ಸಾರಾಂಶ
- ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಕಾರ್ಯಕ್ಕೆ ಹಿನ್ನಡೆ
ಕನ್ನಡಪ್ರಭ ವಾರ್ತೆ ಸುರಪುರಕಳೆದ ವರ್ಷದಂತೆ ಈ ವರ್ಷವು ಮಳೆ ಕೈಕೊಟ್ಟಿದ್ದರಿಂದ ಒಂದೆಡೆ ರೈತನ ಬಿತ್ತುವ ಕೆಲಸಗಳು ಅಪೂರ್ಣಗೊಂಡಿವೆ. ಇನ್ನೊಂದೆಡೆ ಬಿತ್ತಿದ ಬೆಳೆ ಮೊಳಕೆಯೊಡೆದಿಲ್ಲ. ಕೂಡಲೇ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಕಾಲುವೆಗೆ ನೀರು ಹರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ವರ್ಷದ ಬರ ಪರಿಹಾರ ಮೊತ್ತವು ರೈತನ ಖಾತೆಗೆ ಸಮರ್ಪಕವಾಗಿ ಸೇರಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದರೂ ಕ್ರಮ ಜರುಗಿಸಿಲ್ಲ. ಸರ್ಕಾರ ಬದಲಾಗಿ ಬೇರೆ ಸರ್ಕಾರ ಬಂದರೂ ವ್ಯವಸ್ಥೆ ಮಾತ್ರ ಬದಲಾಗಿಲ್ಲ ಎಂದು ಆರೋಪಿಸಿದ್ದಾರೆ.ಇಂತಹ ಸಂದರ್ಭದಲ್ಲಿ ಮಳೆ ಬಾರದೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ರೈತರು ಗುಳೆ ಹೋಗಲು ನಿರ್ಧರಿಸಿದ್ದಾರೆ. ಹಲವಾರು ರೈತರು ಸ್ಥಳ ಖಾಲಿ ಮಾಡುತ್ತಿದ್ದಾರೆ. ಹೀಗಾದರೆ ಅನ್ನದಾತನ ನೆರವಿಗೆ ಬರುವವರು ಯಾರು ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಈಗ ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿದ್ದು ನಮ್ಮ ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಸರಕಾರ ಮತ್ತು ಜಲ ಸಂಪನ್ಮೂಲ ಇಲಾಖೆ ನೀರಾವರಿ ಸಲಹಾ ಸಮಿತಿ ಸಭೆ ಕರೆದು ಕಾಲುವೆಗಳಿಗೆ ನೀರು ಹರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರು.ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನುರಿತ ರೈತರಿಗೆಗೆ ಅವಕಾಶ ಕಲ್ಪಿಸಿ ನೀರು ಹರಿಸುವ ತಿರ್ಮಾನ ತೆಗೆದುಕೊಳ್ಳುವಂತಾಗಬೇಕು ಮತ್ತು ಸಲಹಾ ಸಮಿತಿ ಸಭೆ ನೀರಾವರಿಗೊಳಪಟ್ಟ ಯಾವುದೇ ಜಿಲ್ಲೆಯಲ್ಲಿ ಸಭೆ ನಿಗದಿಸಿ, ಚರ್ಚಿಸಬೇಕು ಎಂದು ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
-----10ವೈಡಿಆರ್6
ಮಲ್ಲಿಕಾರ್ಜುನ ಸತ್ಯಂಪೇಟೆ, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರು.