ಯಲಬುರ್ಗಾ ಪೂರ್ಣ ಪ್ರಮಾಣದ ಬರಪೀಡಿತ ತಾಲೂಕು ಎಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಪ್ರಕಾಶ ನಾಶಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಯಲಬುರ್ಗಾ: ಯಲಬುರ್ಗಾ ಪೂರ್ಣ ಪ್ರಮಾಣದ ಬರಪೀಡಿತ ತಾಲೂಕು ಎಂದು ಘೋಷಿಸಿ, ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಪ್ರಕಾಶ ನಾಶಿ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ಆಗಮಿಸಿತು. ಬಳಿಕ ಕಾರ್ಯಕರ್ತರು ರಸ್ತೆ ತಡೆದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ರಾಜ್ಯ ಸರ್ಕಾರ ಮೂರನೇ ಹಂತದಲ್ಲಿ 53 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ತೀವ್ರ ಹಾಗೂ ಮಧ್ಯಮ ಬರಪೀಡಿತ ತಾಲೂಕುಗಳೆಂದು ವಿಂಗಡಿಸಿದೆ. ಯಲಬುರ್ಗಾ ತಾಲೂಕನ್ನು ಮಧ್ಯಮ ಬರಪೀಡಿತ ತಾಲೂಕು ಎಂದು ಘೋಷಿಸಿರುವುದರಿಂದ ರೈತರಿಗೆ ನಿರೀಕ್ಷಿತ ಪರಿಹಾರ ದೊರೆಯುವುದಿಲ್ಲ. ಆದ್ದರಿಂದ ಕೂಡಲೇ ತಾಲೂಕನ್ನು ಪೂರ್ಣ ಪ್ರಮಾಣದ ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮಳೆಯ ಕೊರತೆಯಿಂದ ತಾಲೂಕಿನ ಹಲವು ಭಾಗಗಳಲ್ಲಿ ಬೆಳೆ ಹಾನಿಯಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ನೀರಾವರಿ ತಾಲೂಕು ಎಂಬ ಕಾರಣಕ್ಕೆ ಬರದ ಪರಿಸ್ಥಿತಿ ನಿರ್ಲಕ್ಷಿಸಬಾರದು. ತಾಲೂಕಿನ ಕೆರೆಗಳಿಗೆ ಸಮರ್ಪಕವಾಗಿ ನೀರು ಬರುತ್ತಿಲ್ಲ. ಈ ಬಗ್ಗೆ ಕ್ಷೇತ್ರದ ಸಚಿವರು ಹಾಗೂ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.

ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಆರೋಪಿಸಿದ ಅವರು, ಕ್ಷೇತ್ರದ ಶಾಸಕರು ಹಾಗೂ ಸಚಿವರು ಸರ್ಕಾರದ ಮೇಲೆ ಒತ್ತಡ ಹೇರಿ ಯಲಬುರ್ಗಾ ತಾಲೂಕನ್ನು ಪೂರ್ಣ ಪ್ರಮಾಣದ ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ ಮಾತನಾಡಿ, ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಬಿಜೆಪಿ ವತಿಯಿಂದ ಸರ್ಕಾರಕ್ಕೆ ಒತ್ತಾಯಿಸಲಾಗಿದೆ. ಆದರೆ ಕೇವಲ ಮೂರು ತಾಲೂಕುಗಳನ್ನು ಘೋಷಿಸಲಾಗಿದೆ.ಬರ ನಿರ್ವಹಣೆಯಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಯಲಬುರ್ಗಾ ತಾಲೂಕನ್ನು ಪೂರ್ಣ ಪ್ರಮಾಣದ ಬರಪೀಡಿತ ತಾಲೂಕು ಎಂದು ಘೋಷಿಸುವವರೆಗೆ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದು ಎಚ್ಚರಿಸಿದರು.

ಜೆಡಿಎಸ್ ಧರಣಿ ಅಂತ್ಯ: ಇದೇ ವೇಳೆ, ಯಲಬುರ್ಗಾ ಪಟ್ಟಣದ ಬಯಲು ರಂಗಮಂದಿರದಲ್ಲಿ ಕಳೆದ ನಾಲ್ಕು ದಿನಗಳಿಂದ ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ಜೆಡಿಎಸ್ ವತಿಯಿಂದ ನಡೆಸಲಾಗುತ್ತಿದ್ದ ಧರಣಿ ಶುಕ್ರವಾರ ಅಂತ್ಯಗೊಂಡಿತು.

ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಪ್ರಕಾಶ ನಾಶಿ ಅವರಿಗೆ ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ಗುಳಗುಳಿ ಹಾಗೂ ಪಕ್ಷದ ವಕ್ತಾರ ಮಲ್ಲನಗೌಡ ಕೋನನಗೌಡ ಮನವಿ ಸಲ್ಲಿಸಿದರು. ಮಾಜಿ ಸಚಿವ ಹಾಲಪ್ಪ ಆಚಾರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ ಉಪಸ್ಥಿತರಿದ್ದರು.

ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ಗೌವರಾಳ, ಬಿಜೆಪಿ ಹಿರಿಯ ಮುಖಂಡರಾದ ಬಸಲಿಂಗಪ್ಪ ಭೂತೆ, ಅರವಿಂದಗೌಡ ಪಾಟೀಲ ಹಾಗೂ ಶಿವಶಂಕರ ದೇಸಾಯಿ ಮಾತನಾಡಿದರು.

ವೀರಣ್ಣ ಹುಬ್ಬಳ್ಳಿ, ಬಸವರಾಜ ರಾಜೂರು (ಗೌರಾ), ಅಯ್ಯನಗೌಡ ಕೆಂಚಮ್ಮನವರ, ಅಮರೇಶ ಹುಬ್ಬಳ್ಳಿ, ರತನ್ ದೇಸಾಯಿ, ಶರಣಪ್ಪ ಈಳಗೇರ, ಸಂತೋಷಿಮಾ ಜೋಶಿ, ಹನುಮಂತ ರಾಥೋಡ್, ಶಿವಪ್ಪ ವಾದಿ, ರಂಗನಾಥ, ಕಲ್ಲೇಶಪ್ಪ ಕರಮುಡಿ, ಲಕ್ಷ್ಮಣ ಕಾಳಿ, ಬಸವರಾಜ ಅಧಿಕಾರಿ, ಮಹೇಶ ಭೂತೆ, ದೊಡ್ಡಯ್ಯ ಗುರುವಿನ್, ಡಿ.ಕೆ. ಪರಶುರಾಮ, ಶರಣಪ್ಪ ಅಡಿವಳ್ಳಿ, ಸುರೇಶ ಹೊಸಳ್ಳಿ, ಮಂಜುನಾಥ ರೊಟ್ಟಿ ಉಪಸ್ಥಿತರಿದ್ದರು.