ಸಾರಾಂಶ
ಈ ಬಾರಿ ವಿತರಣೆಯಲ್ಲಿ ಹಾಲಸಿಂಗನಹಳ್ಳಿಯ 20ಕ್ಕೂ ಹೆಚ್ಚು ಪಡಿತರದಾರಿಗೆ ಪಡಿತರ ವಿತರಣೆಯಾಗದೇ ಅನ್ಯಾಯವಾಗಿದ್ದು, ಕೂಡಲೇ ಟಿಎಪಿಸಿಎಂಎಸ್ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪ್ರತಿಯೊಬ್ಬರಿಗೂ ಪಡಿತರ ಸಿಗುವಂತೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕು ಟಿಎಪಿಸಿಎಂಎಸ್‌ಯಿಂದ ಹಾಲಸಿಂಗನಹಳ್ಳಿಯ 113 ನ್ಯಾಯಬೆಲೆ ಅಂಗಡಿಯಲ್ಲಿ 20ಕ್ಕೂ ಹೆಚ್ಚು ಪಡಿತರದಾರರಿಗೆ ಪಡಿತರ ವಿತರಣೆ ಮಾಡಿಲ್ಲ ಎಂದು ಪ್ರತಿಭಟನೆ ನಡೆಸಿದರು.ಗ್ರಾಪಂ ಸದಸ್ಯೆ ಶಿವಮ್ಮ ಬಸವೇಗೌಡ ಮಾತನಾಡಿ, ನಮ್ಮಲ್ಲಿ ಇದ್ದ ನ್ಯಾಯಬೆಲೆ ಅಂಗಡಿ ಸೂಪರ್ ಸೀಡ್ ಆದ ನಂತರ ಟಿಎಪಿಸಿಎಂಎಸ್ ವತಿಯಿಂದ ಪಡಿತರ ವಿತರಣೆ ಮಾಡಲಾಗುತ್ತಿದೆ. ತಿಂಗಳ ಕೊನೆಯ ದಿನದಲ್ಲಿ ಪಡಿತರ ವಿತರಿಸಲು ಬರುವ ಸಿಬ್ಬಂದಿ ಮಂಗಳವಾರ ಮಧ್ಯಾಹ್ನ 2:30 ರಿಂದ ಸಂಜೆ 4 ರವರೆಗೂ ಮಾತ್ರ ಪಡಿತರ ವಿತರಿಸಿ ಉಳಿದ ಪಡಿತರದಾರರಿಗೆ ಮುಂದಿನ ತಿಂಗಳು ವಿತರಿಸುತ್ತೇನೆ ಎಂದು ಹೋಗಿದ್ದಾರೆ. ಇದರಿಂದ ಕೆಲವು ಪಡಿತರದಾರರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ.
ಒಂದು ತಿಂಗಳು ಮಾತ್ರ ಈ ಸಮಸ್ಯೆಯಿದ್ದರೆ ಬಗೆಹರಿಸಬಹುದು. ಆದರೆ, ಇಲ್ಲಿ ಪ್ರತಿ ತಿಂಗಳೂ ಇದೇ ರೀತಿ 20 ರಿಂದ 25 ಪಡಿತರದಾರರಿಗೆ ಪಡಿತರ ಧಾನ್ಯ ಸಿಗದೇ ಅನ್ಯಾಯವಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಹಾಲಸಿಂಗನಹಳ್ಳಿ, ಕೋಡಿಪಾಳ್ಯ ಉಜ್ಜಗಲ್, ಅರಳೆಗುಡ್ಡೆ ಪಾಳ್ಯ ಗ್ರಾಮಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿದ್ದು, ಈ ಬಾರಿ ವಿತರಣೆಯಲ್ಲಿ ಹಾಲಸಿಂಗನಹಳ್ಳಿಯ 20ಕ್ಕೂ ಹೆಚ್ಚು ಪಡಿತರದಾರಿಗೆ ಪಡಿತರ ವಿತರಣೆಯಾಗದೇ ಅನ್ಯಾಯವಾಗಿದ್ದು, ಕೂಡಲೇ ಟಿಎಪಿಸಿಎಂಎಸ್ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿ ಪ್ರತಿಯೊಬ್ಬರಿಗೂ ಪಡಿತರ ಸಿಗುವಂತೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಪಡಿತರ ವಿತರಕ ಮುನಿರಾಜು ಮಾತನಾಡಿ, ಕಳೆದ ಮೂರು ತಿಂಗಳಿಂದಲೂ ಮೂರು ಗ್ರಾಮಗಳು ಸೇರಿ 238 ಕಾರ್ಡ್‌ದಾರರಿಗೆ ಪಡಿತರ ವಿತರಣೆ ಮಾಡುತ್ತಿದ್ದೇನೆ. ಕೆಲವು ಗ್ರಾಮಗಳಿಗೆ ಪಡಿತರ ಆಹಾರ ಕೊರತೆಯಾಗುತ್ತಿದ್ದು, ನಾನು ಯಾವುದೇ ರೀತಿ ಮೋಸ ಮಾಡದೇ ಪಡಿತರ ವಿತರಿಸುತ್ತಿದ್ದೇನೆ. ಆದರೂ ಕೂಡ ಕೆಲವು ಗ್ರಾಮಗಳ ಪಡಿತರ ಕಾರ್ಡ್‌ದಾರರಿಗೆ ಆಹಾರದ ಕೊರತೆ ಆಗುತ್ತಿದ್ದು, ನಾಳೆ ಹಾಲಸಿಂಗಹಳ್ಳಿಯ ಉಳಿದ ಕಾರ್ಡ್‌ದಾರರಿಗೆ ಪಡಿತರ ವಿತರಿಸುತ್ತೇನೆ ಎಂದರು.
ಪ್ರತಿಭಟನೆಯಲ್ಲಿ ರಂಗನಾಥ್, ಯೋಗೇಶ್, ಗಿರೀಶ್, ಗಂಗಮ್ಮ ಭಾಗವಹಿಸಿದ್ದರು.