ಸಾರಾಂಶ
ಹಾವೇರಿ: ಕಳಪೆ ಬಿತ್ತನೆ ಬೀಜ, ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕುವುದು, ಸತತ ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಹಾಗೂ ಸರ್ಕಾರಿ ಸೌಲಭ್ಯಗಳನ್ನು ರೈತರಿಗೆ ಒದಗಿಸುವಂತೆ ಆಗ್ರಹಿಸಿ ಆ. 14ರಂದು ಬೆಳಗ್ಗೆ 11.30ಕ್ಕೆ ಹಾವೇರಿಯ ಮಹಾತ್ಮ ಗಾಂಧಿ ವೃತ್ತದಲ್ಲಿ ರೈತ ಚಳವಳಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ದಿವಿಗೀಹಳ್ಳಿ ತಿಳಿಸಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ರೈತ ಸಂಘಗಳ ಒಕ್ಕೂಟ ಸಾಮೂಹಿಕ ನಾಯಕತ್ವದಡಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಆ. 14ರಂದು ಬೆಳಗ್ಗೆ 11ಕ್ಕೆ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿರುವ ಹುತಾತ್ಮ ರೈತರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ, ಬಳಿಕ ಎಂ.ಜಿ. ವೃತ್ತದವರೆಗೆ ಪ್ರತಿಭಟನಾ ಪಾದಯಾತ್ರೆಯನ್ನು ನಡೆಸಲಾಗುವುದು ಎಂದರು. ಜಿಲ್ಲೆಯಲ್ಲಿ ಕಳಪೆ ಬೀಜ ಹಾಗೂ ಕಳಪೆ ರಸಗೊಬ್ಬರ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಕೇವಲ ಸೀಜನ್‌ನಲ್ಲಿ ಮಾತ್ರ ಅಧಿಕಾರಿಗಳು ತೋರಿಕೆಗೋಸ್ಕರ ಒಂದೆರಡು ಅಂಗಡಿಗಳಿಗೆ ದಾಳಿ ಮಾಡಿ ಪರಿಶೀಲಿಸುತ್ತಾರೆ. ಉಳಿದ ದಿನಗಳಲ್ಲಿ ಯಾವ ಅಂಗಡಿಗೂ ಭೇಟಿ ನೀಡುವುದಿಲ್ಲ. ಹಾಗಾಗಿ ಕಳಪೆ ಬೀಜ, ಗೊಬ್ಬರ ಎಗ್ಗಿಲ್ಲದೇ ಮಾರಾಟವಾಗುತ್ತಿದ್ದು, ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಲಾಗುವುದು. ನಿರಂತರ ಮಳೆಯಿಂದ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು. ರಾಜ್ಯ ಸರ್ಕಾರ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಲಾಗುವುದು ಎಂದರು.ಅದೇ ರೀತಿ ಕೃಷಿ ಪಂಪ್‌ಸೆಟ್‌ಗಳಿಗೆ ಒವರ್ ಲೋಡ್ ಆದ ಟಿಸಿಗಳನ್ನು ಹೆಚ್ಚುವರಿ ಟಿಸಿಗಳನ್ನಾಗಿ ಪರಿವರ್ತಿಸುವುದು, ಅಕ್ರಮ ಸಕ್ರಮದಲ್ಲಿ ಹಣ ತುಂಬಿದ ರೈತರಿಗೆ ಟಿಸಿ, ಕಂಬ, ವೈರ್ ನೀಡುವುದು. ಆರ್‌ಬಿಐ ನಿಯಮಾವಳಿಗಳನ್ನು ಉಲ್ಲಂಘಿಸಿ ಸಾಲ ಮರುಪಾವತಿ ಮಾಡಲು ಒತ್ತಡ ಹಾಕುವ ಫೈನಾನ್ಸ್‌ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು, ಹಾವೇರಿ ಜಿಲ್ಲಾ ಕೇಂದ್ರದಿಂದ ಬ್ಯಾಡಗಿ, ರಟ್ಟೀಹಳ್ಳಿ, ಶಿಕಾರಿಪುರ, ಶಿವಮೊಗ್ಗ ಮಾರ್ಗವಾಗಿ ಮಂಗಳೂರಿಗೆ ತೆರಳಲು ರೋಗಿಗಳಿಗೆ ಅನುಕೂಲವಾಗಿಸಲು ಹೆಚ್ಚುವರಿ ಬಸ್‌ಗಳ ಸಂಚಾರ ಮತ್ತು ಕೋವಿಡ್‌ನಲ್ಲಿ ಸಂಚಾರ ಕಡಿಮೆಗೊಳಿಸಿದ ಮಾರ್ಗದಲ್ಲಿ ಹೆಚ್ಚುವರಿ ಬಸ್ ಸಂಚಾರಕ್ಕೆ ಕ್ರಮ ವಹಿಸುವುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುತ್ತದೆ. ಆದ್ದರಿಂದ ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.ರಾಜಶೇಖರ ದೂದೀಹಳ್ಳಿ, ಮಹೇಶ ಕೊಟ್ಟೂರ, ಚಂದ್ರಪ್ಪ ಮಾನೇರ, ಕೆ.ಬಿ. ಕಲ್ಲನಗೌಡ್ರ, ಅಶೋಕ ಶಿಡಗನಾಳ, ಪೂಜಾ ಮ್ಯಾಚರ್, ಕಾವ್ಯಾ ಹುಡೇದ, ಗುತ್ತೆಮ್ಮ ಸುಣಗಾರ ಇದ್ದರು.