ಬೆಲ್ ರಸ್ತೆ, ಬಸ್ ನಿಲ್ದಾಣ ರಸ್ತೆಯ ಮೂಲಕ ವಿದ್ಯಾರ್ಥಿಗಳು ಮನೆಗೆ ತೆರಳುವಾಗ ವಾಹನ ದಟ್ಟಣೆಯಿಂದ ಮಕ್ಕಳ ಓಡಾಟಕ್ಕೆ ಅನಾನುಕೂಲ ಉಂಟಾಗುತ್ತದೆ.

ಯಲ್ಲಾಪುರ: ವಾಹನ ದಟ್ಟಣೆಯ ಹಿನ್ನೆಲೆ ನಿತ್ಯ ಶಾಲಾ ಆರಂಭ ಹಾಗೂ ಮುಕ್ತಾಯದ ವೇಳೆ ಪಟ್ಟಣದ ಅಂಬೇಡ್ಕರ್ ಸರ್ಕಲ್ ಹಾಗೂ ಬಸ್ ನಿಲ್ದಾಣ ಬಳಿ ಸಂಚಾರ ಒತ್ತಡ ನೀಗಿಸುವ ಸಲುವಾಗಿ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕೆಂದು ಆಗ್ರಹಿಸಿ, ಲಾರಿ ಚಾಲಕರ ಸಂಘದಿಂದ ಪಿಎಸ್‌ಐ ರಾಜಶೇಖರ ವಂದಲಿ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಶಾಲೆ ಬಿಟ್ಟ ಸಂದರ್ಭದಲ್ಲಿ ವೈಟಿಎಸ್‌ಎಸ್, ಮಾದರಿ ಶಾಲೆಗಳಿಂದ ಸುಮಾರು ೬೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ನಿಲ್ದಾಣದ ಬಳಿ ಬರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ.

ಬೆಲ್ ರಸ್ತೆ, ಬಸ್ ನಿಲ್ದಾಣ ರಸ್ತೆಯ ಮೂಲಕ ವಿದ್ಯಾರ್ಥಿಗಳು ಮನೆಗೆ ತೆರಳುವಾಗ ವಾಹನ ದಟ್ಟಣೆಯಿಂದ ಮಕ್ಕಳ ಓಡಾಟಕ್ಕೆ ಅನಾನುಕೂಲ ಉಂಟಾಗುತ್ತದೆ. ಮಾದರಿ ಶಾಲೆಯ ಎದುರಿಗೆ ಬಸ್ ನಿಲ್ದಾಣ ರಸ್ತೆಯಲ್ಲಿ ಪಾದಾಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಮತ್ತು ಬೇಕಾಬಿಟ್ಟಿ ಬೀದಿಯಲ್ಲಿ ತರಕಾರಿ ವ್ಯಾಪಾರ ವಹಿವಾಟು ನಡೆಸಲಾಗುತ್ತದೆ.

ಭಯದ ನೆರಳಿನಲ್ಲಿಯೇ ವಿದ್ಯಾರ್ಥಿಗಳು ವಾಹನಗಳ ನಡುವೆ ರಸ್ತೆ ದಾಟಬೇಕಾಗಿದ್ದು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಶಾಲಾ ಪ್ರಾರಂಭ ಹಾಗೂ ಮುಕ್ತಾಯದ ವೇಳೆ ಪ್ರತಿನಿತ್ಯ ಪೊಲೀಸರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸಂತೋಷ ನಾರಾಯಣ ನಾಯ್ಕ, ಉಪಾಧ್ಯಕ್ಷ ಶಂಕರ ಅತ್ತರವಾಲ, ಕಾರ್ಯದರ್ಶಿ ಸಂದೀಪ ವಡ್ಡರ್, ಪ್ರಮುಖರಾದ ಅಶೋಕ ಮರಾಠೆ, ಸುನಿಲ್ ಮೊರಸ್ಕರ್, ಸಯ್ಯದ್, ಕರಿಂ ಖಾನ್, ಶ್ರೀನಿವಾಸ ಮುಂತಾದವರು ಇದ್ದರು. ಇಂದಿನಿಂದ ಸ್ವದೇಶಿ ವಸ್ತುಗಳ ಮಾರಾಟ, ಆಹಾರ ಮೇಳ

ಯಲ್ಲಾಪುರ: ಸಾಗರದ ಗಜಮುಖ ಇವೆಂಟ್ಸ್ ಗೌರಿ ಗಣೇಶ ಹಬ್ಬದ ಪ್ರಯುಕ್ತ ಯಲ್ಲಾಪುರ ವೆಂಕಟ್ರಮಣ ಮಠದಲ್ಲಿ ಸೆ. ೧೧, ೧೨, ೧೩ರಂದು ಸ್ವದೇಶಿ ವಸ್ತುಗಳ ಮಾರಾಟ ಮೇಳ ಮತ್ತು ಬೃಹತ್ ಆಹಾರ ಮೇಳ ಹಮ್ಮಿಕೊಂಡಿದೆ.ಇಲ್ಲಿ ನೈಸರ್ಗಿಕ ಸೌಂದರ್ಯವರ್ಧಕಗಳು, ಖಾದಿ ಉತ್ಪನ್ನಗಳು, ಆಯುರ್ವೇದ, ಗೃಹಾಲಂಕಾರ, ರೆಡಿಮೇಡ್ ಉಡುಪುಗಳು, ಚೆನ್ನಪಟ್ಟಣ ಬೊಂಬೆ, ೧ ಗ್ರಾಂ ಗೋಲ್ಡ್ ಜುವೆಲರಿ, ಹಪ್ಪಳ, ಸಂಡಿಗೆ, ಹೋಮ್ ಮೇಡ್ ಕಾಂಡಿಮೆಂಟ್ಸ್, ಉಪ್ಪಿನಕಾಯಿ, ಆದಿವಾಸಿ ಹರ್ಬಲ್ ಆಯಿಲ್, ಹ್ಯಾಂಡ್ ಮೇಡ್ ಬ್ಲೌಸ್‌ಗಳು, ಅಲ್ಲದೇ ವಿಶೇಷ ಖಾದ್ಯಗಳಾದ ಕರ್ಜಿಕಾಯಿ, ಚಕ್ಕುಲಿ, ಮೈಸೂರ್ ಪಾಕ್, ಜಿಲೇಬಿ, ವಡೆ, ಚಾಟ್ಸ್ ಇತ್ಯಾದಿ ವಸ್ತುಗಳ ಮಾರಾಟ ನಡೆಯುತ್ತದೆ ಎಂದು ಸಂಘಟನೆಯ ಪರವಾಗಿ ರಮೇಶ ಎಂ. ಮಾಧ್ಯಮಕ್ಕೆ ಮಾಹಿತಿ ನೀಡಿದರು. ಮೂರು ದಿನಗಳ ಅವಧಿಯಲ್ಲಿ ಬೆಳಗ್ಗೆ ೧೦ರಿಂದ ರಾತ್ರಿ ೧೦ರ ರವರೆಗೆ ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.