ಸಾರಾಂಶ
ಕನ್ನಡಪ್ರಭವಾರ್ತೆ ಚಿತ್ರದುರ್ಗಹಿಂದೂ ಧಾರ್ಮಿಕ ಮತ್ತು ತೀರ್ಥ ಕ್ಷೇತ್ರಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಿಗೊಳಿಸಿ ಭಕ್ತರ ನಿರ್ವಹಣೆಗೆ ನೀಡುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಗುರುವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷತ್‍ನ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಜಗನ್ನಾಥ್ ಶಾಸ್ತ್ರಿ, ಭಾರತದಾದ್ಯಂತ ಕೋಟ್ಯಂತರ ಹಿಂದೂಗಳಿಗೆ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ಪ್ರಸಾದ ರೂಪದ ಲಾಡುಗಳ ಬಗ್ಗೆ ಅನಾದಿಕಾಲದಿಂದಲೂ ಅಪಾರ ನಂಬಿಕೆ ಇದೆ. ಆದರೆ ತಿರುಪತಿಯಲ್ಲಿ ನೀಡಲಾಗುತ್ತಿರುವ ಲಾಡು ತಯಾರಿಕೆಯಲ್ಲಿ ಸಾಂಪ್ರದಾಯಿಕವಾಗಿ ಬಳಸಲಾಗುವ ಶುದ್ಧ ಹಸುವಿನ ತುಪ್ಪದ ಬದಲು ಗೋಮಾಂಸದ ಕೊಬ್ಬು, ಹಂದಿಯ ಚರ್ಮದ ಕೊಬ್ಬು, ಮೀನಿನ ಎಣ್ಣೆ ಸೇರಿಸುತ್ತಿದ್ದರೆಂಬ ವಿಷಯ ತೀವ್ರ ಆಘಾತಕ್ಕೆ ಈಡು ಮಾಡಿದೆ ಎಂದರು.ಧರ್ಮದ್ರೋಹಿಗಳು ಮತ್ತು ಸರ್ಕಾರಿ ಲಂಚಕೋರರು ದುರುದ್ದೇಶದಿಂದ ಮತ್ತು ಸ್ವಾರ್ಥದಿಂದ ತಮ್ಮ ಧರ್ಮಕ್ಕೆ ದ್ರೋಹ ಬಗೆದಿರುವುದಲ್ಲದೆ ಕೋಟ್ಯಂತರ ಹಿಂದು ಭಕ್ತಾದಿಗಳು ಮತ್ತು ವಿಶ್ವದ ಆರನೇ ಒಂದರಷ್ಡು ಜನಸಂಖ್ಯೆ ಹೊಂದಿರುವ ಹಿಂದೂಗಳ ಮನಸ್ಸಿಗೆ ಘಾಸಿಯನ್ನುಂಟುಮಾಡಿದ್ದಾರೆ. ಈ ಧರ್ಮದ್ರೋಹಿ ಕಾರ್ಯದಲ್ಲಿ ಭಾಗಿಯಾಗಿರುವವರು ಹಿಂದೂಗಳನ್ನು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಪರಿವರ್ತಿಸಲು ಹುನ್ನಾರ ನಡೆಸುತ್ತಿದ್ದಾರೆ ಎನ್ನುವ ಶಂಕೆಯಿದೆ ಇದೆ ಎಂದು ಆರೋಪಿಸಿದರು.
ಸನಾತನ ವಿರೋಧಿ ಶಕ್ತಿಗಳು ಮಹಾಪ್ರಸಾದದ ತಯಾರಿಕೆ ವಿಷಯದಲ್ಲಿ ನಮ್ಮ ಧಾರ್ಮಿಕ ಹಕ್ಕುಗಳ ಮೇಲೆ ದಾಳಿ ಮಾಡಿವೆ. ಅದಕ್ಕಿಂತಲೂ ಮಿಗಿಲಾಗಿ ದೇವಸ್ಥಾನದಲ್ಲಿ ಭಕ್ತಾದಿಗಳು ದೇವರಿಗೆ ಅರ್ಪಿಸುವ ದೇಣಿಗೆ ಮತ್ತು ಕಾಣಿಕೆಗಳ ದುರುಪಯೋಗ ಆಗುತ್ತಿದೆ. ಸರ್ಕಾರದ ಅಧಿಕಾರಿಗಳು ಮತ್ತು ರಾಜಕಾರಣಿಗಳು ಈ ಹುಂಡಿ ಹಣವನ್ನು ಧರ್ಮದ ವಿರುದ್ಧ ಬಳಸುತ್ತಿರುವುದು ಭಕ್ತರಿಗೆ ಅಪಾರವಾದ ನೋವು ತಂದಿದೆ ಎಂದರು. ದೇಶದ ಸಂವಿಧಾನದಲ್ಲಿ ಎಲ್ಲ ಧರ್ಮದವರಿಗೂ ಅವರದ್ದೇ ಆದ ಮೌಲ್ಯಗಳು ಇವೆ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಅದರೆ ಸರ್ಕಾರಗಳು ಚರ್ಚ್ ಮತ್ತು ಮಸೀದಿಗಳನ್ನು ಬಿಟ್ಟು ಕೇವಲ ಹಿಂದೂ ದೇವಾಲಯಗಳ ಮೇಲೆ ಮಾತ್ರ ನಿಯಂತ್ರಣ ಇರಿಸಿಕೊಂಡಿರುವುದನ್ನು ಹಿಂದೂಗಳ ಧಾರ್ಮಿಕ ಸ್ಥಳಗಳಿಗೆ ಬಗೆಯುತ್ತಿರುವ ಮೋಸವೆಂದು ಪರಿಗಣಿಸಲಾಗುತ್ತಿದೆ ಎಂದು ತಿಳಿಸಿದರು.ಸ್ವಾತಂತ್ರ್ಯ ಪಡೆದ 77 ವರ್ಷಗಳ ನಂತರವೂ ಹಿಂದೂಗಳು ನಮ್ಮ ದೇವಾಲಯಗಳನ್ನು ನಿರ್ವಹಿಸಲು ಅವಕಾಶ ಹೊಂದಲಾಗಿಲ್ಲ. ಅಲ್ಪಸಂಖ್ಯಾತರು ತಮ್ಮ ಧಾರ್ಮಿಕ ಸಂಸ್ಥೆಗಳನ್ನು ನಿರ್ವಹಿಸಲು ಅವಕಾಶ ಪಡೆದಿದ್ದಾರೆ. ಅದನ್ನು ದುರುಪಯೋಗಪಡಿಸಿಕೊಂಡು ಈ ದೇಶಕ್ಕೇ ದ್ರೋಹ ಬಗೆಯುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ತಿರುಪತಿ ಬಾಲಾಜಿ ಮತ್ತು ಇತರ ಸ್ಥಳಗಳಲ್ಲಿ ನಡೆದಿರುವ ಘಟನೆ ಗಮನಿಸಿದರೆ ಹಿಂದೂ ಸಮಾಜವು ತಮ್ಮ ದೇವಾಲಯಗಳ ಪಾವಿತ್ರ್ಯತೆ ಕಾಪಾಡಿಕೊಳ್ಳಬೇಕೆಂದರೆ ಅವು ಸರ್ಕಾರದ ನಿಯಂತ್ರಣದಿಂದ ಮುಕ್ತವಾದರೆ ಮಾತ್ರ ಸಾಧ್ಯ. ರಾಜ್ಯ ಸರ್ಕಾರವು ತಕ್ಷಣವೇ ಎಲ್ಲಾ ಹಿಂದೂ ದೇವಾಲಯಗಳನ್ನು ತಮ್ಮ ನಿಯಂತ್ರಣದಿಂದ ಬಿಡುಗಡೆ ಮಾಡಿ, ಪ್ರಾದೇಶಿಕ ವ್ಯವಸ್ಥೆಯಡಿಯಲ್ಲಿ ಹಿಂದೂ ಸಂತರು ಮತ್ತು ಭಕ್ತರಿಗೆ ಒಪ್ಪಿಸಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆಗ್ರಹಿಸಲಾಗಿದೆ.ಶಾಸಕ ಕೆ.ಸಿ.ವಿರೇಂದ್ರ, ಬಿಜೆಪಿ ಮುಖಂಡ ಅನಿತ್ ಕುಮಾರ್, ಉಮೇಶ್ ಕಾರಜೋಳ, ವಿಶ್ವ ಹಿಂದೂ ಪರಿಷತ್‍ನ ಪ್ರಭಂಜನ್, ಮುಖಂಡರಾದ ಬದರಿನಾಥ್, ನಯನ ಪ್ರತಿಭಟನೆ ನೇತೃತ್ವ ವಹಿಸಿದ್ದರು.