ತಪಾಸಣೆ ನಡೆಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಅಲ್ಪಸಂಖ್ಯಾತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಿಖಂದರ್ ವಾಲಿಕಾರ, ಉಪಾಧ್ಯಕ್ಷ ಮಹ್ಮದ್‌ಜಾಫರ್ ಬಾಳೂರ ಮತ್ತು ದುದ್ದುಸಾಬ್ ಅಕ್ಕಿವಳ್ಳಿ, ಮುಕ್ತಿಯಾರ್ ಕೇಣಿ, ನಾಸೀರ್ ಖಾಜಿ, ಶಾರಿಕ್ ಕಿಲೇದಾರ್, ಹಸನ್‌ಮಿಯಾ ಮಂತಗಿ, ನಿಯಾಝ್ ಸರ್ವಿಕೇರಿ, ಬಾಬಾಜಾನ್ ಕೊಂಡವಾಡೆ, ಮುಜೀಬ್ ಬಾಳೂರ, ಗೌಸ್‌ಮೊದ್ದೀನ್ ಮುಜಾವರ್ ಇದ್ದರು.ಕಾರಿನಲ್ಲಿಟ್ಟಿದ್ದ ₹2.50 ಲಕ್ಷ ಹಣ ಎಗರಿಸಿದ ಕಳ್ಳರು
ಹಾವೇರಿ: ಕಾರಿನಲ್ಲಿಟ್ಟಿದ್ದ ವ್ಯಾಪಾರಿಯೊಬ್ಬರ ಎರಡೂವರೆ ಲಕ್ಷ ರು. ಹಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.ಹಾನಗಲ್ಲ ತಾಲೂಕು ಮಾಸನಕಟ್ಟಿ ಗ್ರಾಮದ ವ್ಯಾಪಾರಿ ಶಂಕರಗೌಡ ವಿರೂಪಾಕ್ಷಗೌಡ ಪಾಟೀಲ ಎಂಬವರಿಗೆ ಸೇರಿದ ಹಣ ಇದಾಗಿದೆ. ಇವರು ಜು. 2ರಂದು ಮಧ್ಯಾಹ್ನ ಮಾಸನಕಟ್ಟಿ ಕೆನರಾ ಬ್ಯಾಂಕಿನಲ್ಲಿ ₹3 ಲಕ್ಷ ಹಣವನ್ನು ಡ್ರಾ ಮಾಡಿಕೊಂಡು ಬಂದಿದ್ದು, ತನ್ನ ಪರಿಚಯಸ್ಥರೊಬ್ಬರಿಗೆ ₹50 ಸಾವಿರ ಹಣ ನೀಡಿದ್ದ. ಉಳಿದ ₹2.50 ಲಕ್ಷ ಹಣವನ್ನು ತನ್ನ ಕಾರಿನ ಸೀಟ್‌ನಲ್ಲಿ ಇಟ್ಟು, ನಗರದ ಬಸ್ ನಿಲ್ದಾಣ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಸಂಜೆ 7.20ರ ಸುಮಾರಿಗೆ ಮಿರ್ಚಿ ಮಂಡಕ್ಕಿ ತರಲು ಹೋಗಿದ್ದಾಗ ಕಳ್ಳರು ಎರಡೂವರೆ ಲಕ್ಷವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.