ಸಾಗರವನ್ನು ಜಿಲ್ಲೆಯನ್ನಾಗಿ ಘೋಷಿಸಲು ಒತ್ತಾಯ

| Published : Sep 07 2025, 01:00 AM IST

ಸಾರಾಂಶ

ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಸಾಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡಲು ಒತ್ತಾಯಿಸಲು ಪೂರ್ವಭಾವಿ ಸಭೆ ನಡೆಯಿತು. ಸಾಗರ ಜಿಲ್ಲೆಯಾಗಿ ಘೋಷಣೆ ಮಾಡಲು ಒತ್ತಾಯಿಸಿ ಸೆ. ೧೮ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಬೃಹತ್ ಹಕ್ಕೊತ್ತಾಯದ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸಾಗರ

ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಸಾಗರ ಜಿಲ್ಲಾ ಹೋರಾಟ ಸಮಿತಿ ವತಿಯಿಂದ ಸಾಗರವನ್ನು ಜಿಲ್ಲೆಯಾಗಿ ಘೋಷಣೆ ಮಾಡಲು ಒತ್ತಾಯಿಸಲು ಪೂರ್ವಭಾವಿ ಸಭೆ ನಡೆಯಿತು. ಸಾಗರ ಜಿಲ್ಲೆಯಾಗಿ ಘೋಷಣೆ ಮಾಡಲು ಒತ್ತಾಯಿಸಿ ಸೆ. ೧೮ರಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಬೃಹತ್ ಹಕ್ಕೊತ್ತಾಯದ ಮನವಿ ಸಲ್ಲಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಪುರಸಭೆ ಮಾಜಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ಮಾತನಾಡಿ, ಸಾಗರ ಜಿಲ್ಲೆ ಘೋಷಣೆ ಮಾಡುವಂತೆ ಒತ್ತಾಯಿಸಿ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಿದೆ. ಈ ಹಿಂದೆ ಸಾಗರ ಜಿಲ್ಲೆಯಾಗಿ ಘೋಷಣೆ ಮಾಡಲು ಸಾಹಿತಿ ಡಾ.ನಾ.ಡಿಸೋಜ ನೇತೃತ್ವದಲ್ಲಿ ಹಲವಾರು ಹೋರಾಟ ನಡೆಸಲಾಗಿತ್ತು. ಆಗ ಹೊಸ ಜಿಲ್ಲೆ ಪ್ರಸ್ತಾಪ ಇಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಸಾಗರ ಭೌಗೋಳಿಕವಾಗಿ ವಿಶಾಲವಾಗಿದ್ದು, ಡಿ.ಸಿ. ಕಚೇರಿಗೆ ಹೋಗಲು ಗ್ರಾಮೀಣ ಭಾಗದ ಜನರು ನೂರಾರು ಕಿ.ಮಿ. ಹೋಗಬೇಕಾಗಿದೆ. ಸಾಗರ ಜಿಲ್ಲೆಗೆ ಸಿದ್ದಾಪುರ ಸೇರಿಸಲು ಅಲ್ಲಿನ ಜನರ ಒತ್ತಾಯವಿದೆ. ಸಾಗರ, ಹೊಸನಗರ, ಸೊರಬ, ಶಿಕಾರಿಪುರ, ಶಿರಾಳಕೊಪ್ಪ ಆನವಟ್ಟಿ, ಹೊಸನಗರ ಸೇರಿಸಿ ಸಾಗರ ಜಿಲ್ಲೆ ಮಾಡಬೇಕು ಎಂದು ಒತ್ತಾಯಿಸಿದರು.

ರೋಟರಿ ರಕ್ತನಿಧಿ ಕೇಂದ್ರದ ಗೌರವಾಧ್ಯಕ್ಷೆ ಡಾ.ರಾಜನಂದಿನಿ ಕಾಗೋಡು ಮಾತನಾಡಿ, ಸಾಗರಕ್ಕೆ ಜಿಲ್ಲೆಯಾಗುವ ಎಲ್ಲ ಅರ್ಹತೆ ಇದೆ. ಉಪವಿಭಾಗೀಯ ಆಸ್ಪತ್ರೆ, ರಕ್ತನಿಧಿ ಕೇಂದ್ರ, ಉಪವಿಭಾಗೀಯ ಅಧಿಕಾರಿಗಳ ಕಚೇರಿ ಸೇರಿ ಹಲವು ಕಚೇರಿಗಳು ಸೌಲಭ್ಯಗಳು ಸಾಗರದಲ್ಲಿದೆ. ರಾಜಕೀಯ ರಹಿತವಾಗಿ ಸಾಗರ ಜಿಲ್ಲೆಯಾಗಿಸುವ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ತಾ.ಪಂ. ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಮಾತನಾಡಿ, ಸಾಗರ ಜಿಲ್ಲೆಯಾಗಲು ಬೇಕಾದ ಜನಸಂಖ್ಯೆ, ಭೌಗೋಳಿಕ ವ್ಯವಸ್ಥೆ, ಪ್ರಮುಖ ಸ್ಥಳ, ಹಿಂದಿನ ಹೋರಾಟದ ವಿವರವನ್ನು ಪಡೆದು ಪಕ್ಷಾತೀತ ಹೋರಾಟ ರೂಪಿಸಲು ಎಲ್ಲರೂ ಸಿದ್ದರಾಗಬೇಕು, ಸ್ಥಳೀಯ ಜನಪ್ರತಿನಿಧಿಗಳಿಗೂ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಹೋರಾಟ ಸಮಿತಿಯ ಸುಂದರ ಸಿಂಗ್ ಮಾತನಾಡಿ, ಸಾಗರ ಜಿಲ್ಲೆಯಾಗಿ ರೂಪಿಸುವ ಹೋರಾಟಕ್ಕೆ ಅನೇಕ ಪ್ರಮುಖರು ಬೆಂಬಲ ನೀಡಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪನವರು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ಶಾಸಕರು ಸಹ ಸಹಕಾರ ನೀಡುವ ಸಾಧ್ಯತೆ ಇದೆ. ಸೆ. ೧೮ರಂದು ಬೃಹತ್ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಸಭೆಯಲ್ಲಿ ಕಲಸೆ ಚಂದ್ರಪ್ಪ, ದೇವೇಂದ್ರಪ್ಪ, ಅಶ್ವಿನಿಕುಮಾರ್, ಮಂಜುನಾಥ್, ಕೆ.ವಿ.ಜಯರಾಮ್, ಮಹಾಬಲ ಕೌತಿ, ಗಿರೀಶ್ ಕೋವಿ, ಆನಂದ್, ಮಹ್ಮದ್ ಖಾಸೀಂ, ದಿನೇಶ್ ಶಿರವಾಳ, ಎಂ.ಬಿ.ಮಂಜಪ್ಪ, ಕನ್ನಪ್ಪ ಬೆಳಲಮಕ್ಕಿ ಇನ್ನಿತರರು ಹಾಜರಿದ್ದರು.

ಹೋರಾಟಕ್ಕೆ ನನ್ನ ಬೆಂಬಲವಿದೆ: ಹೆಚ್.ಹಾಲಪ್ಪ

ಸಾಗರ ಜಿಲ್ಲೆ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಶಿವಮೊಗ್ಗ ಜಿಲ್ಲೆಯನ್ನು ಒಂದೊಮ್ಮೆ ಒಡೆಯುವುದಾದರೆ ಸಾಗರ ಜಿಲ್ಲೆಯಾಗಲು ಎಲ್ಲ ಅರ್ಹತೆ ಇದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹೆಚ್.ಹಾಲಪ್ಪ ತಿಳಿಸಿದ್ದಾರೆ. ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ೧೯೯೬ರಲ್ಲಿ ಶಿವಮೊಗ್ಗ ಜಿಲ್ಲೆ ಒಡೆಯುವ ಪ್ರಸ್ತಾಪ ಕೇಳಿ ಬಂದಿತ್ತು. ಆಗ ನಾನು ಮತ್ತು ಕೆಲವು ಸ್ನೇಹಿತರು ಎಸ್.ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಸಾಗರ ಜಿಲ್ಲೆ ಮಾಡುವ ಪ್ರಸ್ತಾಪ ಮುಂದಿರಿಸಿದ್ದೆವು. ನಂತರ ಸಾಗರದಲ್ಲಿ ಈ ಸಂಬಂಧ ಹೋರಾಟವೂ ನಡೆದಿತ್ತು. ಆದರೆ ಸರ್ಕಾರ ಹೊಸ ಜಿಲ್ಲೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದಾಗ ಜಿಲ್ಲಾ ಪ್ರಸ್ತಾಪ ಹಿಂದೆ ಹೋಗಿತ್ತು. ಈಗ ಸಾಗರ ಜಿಲ್ಲೆ ಮಾಡಬೇಕು ಎನ್ನುವ ಕೂಗು ಪ್ರಬಲಗೊಳ್ಳುತ್ತಿದೆ ಎಂದರು.ಮಲೆನಾಡು ಸಂಸ್ಕೃತಿ ಹೊಂದಿರುವ ಸಾಗರವನ್ನು ಜಿಲ್ಲಾ ಕೇಂದ್ರವಾಗಿಸಿ, ಸೊರಬ, ಹೊಸನಗರ, ಶಿಕಾರಿಪುರ, ಸಿದ್ದಾಪುರವನ್ನು ಸೇರಿಸಲು ಅವಕಾಶವಿದೆ. ಈ ತಾಲೂಕುಗಳಲ್ಲಿ ಬಹುತೇಕ ಆಚಾರ, ವಿಚಾರ ಸಂಸ್ಕೃತಿ ಎಲ್ಲವೂ ಒಂದೆ ಇದೆ. ಸಾಗರ ಜಿಲ್ಲೆಯಾದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಅಭಿವೃದ್ದಿಯ ಜೊತೆಗೆ ಜನಜೀವನ ಸಹ ಉತ್ತಮಗೊಳ್ಳುತ್ತದೆ ಎಂದು ಹೇಳಿದ್ದಾರೆ.