ಕಬ್ಬು ಬೆಳೆಗಾರರು, ರೈತರಿಂದ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಕನ್ನಡಪ್ರಭ ವಾರ್ತೆ ಹಳಿಯಾಳ

ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕು ಒಳಗೊಂಡಂತೆ ಹಳಿಯಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ತಕ್ಷಣ ತುರ್ತು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಳಿಯಾಳ ತಾಲೂಕು ಕಬ್ಬು ಬೆಳೆಗಾರರು ಮತ್ತು ರೈತರು ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಮುಂಗಾರು ಮಳೆಯ ಕೊರತೆಯಿಂದ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿನ ಮೂರು ತಾಲೂಕಿನ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಜೂನ್ ತಿಂಗಳಿನಿಂದ ಈವರೆಗೆ ಹಳಿಯಾಳ ತಾಲೂಕಿನಲ್ಲಿ ಶೇ.52ರಷ್ಟು ಮಾತ್ರ ಮಳೆಯಾಗಿದ್ದರೇ, ದಾಂಡೇಲಿ ತಾಲೂಕಿನಲ್ಲಿ ಕೇವಲ ಶೇ.42ರಷ್ಟು ಮಳೆಯಾಗಿದೆ. ಈ ಮಧ್ಯೆ ಕಳೆದ 20 ದಿನಗಳಿಂದ ಮಳೆಯ ಸಂಪೂರ್ಣವಾಗಿ ಕೈಕೊಟ್ಟಿರುವ ಪರಿಣಾಮ ಬಿಸಿಲಿನ ವಾತಾವರಣ ನಿರ್ಮಾಣವಾಗಿ ಭತ್ತ, ಗೋವಿನಜೋಳ ಮತ್ತು ಇತರ ವಿವಿಧ ಬೆಳೆಗಳು ಒಣಗುವ ಹಂತಕ್ಕೆ ಬಂದಿವೆ. ಹಳಿಯಾಳ ತಾಲೂಕಿನಲ್ಲಿ ಬೆಳೆದಂತಹ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಮಾಡುವ ಪರಿಸ್ಥಿತಿಯು ಬಂದೊಂದಿಗಿದೆ.

ರಾಜ್ಯ ಸರ್ಕಾರ ಈ ಭಾಗದ ಬರದ ತೀವ್ರತೆ ಮನಗಂಡು ತಕ್ಷಣ ಹಳಿಯಾಳವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯಂತೆ ಪ್ರತಿ ಎಕರೆಗೆ ₹25 ಸಾವಿರ ಮಧ್ಯಂತರ ಪರಿಹಾರವನ್ನು ಬಿಡುಗಡೆ ಮಾಡಬೇಕು. ರೈತರ ಎಲ್ಲಾ ರೀತಿಯ ಕೃಷಿ ಸಾಲ ಮನ್ನಾ ಮಾಡಬೇಕು, ಜೊತೆಯಲ್ಲಿ ಬರ ಪರಿಹಾರ ಕಾಮಗಾರಿಗಳನ್ನು ತಕ್ಷಣ ಆರಂಭಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಕಾಳಿನದಿ ನೀರಾವರಿ ಯೋಜನೆ ಪ್ರಾರಂಭಿಸಿ:


ತಾಲೂಕಿನ ಕೆರೆ-ಬಾಂದಾರುಗಳನ್ನು ಕಾಳಿನದಿ ನೀರಿನಿಂದ ತುಂಬಿಸುವ ಕಾಳಿನದಿ ನೀರಾವರಿ ಯೋಜನೆಯ ಕಾಮಗಾರಿಯು ದಶಕಗಳಾಗುತ್ತಾ ಬಂದರೂ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಪ್ರಸಕ್ತ ವರ್ಷದ ಏಪ್ರಿಲ್ 2ರಂದು ಯೋಜನೆಯು ಕಾರ್ಯಾರಂಭಿಸುವುದಾಗಿ ಅಧಿಕಾರಿಗಳು ಭರವಸೆಯನ್ನು ನೀಡಿದ್ದರೂ ಕಾಮಗಾರಿಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಆ ಯೋಜನೆ ಆರಂಭವಾಗಿದ್ದರೇ ರೈತರು ಇಷ್ಟೊಂದು ಕಷ್ಟಕ್ಕೆ ಒಳಗಾಗುತ್ತಿರಲಿಲ್ಲ. ರೈತರು ಎದುರಿಸುತ್ತಿರುವ ಕಷ್ಟವನ್ನು ಮತ್ತು ಈ ಭಾಗದ ನೀರಾವರಿ ಸಮಸ್ಯೆಯನ್ನು ಪರಿಗಣಿಸಿ ತಕ್ಷಣ ಈ ಕಾಳಿನದಿ ನೀರಾವರಿ ಯೋಜನೆಯ ಕಾಮಗಾರಿಯನ್ನು ಪ್ರಾರಂಭಿಸಲು ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕಬ್ಬು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ನಾಗೇಂದ್ರ ಜಿವೋಜಿ, ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಶಂಕರ ಕಾಜಗಾರ, ಪ್ರಮುಖರಾದ ಎಂ.ವಿ. ಘಾಡಿ, ಸುರೇಶ ಶಿವಣ್ಣನವರ, ರಾಮದಾಸ ಬೆಳಗಾಂವಕರ, ಬಳಿರಾಮ ಮೋರಿ, ಮಂಜುಳಾ ಗೌಡ, ನಕುಲ್ ಕೆಂಚಣ್ಣನವರ, ಸಾತೋರಿ ಗೋಡೆಮನಿ, ನಾರಾಯಣ ಘಾಡೇಕರ, ಗುಂಡು ಲಕ್ಕನಗೌಡ್ರ, ವಿರೂಪಾಕ್ಷ ಪಾಟೀಲ, ಸುರೇಶ ಗಡಕರ, ಈಶ್ವರ ಜರೇಕರ ಹಾಗೂ ಇತರರು ಇದ್ದರು.