ಬರ ಪರಿಹಾರ ಜಮೆ ಮಾಡುವಂತೆ ಆಗ್ರಹ

| Published : May 22 2024, 12:56 AM IST

ಸಾರಾಂಶ

ಹುಣಸಗಿ ತಾಲೂಕಿನ ಎಲ್ಲಾ ಅರ್ಹ ರೈತರಿಗೆ ಸೂಕ್ತ ಪರಿಹಾರ ಹಣ ಜಮೆ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಹುಣಸಗಿ ತಾಲೂಕಿನ ಎಲ್ಲಾ ಅರ್ಹ ರೈತರಿಗೆ ಸೂಕ್ತ ಪರಿಹಾರ ಹಣ ಜಮೆ ಮಾಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ವತಿಯಿಂದ ಹುಣಸಗಿ ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ರೈತ ಸಂಘದ ತಾಲೂಕಾಧ್ಯಕ್ಷ ಮಲ್ಲನಗೌಡ ನಗನೂರು ಮಾತನಾಡಿ, ರಾಜ್ಯದಲ್ಲಿ ಬರದಿಂದ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದು, ಬರ ಪರಿಹಾರ ಸಕಾಲದಲ್ಲಿ ರೈತರಿಗೆ ಕೈಗೆ ತಲುಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರ ರೈತರ ನೆರವಿಗೆ ಬರುವ ನಿಟ್ಟಿನಲ್ಲಿ ಅಲ್ಪ ಪ್ರಮಾಣದ ಪರಿಹಾರವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಸರ್ಕಾರದ ನಿರ್ದೇಶನದಂತೆ ರೈತರು ಸೂಕ್ತ ಫ್ರೂಟ್ಸ್ಐಡಿ ಹಾಗೂ ಎಲ್ಲ ಕಾಗದ ಪತ್ರಗಳನ್ನು ಸಲ್ಲಿಸಿದರೂ ಇನ್ನು ಬಹುತೇಕ ರೈತರ ಖಾತೆಗೆ ಪರಿಹಾರದ ಹಣ ಜಮೆಯಾಗುತ್ತಿಲ್ಲ. ಅಲ್ಲದೆ ಕಂದಾಯ ಇಲಾಖೆ ಅಧಿಕಾರಿಗಳು ರೈತರಿಂದ ಅನಗತ್ಯವಾಗಿ ಹಣ ಕೇಳುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದರು.

ತಕ್ಷಣ ರೈತರ ಖಾತೆಗಳಿಗೆ ಬರ ಪರಿಹಾರ ಹಣ ಜಮೆ ಮಾಡುವಂತೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಸಂಘಟನೆ ವತಿಯಿಂದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ವೇಳೆ ರಾಜ್ಯ ರೈತ ಸಂಘದ ಮುಖಂಡರಾದ ಶ್ರೀಕಾಂತ ದೇಸಾಯಿ, ಅಂಬರೀಷ ಅರಕೇರಾ, ಸತೀಶ ರಸ್ತಾಪುರ, ದ್ಯಾಮಣ್ಣ ರಾಯನಪಾಳ, ಅಭಿಲಾಷ ಪತ್ತಾರ, ಭೀಮಣ್ಣ ಅರಕೇರಾ ಸೇರಿದಂತೆ ಇತರರಿದ್ದರು.