ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಒತ್ತಾಯ, ಹಳಿಯಾಳದಲ್ಲಿ ಪ್ರತಿಭಟನೆ

| Published : Feb 17 2024, 01:15 AM IST

ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಲು ಒತ್ತಾಯ, ಹಳಿಯಾಳದಲ್ಲಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಳಿಯಾಳದಲ್ಲಿ ವಿವಿಧ ಕಾರ್ಮಿಕರ ಸಂಘಟನೆಗಳ ಮುಖಂಡರು ಫೆ. 16ರಂದು ಪ್ರತಿಭಟನೆ ನಡೆಸಿದರು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಹಳಿಯಾಳ: ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಸಾಮಾಜಿಕ ನ್ಯಾಯ ಹಾಗೂ ಒಕ್ಕೂಟ ರಚನೆ ಮುಂತಾದುವುಗಳ ಮೇಲಿನ ಆಕ್ರಮಣ ವಿರೋಧಿಸಿ, ಧರ್ಮ ನಿರಪೇಕ್ಷ ಜಾತ್ಯತೀತ ಪ್ರಜಾಪ್ರಭುತ್ವ ಗಣತಂತ್ರದ ರಕ್ಷಣೆಗಾಗಿ ಆಗ್ರಹಿಸಿ ರಾಜ್ಯ ಕಾರ್ಮಿಕ ಸಂಘಟನೆಯ ಆಶ್ರಯದಲ್ಲಿ ತಾಲೂಕಿನ ವಿವಿಧ ಕಾರ್ಮಿಕ ಸಂಘಟನೆಗಳು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆಯನ್ನು ನಡೆಸಿದವು.

ಪಟ್ಟಣದ ಮುಖ್ಯ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ ಕಾರ್ಮಿಕರು ತಾಲೂಕು ಆಡಳಿತ ಸೌಧಕ್ಕೆ ತೆರಳಿ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಆರ್.ಎಚ್. ಭಾಗವಾನ ಅವರಿಗೆ ಸಲ್ಲಿಸಿದರು.

ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆಯೇರಿಕೆ ನಿಯಂತ್ರಿಸಬೇಕು. ಶ್ರೀಮಂತರ ಮೇಲಿನ ತೆರಿಗೆ ಪ್ರಮಾಣವನ್ನು ಹೆಚ್ಚಿಸಿ ಬಡವರಿಗೆ ಬದುಕಲು ಅವಕಾಶ ಮಾಡುವ ನೀತಿಗಳನ್ನು ಜಾರಿ ಮಾಡಬೇಕು. ರೈಲ್ವೆ, ವಿದ್ಯುತ್ ಒಳಗೊಂಡ ಎಲ್ಲ ಸಾರ್ವಜನಿಕ ಕ್ಷೇತ್ರಗಳ ಖಾಸಗೀಕರಣ ಕೈಬಿಡಬೇಕು, ಡಾ. ಸ್ವಾಮಿನಾಥನ್ ಶಿಫಾರಸಿನಂತೆ ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೊಳಿಸುವ ಕಾನೂನು ರೂಪಿಸಬೇಕು. ಕೃಷಿ ಕಾರ್ಮಿಕರಿಗೆ ಸಮಗ್ರವಾದ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕು. ನರೇಗಾ ಯೋಜನೆಯನ್ನು 200 ದಿನಗಳಿಗೆ ವಿಸ್ತರಿಸಿ ₹600 ದಿನಗೂಲಿಯನ್ನು ನಿಗದಿ ಮಾಡಬೇಕು. ನ್ಯಾಯಯುತ ಜಿ.ಎಸ್.ಟಿ. ಪಾಲನ್ನು ರಾಜ್ಯಗಳಿಗೆ ಕೊಡುವ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಬೇಕು.

ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತ್ರಿಪಡಿಸಬೇಕು. ಕಡಿಮೆ ವೇತನ ನೀಡುತ್ತಾ ಗುತ್ತಿಗೆ ಹೊರಗುತ್ತಿಗೆ ಹಾಗೂ ಹಂಗಾಮಿ ನೌಕರರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಕೊನೆಗಾಣಿಸಬೇಕು. ಅಂಗನವಾಡಿ ನೌಕರರು, ಬಿಸಿಯೂಟ ನೌಕರರಿಗೆ ಮತ್ತ ಆಶಾ ಕಾರ್ಯಕರ್ತೆಯರಿಗೆ ₹31 ಸಾವಿರ ಕನಿಷ್ಠ ವೇತನ ಹಾಗೂ ನಿವೃತ್ತಿ ಸೌಲಭ್ಯಗಳನ್ನು ಮತ್ತು ಕನಿಷ್ಠ 10 ಸಾವಿರ ಪಿಂಚಣಿಯನ್ನು ಕೊಡಬೇಕು. ಕಾರ್ಮಿಕರ ಪರವಾದ ನೀತಿಗಳನ್ನು ಜಾರಿಗೊಳಿಸಬೇಕು ಹಾಗೂ ಬರಪೀಡಿತ ಕರ್ನಾಟಕ ರಾಜ್ಯದ ರೈತರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಬೇಕು ಎಂಬ ಬೇಡಿಕೆಗಳನ್ನು ಪ್ರಸ್ತಾಪಿಸಲಾಗಿದೆ.

ಸಿಐಟಿಯು ಸಂಯೋಜಕಿ ಜಯಶ್ರೀ ಹಿರೇಕರ, ಪ್ರಾಂತ ರೈತ ಸಂಘದ ಅಧ್ಯಕ್ಷ ಸಹದೇವ ಶಿಗ್ನೋಳಕರ, ಕಾರ್ಯದರ್ಶಿ ಭುಜಂಗ ಬಾಬುಲದಾತ, ಕಟ್ಟಡ ಕಾರ್ಮಿಕರ ಸಂಘದ ಸಂಚಾಲಕ ಹನುಮಂತ ಶಿಂದೋಗಿ, ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಠಕ್ಕಪ್ಪ ಗುರುಬಣ್ಣನವರ, ಖಜಾಂಚಿ ಜಯವಂತ ಮಿರಾಶಿ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸುವರ್ಣ ಮಿರಾಶಿ, ಬ್ರಿಜಿಟಾ ಬೃಗಾಂಜಾ, ಮಂಜುನಾಥ ಕೋರದಾಳ ಇದ್ದರು.