ಬೆಳೆನಷ್ಟಕ್ಕೊಳಗಾದ ಎಲ್ಲಾ ರೈತರಿಗೂ ಬರ ಪರಿಹಾರ ವಿತರಿಸಲು ಆಗ್ರಹ

| Published : May 21 2024, 12:41 AM IST / Updated: May 21 2024, 02:29 PM IST

ಬೆಳೆನಷ್ಟಕ್ಕೊಳಗಾದ ಎಲ್ಲಾ ರೈತರಿಗೂ ಬರ ಪರಿಹಾರ ವಿತರಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬರ ಪರಿಹಾರ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಬೆಳೆ ನಷ್ಟಕ್ಕೊಳಗಾಗಿರುವ ಎಲ್ಲ ರೈತರಿಗೂ ಸಮರ್ಪಕವಾಗಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

 ಶ್ರೀರಂಗಪಟ್ಟಣ :  ಬರ ಪರಿಹಾರ ಘೋಷಣೆ ಮಾಡಿರುವ ರಾಜ್ಯ ಸರ್ಕಾರ ಬೆಳೆ ನಷ್ಟಕ್ಕೊಳಗಾಗಿರುವ ಎಲ್ಲ ರೈತರಿಗೂ ಸಮರ್ಪಕವಾಗಿ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿ, ತಾಲೂಕಿನಲ್ಲಿ 16000 ರಿಂದ 17000 ಖಾತೆದಾರ ರೈತರಿದ್ದು, ಅದರಲ್ಲಿ ಕೇವಲ 409 ಜನರಿಗೆ ಮಾತ್ರ ಪರಿಹಾರಕೊಟ್ಟು ಕೈ ತೊಳಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಜಲಾನಯನದ ರೈತರಿಗೆ ಅಪಾರ ನಷ್ಟವಾಗಿದೆ. ಸರ್ಕಾರ ರೈತರಿಗೆ ನೀರು ಬಿಡದೇ ಬರ ತಂದ್ದೊಡ್ಡಿದೆ. ರೈತರ ಬದುಕು ಸಂಕಷ್ಟಕ್ಕೆ ದೂಡಿರುವುದರಿಂದ ರೈತರ ಪರಿಸ್ಥಿತಿ ಬಹಳ ಕಷ್ಟಕರವಾಗಿದೆ ಎಂದು ದೂರಿದರು.

ರೈತರು ಬದುಕನ್ನು ಕಟ್ಟಿಕೊಳ್ಳಲು ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಕಾಮಗಾರಿ ನೆಪವೊಡ್ಡಿ ನೀರಿದ್ದರೂ ಬೆಳೆಗೆ ನೀರು ಕೊಡದೇ ಬರಗಾಲದ ಸನ್ನಿವೇಷ ಸೃಷ್ಟಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಂದಾಯ ಸಚಿವರು ಎಲ್ಲಾ ರೈತರಿಗೂ ಬರ ಪರಿಹಾರ ಕೊಡುತ್ತೇವೆ ಎಂದು ಹೇಳಿ ಈಗ ಕೇವಲ ಬೆರಳೆಣಿಕೆಯಷ್ಟು ರೈತರಿಗೆ ಪರಿಹಾರಕೊಟ್ಟು ತಾರತಮ್ಯ ಮಾಡಲು ಮುಂದಾಗಿದೆ. ಕಾವೇರಿ ಕೊಳ್ಳದ ಎಲ್ಲಾ ರೈತರಿಗೆ ಸರ್ಮಪಕವಾಗಿ 1 ಎಕರೆಗೆ 10 ಸಾವಿರ ರು. ಬರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಸಿಡಿಲು ಬಡಿದು ಹಸು ಸಾವು

ಪಾಂಡವಪುರ:ಸಿಡಿಲು ಬಡಿದು ಒಂದು ಹಸು ಸ್ಥಳದಲ್ಲೇ ಮೃತಪಟ್ಟು, ಮತ್ತೊಂದು ಹಸು ಹಾಗೂ ಯುವಕ ಗಾಯಗೊಂಡಿರುವ ಘಟನೆ ತಾಲೂಕಿನ ಇಳ್ಳೇನಹಳ್ಳಿಯಲ್ಲಿ ಭಾನುವಾರ ನಡೆದಿದೆ.

ಗ್ರಾಮದ ಬೆಟ್ಟೇಗೌಡರಿಗೆ ಸೇರಿದ ಹಸುಗಳನ್ನು ಜಮೀನು ಬಳಿಯಿಂದ ಮೊಮ್ಮಗ ಮನೋಜ್ ಹಿಡಿದುಕೊಂಡು ಮನೆಗೆ ಬರುವ ವೇಳೆ ಭಾರೀ ಮಳೆ ವೇಳೆ ಸಿಡಿಲು ಬಡಿದು 1.20 ಲಕ್ಷ ರು.ಬೆಲೆ ಬಾಳುವ ಹಸು ಸಾವನ್ನಪ್ಪಿದೆ. 

ಮತ್ತೊಂದು 80 ಸಾವಿರ ಬೆಲೆ ಬಾಳುವ ಹಸು ಅನಾರೋಗ್ಯಕ್ಕೀಡಾಗಿದೆ. ಘಟನೆ ವೇಳೆ ಸ್ಥಳದಲ್ಲಿದ್ದ ಮನೋಜ್ ಕೂಡ ಸಿಡಿಲಿನ ಆಘಾತದಿಂದ ಅಸ್ವಸ್ಥಗೊಂಡಿದ್ದು ಈತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಈ ವೇಳೆ ಗ್ರಾಮ ಆಡಳಿತಾಧಿಕಾರಿ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸುವುದಾಗಿ ಭರವಸೆ ನೀಡಿದ್ದಾರೆ.