ಉಡುವಳ್ಳಿ ಕೆರೆಗೆ ವಿವಿ ಸಾಗರ ನೀರು ಹರಿಸಲು ಆಗ್ರಹ

| Published : Apr 08 2024, 01:01 AM IST

ಸಾರಾಂಶ

ವಿವಿ ಸಾಗರದ ನೀರನ್ನು ಉಡುವಳ್ಳಿ ಕೆರೆಗೆ ಹರಿಸುವಂತೆ ಒತ್ತಾಯಿಸಿ ಹಿರಿಯೂರು ತಾಲೂಕಿನ ಉಡುವಳ್ಳಿ ಗ್ರಾಮದಲ್ಲಿ ಹಲವು ಗ್ರಾಮಗಳ ಗ್ರಾಮಸ್ಥರು ಸಭೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಉಡುವಳ್ಳಿ ಕೆರೆಗೆ ವಿವಿ ಸಾಗರದ ನೀರು ಹರಿಸುವಂತೆ ಮನವಿ ಮಾಡಿರುವ ತಾಲೂಕಿನ ಉಡುವಳ್ಳಿ, ಯಲ್ಲದಕೆರೆ, ಗೌಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಗ್ರಾಮಸ್ಥರು, ಈ ಬಗ್ಗೆ ತಕ್ಷಣವೇ ಗಮನ ಹರಿಸದಿದ್ದರೆ ಬರುವ ಲೋಕಸಭಾ ಚುನಾವಣೆ ಮತದಾನ ಬಹಿಷ್ಕಾರ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಭಾನುವಾರ ಉಡುವಳ್ಳಿ ಗ್ರಾಮದಲ್ಲಿ ಸಭೆ ನಡೆಸಿದ ಈ ಗ್ರಾಮಸ್ಥರು, ಈಗಾಗಲೇ ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ. ಅಂತರ್ಜಲ ಮಟ್ಟ ಕುಸಿದಿದ್ದು ಕೊಳವೆಬಾವಿಗಳು ಬತ್ತುತ್ತಿವೆ. ಇದರಿಂದಾಗಿ ತೆಂಗು, ಅಡಕೆ, ಬಾಳೆ ಮುಂತಾದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಪ್ರತಿ ವರ್ಷ ಬೇಸಿಗೆಯಲ್ಲೂ ಇದೇ ರೀತಿಯ ತೊಂದರೆ ನಿರಂತರವಾಗಿ ಆಗುತ್ತಿದೆ. ಈ ಭಾಗದ ನೀರಿನ ಅಭಾವದ ಶಾಶ್ವತ ಪರಿಹಾರಕ್ಕಾಗಿ ವಿವಿ ಸಾಗರದ ಹಳೆ ಪಾಯದಿಂದ ಇಲಿ ಕಿವಿ ಭೂತಪ್ಪನ ದೇವಸ್ಥಾನದ ಬಳಿ ಫೀಡರ್ ಚಾನೆಲ್ ಮುಖಾಂತರ, ಇಲ್ಲವೇ ಪರಮೇನಹಳ್ಳಿಯ ಪಕ್ಕ ವೇದಾವತಿ ನದಿ ಏತ ನೀರಾವರಿ ಮೂಲಕ ನೀರು ಹರಿಸಿದರೆ ಅಂತರ್ಜಲಮಟ್ಟ ಸುಧಾರಿಸುತ್ತದೆ. ಈ ಭಾಗದ ಹಳ್ಳಿಗಳ ಜನರ ಕುಡಿಯುವ ನೀರು ಮತ್ತು ರೈತರ ಬೆಳೆಗಳಿಗೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಂ. ಉಮೇಶ್, ಸೋಮಶೇಖರ್, ಅಬ್ದುಲ್ ರೆಹಮಾನ್, ಲಕ್ಷ್ಮಿಕಾಂತ್, ರಂಗಸ್ವಾಮಿ, ಮಹಾಲಿಂಗಪ್ಪ, ಪೂಜಣ್ಣ, ಮಂಜುನಾಥ್, ರಮೇಶ್, ಶೇಖರಪ್ಪ, ತೇಜುಕುಮಾರ್, ನರಸಿಂಹಣ್ಣ, ಮಂಜುನಾಥ್ ಗೌಡ, ರಾಜೇಂದ್ರ, ರಾಮು, ಉಮೇಶ್ ಮುಂತಾದವರು ಹಾಜರಿದ್ದರು.