ಪರಿಹಾರ ವಿತರಣೆಯಲ್ಲಾದ ತಾರತಮ್ಯ ಸರಿಪಡಿಸಲು ಆಗ್ರಹ

| Published : Aug 29 2025, 01:00 AM IST

ಪರಿಹಾರ ವಿತರಣೆಯಲ್ಲಾದ ತಾರತಮ್ಯ ಸರಿಪಡಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ನಾಮಧಾರಿ ಈಡಿಗರು 3.50 ಲಕ್ಷ ಜನಸಂಖ್ಯೆ ಹೊಂದಿದ್ದರೂ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ.

ಭಟ್ಕಳ: ಜಿಲ್ಲೆಯಲ್ಲಿ ನಾಮಧಾರಿ ಈಡಿಗರು 3.50 ಲಕ್ಷ ಜನಸಂಖ್ಯೆ ಹೊಂದಿದ್ದರೂ ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಬಗ್ಗೆ ಸಮುದಾಯದ ಹಕ್ಕಿನ ಬಗ್ಗೆ ಸಮಗ್ರ ಚಿಂತನಾ ಚರ್ಚೆ ಸೆ.3ರಂದು ಸಿದ್ದಾಪುರದಲ್ಲಿ ನಡೆಯಲಿದೆ ಎಂದು ಪ್ರಣವಾನಂದ ಶ್ರೀ ಕರೆ ನೀಡಿದರು.ಗುರುವಾರ ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಾಮಧಾರಿಗಳು ಬಹುಸಂಖ್ಯಾತರಾಗಿದ್ದರೂ ರಾಜಕೀಯ ಹಕ್ಕು ಸಾಧಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಜಿಲ್ಲೆಯ ಮೇಲ್ವರ್ಗದ ರಾಜಕಾರಣಿಗಳು ಭಯದ ವಾತಾವರಣ ಸೃಷ್ಟಿ ಮಾಡಿ ರಾಜಕೀಯವಾಗಿ ನಮ್ಮ ಸಮಾಜವನ್ನು ಸಂಪೂರ್ಣವಾಗಿ ಕತ್ತಲೆಯಲ್ಲಿ ಇಟ್ಟಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆ ಇರುವ ನಾಮಧಾರಿ ಸಮಾಜಕ್ಕೆ ರಾಜಕೀಯವಾಗಿ ಪ್ರಮುಖ ಸ್ಥಾನಮಾನ ಸಿಗಬೇಕು ಎನ್ನುವುದು ನಮ್ಮ ಒತ್ತಾಯವಾಗಿದೆ. ಸಮಾಜ ಎಚ್ಚೆತ್ತುಕೊಂಡು ಸಂಘಟಿತರಾಗಬೇಕು ಎಂದು ಕರೆ ನೀಡಿದ ಅವರು ಭಟ್ಕಳದಲ್ಲಿ ನಮ್ಮ ಸಮಾಜದ 85 ಸಾವಿರಕ್ಕೂ ಅಧಿಕ ಮತದಾರರಿದ್ದರೂ ಸಮಾಜದ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಾಗಿಲ್ಲ. ಈ ಬಗ್ಗೆಯೂ ಚಿಂತನಾ ಸಭೆ ನಡೆಯಬೇಕು ಎಂದ ಅವರು ಸಚಿವ ಮಂಕಾಳ ವೈದ್ಯರು ಕಳೆದ ವರ್ಷ ಶಿರೂರು ಗುಡ್ಡ ಕುಸಿತದಲ್ಲಿ ಮೃತಪಟ್ಟವರಿಗೆ ಸರಕಾರದಿಂದ ಸಮರ್ಪಕ ಪರಿಹಾರ ಒದಗಿಸಿಕೊಟ್ಟಿಲ್ಲ. ಇತ್ತೀಚೆಗೆ ದೋಣಿ ದುರಂತ ಮೃತಪಟ್ಟ ಮೀನುಗಾರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಕೊಡಲಾಗಿದೆ. ಆದರೆ ಶಿರೂರು ದುರುಂತದಲ್ಲಿ ಮೃತಪಟ್ಟವರಿಗೆ ರಾಜ್ಯ ಸರಕಾರದಿಂದ ₹5 ಲಕ್ಷ , ಕೇಂದ್ರದಿಂದ ₹2 ಲಕ್ಷ ಪರಿಹಾರ ಮಾತ್ರ ಕೊಡಲಾಗಿದೆ.ಆರ್ ಸಿಬಿ ಕಪ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮೃತಪಟ್ಟವರ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಕೊಡಲಾಗಿದೆ. ಪರಿಹಾರ ವಿತರಣೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದ್ದು, ಇದಕ್ಕೆ ಸಚಿವ ಮಂಕಾಳ ವೈದ್ಯರ ಉತ್ತರವೇನು ಎಂದು ಪ್ರಶ್ನಿಸಿದ ಅವರು, ಶಿರೂರು ದುರಂತದಲ್ಲಿ ಮೃತಪಟ್ಟ ನಾಮಾರಿ ಸಮುದಾಯದ ಇಬ್ಬರ ಶವ ಪತ್ತೆ ಹಚ್ಚಲು ಇನ್ನೂ ಸಾಧ್ಯವಾಗಿಲ್ಲ. ಇವರ ಕುಟುಂಬಕ್ಕೆ ಸಮರ್ಪಕ ಪರಿಹಾರವನ್ನೂ ಕೊಡಲಾಗಿಲ್ಲ ಎಂದು ಆರೋಪಿಸಿದರು.

ಶಾಸಕ ಸತೀಶ ಸೈಲ್ ಮೃತರ ಮನೆಗೆ ತೆರಳಿ ಸಾಂತ್ವನ ಹೇಳುವ ಕೆಲಸವೂ ಮಾಡಿಲ್ಲ. ಶಿರೂರು ಗುಡ್ಡ ಪ್ರಕರಣಕ್ಕೆ ಸಂಬಂಧಿಸಿದಂತೆ ಐಆರ್ ಬಿ ಅವರ ವಿರುದ್ಧ ಹೊನ್ನಾವರದಲ್ಲಿ ಪ್ರತಿಭಟನೆ ನಡೆಸಿದ ನನ್ನ ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದರು.

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ನಾಮಧಾರಿ ಈಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು,ರಾಜಕೀಯವಾಗಿ ಮಂಚೂಣಿಗೆ ಬರಬೇಕು. ಸೆ.3ರಂದು ಸಿದ್ದಾಪುರದಲ್ಲಿ ನಡೆಯುವ ಚಿಂತನಾ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದವರು ಪಾಲ್ಗೊಂಡು ಸಲಹೆ ಸೂಚನೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಮಂಜುನಾಥ ನಾಯ್ಕ, ಆರ್.ಟಿ. ನಾಯ್ಕ, ಶ್ರೀಧರ ನಾಯ್ಕ, ಅಚ್ಯುತ ನಾಯ್ಕ, ರಾಜು ನಾಯ್ಕ ಇದ್ದರು.