ಸಾರಾಂಶ
ಮಳೆಗೆ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ದಸಂಸ ರಾಜ್ಯ ಸಂಚಾಲಕ ಕೆ.ಸಿ.ವಸಂತ್‌ಕುಮಾರ್ ನೇತೃತ್ವದಲ್ಲಿ ಡಿಸಿ ಮೀನಾ ನಾಗರಾಜ್‌ಗೆ ಮುಖಂಡರು ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಧಾರಾಕಾರ ಮಳೆಯಿಂದ ಮನೆ ಕಳೆದುಕೊಂಡವರಿಗೆ ತಾರತಮ್ಯ ಮಾಡದೇ ಸಮಾನ ಪರಿಹಾರ ಒದಗಿಸಬೇಕೆಂದು ದಲಿತ ಸಂಘರ್ಷ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್‌ಗೆ ಮನವಿ ಸಲ್ಲಿಸಿ ಆಗ್ರಹಿಸಿದರು.ಹಲವಾರು ದಿನಗಳಿಂದ ಮಲೆನಾಡಿನಲ್ಲಿ ಸುರಿಯುತ್ತಿರುವ ಮಳೆಯಿಂದ ಮರ, ವಿದ್ಯುತ್ ಕಂಬ ಧರೆಗುರುಳಿವೆ. ಜೊತೆಗೆ ಮಳೆ ಅನಾಹುತಕ್ಕೆ ಮನೆ ಗೋಡೆ, ಛಾವಣಿ ಕುಸಿದು ತೀವ್ರ ಹಾನಿಯಾಗಿದ್ದು, ನಿವಾಸಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಮನೆ ಕುಸಿತಕ್ಕೊಳಗಾದ ಪ್ರದೇಶಗಳಲ್ಲಿ ಕಂದಾಯ ಅಧಿಕಾರಿಗಳು ಸಮೀಕ್ಷೆ ನಡೆಸಿ ಕೆಲವು ಮನೆಗಳನ್ನು ಮಾತ್ರ ಅಧಿಕೃತ, ಮತ್ತೆ ಕೆಲವನ್ನು ಅನಧಿಕೃತವೆಂದು ವರದಿ ಸಲ್ಲಿಸಿದ್ದು, ಅನಧಿಕೃತ ಮನೆಗಳಿಗೆ ಪರಿಹಾರವಿಲ್ಲ ಎಂದು ತಿಳಿಸಿದ್ದು, ಅವರಿಗೆ ಕನಿಷ್ಟ ಗಂಜಿ ಕೇಂದ್ರ ನಿರ್ಮಿಸದಿರುವ ಹಿನ್ನೆಲೆ ಅವರ ಸ್ಥಿತಿ ಕೇಳುವವರೇ ಇಲ್ಲದಂತಾಗಿದೆ ಎಂದು ಮನವರಿಕೆ ಮಾಡಿದ್ದಾರೆ.
ತಾಲೂಕಿನ ವಸ್ತಾರೆ ಹೋಬಳಿ ತಳ್ಳಿಹಳ್ಳ ಗ್ರಾಮದ ಪ್ರೌಢಶಾಲೆ ಕಮಾನು ಗಾಳಿಗೆ ತೂರಿಕೊಂಡು ಹೋಗಿದೆ. ಆ ಪಕ್ಕದಲ್ಲೇ ಪ.ಜಾತಿ ಜನಾಂಗದ ಮೂರು ಮನೆಗಳು ಕುಸಿತಗೊಂಡಿವೆ. ಯಾವ ಅಧಿಕಾರಿಯೂ ಸ್ಥಳ ಪರಿಶೀಲನೆ ನಡೆಸಿಲ್ಲ. ಗ್ರಾಮಸ್ಥರು ಶಾಲೆ ಕೊಠಡಿಯಲ್ಲಿ ಆಶ್ರಯ ಪಡೆಯುವ ಸ್ಥಿತಿ ಬಂದಿದೆ. ಹೀಗಾಗಿ ಜಿಲ್ಲಾಧಿಕಾರಿ ತಳ್ಳಿಹಳ್ಳ ಸೇರಿ ವಿವಿಧ ಗ್ರಾಮಗಳಲ್ಲಿ ಮನೆ ಕುಸಿತ ಪ್ರದೇಶಗಳಿಗೆ ಅಧಿಕಾರಿಗಳನ್ನು ಕಳುಹಿಸಿ ಸ್ಥಳ ಪರಿಶೀಲನೆ ನಡೆಸಬೇಕು. ಪರಿಹಾರ ವಿಚಾರದಲ್ಲಿ ತಾರತಮ್ಯವೆಸಗದೇ ಸಮಾನ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಈ ವೇಳೆ ದಸಂಸ ರಾಜ್ಯ ಸಂಚಾಲಕ ಕೆ.ಸಿ.ವಸಂತ್‌ಕುಮಾರ್, ಜಿಲ್ಲಾ ಸಂಚಾಲಕ ದೊಡ್ಡಯ್ಯ, ಸಂಘಟನಾ ಸಂಚಾಲಕ ಧರ್ಮೇಶ್, ಎಂ.ಸಿ.ಜಯರಾಮಯ್ಯ, ಕೆಂಚಪ್ಪ, ಇಲಿಯಾಜ್ ಅಹ್ಮದ್, ವಿನೀತ, ರಂಗಯ್ಯ ಇದ್ದರು.