ನಿಗಮ ಮಂಡಳಿ ಮುಚ್ಚುವ ಶಿಫಾರಸು ಕೈಬಿಡಲು ಆಗ್ರಹ

| Published : Oct 20 2025, 01:04 AM IST

ಸಾರಾಂಶ

ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ನಿಗಮ ಮಂಡಳಿಗಳನ್ನು ಮುಚ್ಚಿಸುವಂತೆ ನೀಡಿರುವ ಶಿಫಾರಸ್ಸನ್ನು ಮಾನ್ಯ ಮಾಡಬಾರದೆಂದು ಆಗ್ರಹಿಸಿ, ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ

ಕನ್ನಡಪ್ರಭ ವಾರ್ತೆ ಶಿರಸಿ

ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ನಿಗಮ ಮಂಡಳಿಗಳನ್ನು ಮುಚ್ಚಿಸುವಂತೆ ನೀಡಿರುವ ಶಿಫಾರಸ್ಸನ್ನು ಮಾನ್ಯ ಮಾಡಬಾರದೆಂದು ಆಗ್ರಹಿಸಿ, ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯ ಆಡಳಿತ ಸುಧಾರಣಾ ಆಯೋಗವು 9ನೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ ದಕ್ಷತೆ ಮತ್ತು ಹೊಣೆಗಾರಿಕೆ ಹೆಚ್ಚಿಸುವ ಉದ್ದೇಶದಿಂದ ಸಾಕಷ್ಟು ಶಿಫಾರಸ್ಸು ಮಾಡಿದೆ. ಅವುಗಳಲ್ಲಿ 7 ನಿಗಮ ಮಂಡಳಿಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಶಿಫಾರಸ್ಸು ಮಾಡಿದೆ. ಅದರಲ್ಲಿ ಅತ್ಯಂತ ಮಹತ್ವದ್ದಾಗಿರುವ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ಕರ್ನಾಟಕ ಅಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್, ಕರ್ನಾಟಕ ರಾಜ್ಯ ಅಗ್ರೋ ಕಾರ್ನ್ ಪ್ರೊಡಕ್ಟ್ ಲಿಮಿಟೆಡ್‌ಗಳೂ ಸೇರಿವೆ. ಆಡಳಿತದಲ್ಲಿನ ಸಾಮರ್ಥ್ಯ ಮತ್ತು ದಕ್ಷತೆಯನ್ನು ಹೆಚ್ಚಿಸುವ ಸಹಕಾರಿಯಾಗುವುದಕ್ಕಾಗಿಯೇ ವಿವಿಧ ಇಲಾಖೆಗಳಲ್ಲಿ ನಿಗಮ ಮಂಡಳಿಗಳು ರೂಪಿತಗೊಂಡು ಕಾರ್ಯಾಚರಣೆಯಲ್ಲಿವೆ. ಅದೇ ರೀತಿಯಲ್ಲಿ ತಳ ಸಮುದಾಯಗಳ ಶ್ರೇಯೋಭಿವೃದ್ಧಿಯಲ್ಲಿ ಇಲಾಖೆಯ, ಉದ್ದೇಶಿತ ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಸಬಲೀಕರಣ ಯೋಜನೆಗಳ ಪರಿಣಾಮಕಾರಿ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಪಾತ್ರ ಹಾಗೂ ರಾಜ್ಯ ಕೃಷಿ ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆ, ಕಟಾವು, ಸಂಸ್ಕರಣ, ಸಂಗ್ರಹಣೆ ಮತ್ತು ಮರಾಟದಲ್ಲಿ ಕರ್ನಾಟಕ ಅಗ್ರೊ ಇಂಡಸ್ಟ್ರೀಸ್ ಕಾರ್ಪೊರೇಷನ್ ಹಾಗೂ ಕರ್ನಾಟಕ ರಾಜ್ಯ ಅಗ್ರೋ ಕಾರ್ನ್ ಪ್ರೊಡಕ್ಟ್ ಲಿಮಿಟೆಡ್‌ಗಳ ಹೊಣೆಗಾರಿಕೆ ಅತ್ಯಂತ ಅಮೂಲ್ಯವಾಗಿದೆ. ನಿಗಮ ಮಂಡಳಿಗಳ ಉದ್ದೇಶ ಸಾಫಲ್ಯಗೊಳಿಸುವಲ್ಲಿ ಆಯಾ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಪಾಲ್ಗೊಳ್ಳಲು ದೊರೆಯುವ ಅವಕಾಶವಾಗಿದೆ. ಹೀಗಿರುವಾಗ ಆಡಳಿತದಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆ ಹೆಚ್ಚಿಸುವುದಕ್ಕಾಗಿ ಅಸಂಬದ್ದ ಕಾರಣದೊಂದಿಗೆ ಸಂಪೂರ್ಣವಾಗಿ ಮುಚ್ಚುವುದಕ್ಕೆ ಸಲಹೆ ನೀಡಿರುವುದು ನಿಜಕ್ಕೂ ಹಾಸ್ಯಾಸ್ಪದ ಮತ್ತು ಕಡೆಗಣನೆಗೊಳಪಟ್ಟ ಸಮುದಾಯ ಹಾಗೂ ವಿಶಾಲ ರೈತ ಸಮುದಾಯದೆಡೆ ತೋರಿದ ನಿಷ್ಕಾಳಜಿಯಾಗಿದೆ. ಆದ್ದರಿಂದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ನಿಗಮ ಮಂಡಳಿಗಳನ್ನು ಮುಚ್ಚುವಂತೆ ನೀಡಿರುವ ಶಿಫಾರಸ್ಸನ್ನು ಮಾನ್ಯ ಮಾಡದೆ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ವೇಳೆ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗೇಶ ನಾಯ್ಕ ಕಾಗಲ್, ಪ್ರಮುಖರಾದ, ಕನ್ನೇಶ ಕೊಲಸಿರ್ಸಿ, ರಾಜೇಶ ದೇಶಭಾಗ, ಜುಬೇರ್ ಜುಕಾಕೊ, ಎಂ.ಎನ್. ನಾಯ್ಕ, ಗಿರೀಶ ನಾಯ್ಕ ಚಿಪಗಿ ಮತ್ತಿತರರು ಇದ್ದರು.