ಇತ್ತೀಚೆಗೆ ಬಿಡುಗಡೆಗೊಂಡಿರುವ ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ವಲಯವೆಂದು ಸೇರ್ಪಡೆಗೊಂಡಿರುವ ಕುಂದಚೇರಿ ಚೆಟ್ಟಿಮಾನಿ ಗ್ರಾಪಂ ವ್ಯಾಪ್ತಿಯ ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮವನ್ನು ತಕ್ಷಣ ಕೈಬಿಡಬೇಕೆಂದು ಈ ಭಾಗದ ಗ್ರಾಮಸ್ಥರು, ರೈತರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ.
ಮಡಿಕೇರಿ: ಇತ್ತೀಚೆಗೆ ಬಿಡುಗಡೆಗೊಂಡಿರುವ ಕಸ್ತೂರಿ ರಂಗನ್ ವರದಿಯಲ್ಲಿ ಪರಿಸರ ಸೂಕ್ಷ್ಮ ವಲಯವೆಂದು ಸೇರ್ಪಡೆಗೊಂಡಿರುವ ಕುಂದಚೇರಿ ಚೆಟ್ಟಿಮಾನಿ ಗ್ರಾಪಂ ವ್ಯಾಪ್ತಿಯ ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮವನ್ನು ತಕ್ಷಣ ಕೈಬಿಡಬೇಕೆಂದು ಈ ಭಾಗದ ಗ್ರಾಮಸ್ಥರು, ರೈತರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ.ಗ್ರಾಪಂ ಸಭಾಂಗಣದಲ್ಲಿ ಮಂಗಳವಾರ ಸಭೆ ನಡೆಸಿ, ಜು. 27ರಂದು 7ನೇ ಬಾರಿಗೆ ಬಿಡುಗಡೆಗೊಂಡ ಕಸ್ತೂರಿ ರಂಗನ್ ವರದಿಯಲ್ಲಿ ಕುಂದಚೇರಿ ಮತ್ತು ಕೋಪಟ್ಟಿ ಗ್ರಾಮವನ್ನು ಸೇರಿಸಿರುವ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಕೆದಂಬಾಡಿ ಕೀರ್ತಿ ಕುಮಾರ್ ಅವರು ಮಾತನಾಡಿ, ಕಸ್ತೂರಿ ರಂಗನ್ ವರದಿಯಿಂದ ಜನರಿಗೆ ಆಗುವ ತೊಂದರೆ ಮತ್ತು ಅನಾನುಕೂಲದ ಬಗ್ಗೆ ಮಾಹಿತಿ ನೀಡಿದರು.ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಕೆ.ಯು. ಹ್ಯಾರೀಶ್ ಮಾತನಾಡಿ, ಕಸ್ತೂರಿ ರಂಗನ್ ವರದಿಗೆ ಸಂಬಂಧಪಟ್ಟಂತೆ ಗ್ರಾಪಂ ವ್ಯಾಪ್ತಿಯ ಸಾರ್ವಜನಿಕರು 2012ರಲ್ಲಿ ಸಭೆ ನಡೆಸಿ ಎರಡು ಗ್ರಾಮಗಳನ್ನು ಕೈ ಬಿಡುವಂತೆ ಒತ್ತಾಯಿಸಿ ಅಂದಿನ ಸರಕಾರಕ್ಕೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಕುಂದಚೇರಿ ಹಾಗೂ ಕೋಪಟ್ಟಿ ಗ್ರಾಮದಲ್ಲಿ ಶತಮಾನಗಳಿಂದ ಬಡ ಜನರು ಭತ್ತ, ಕಾಫಿ, ಕರಿಮೆಣಸು, ಏಲಕ್ಕಿ, ಬಾಳೆ, ಅಡಿಕೆ, ತೆಂಗು ಮತ್ತಿತರ ಮಿಶ್ರ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅಲ್ಲದೆ 1979, 1981, 1983, 1987ರಲ್ಲಿ ನಿವೃತ್ತಿ ಹೊಂದಿದ ಯೋಧರಿಗೆ, ಪರಿಶಿಷ್ಟ ಜಾತಿ, ಪಂಗಡದವರಿಗೆ, ಕಾರ್ಮಿಕರಿಗೆ ಹಾಗೂ ಕೃಷಿಕರಿಗೆ ಜಾಗದ ಹಕ್ಕು ಪತ್ರ, ಪಹಣಿ ಪತ್ರ ನೀಡಲಾಗಿದೆ. ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿರುವ ಜನರಿಗೆ ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲಿದೆ ಎಂದರು.
ಚೆಟ್ಟಿಮಾನಿ ಕೃಷಿ ಪತ್ತಿನ ಸಹಕಾರ ಸಂಘದ ದಬ್ಬಡ್ಕ ಈ. ಶ್ರೀಧರ್ ಮಾತನಾಡಿ, ಕೃಷಿಕರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಕಸ್ತೂರಿ ರಂಗನ್ ವರದಿಯಿಂದ ಕುಂದಚೇರಿ ಪಂಚಾಯಿತಿ ವ್ಯಾಪ್ತಿಯ ನಾಲ್ಕು ಗ್ರಾಮಗಳಿಗೆ ತೊಂದರೆಯಾಗುವುದು ನಿಶ್ಚಿತವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದರು.ಕಸ್ತೂರಿ ರಂಗನ್ ವರದಿ ಮತ್ತು ಆಕ್ಷೇಪಣೆ ಸಲ್ಲಿಸುವ ಕುರಿತು ಪ್ರಮುಖರಾದ ಸಿ.ಎಸ್. ರಶೀದ್ ಮಾಹಿತಿ ನೀಡಿದರು. ಪ್ರಮುಖರಾದ ಕೀರ್ತಿ ಉತ್ತಪ್ಪ, ಕೆದಂಬಾಡಿ ಜಯಪ್ರಕಾಶ್, ಕಾವೇರಮ್ಮ, ಮಂಗೇರಿರ ಜಗದೀಶ್ ಸೇರಿದಂತೆ ಹಲವರು ವರದಿಯನ್ನು ವಿರೋಧಿಸಿದರು ಮತ್ತು ಆಕ್ಷೇಪಣೆ ಸಲ್ಲಿಸುವಂತೆ ತಿಳಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಪಿ.ಬಿ. ದಿನೇಶ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಹಿರಿಯರಾದ ಕೆದಂಬಾಡಿ ಟಿ. ರಮೇಶ್, ಕೆದಂಬಾಡಿ ಬಿ. ಸುರೇಂದ್ರ, ಕೆದಂಬಾಡಿ ವಿಶು ಪ್ರವೀಣ್ ಕುಮಾರ್, ಪಾಣತ್ತಲೆ ಲೋಕನಾಥ್, ಕೋಡಿ ಹಂಸ, ವೇಣುಗೋಪಾಲ್, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಎ. ದಿನೇಶ್, ಹಿರಿಯರಾದ ಕೋಡಿ ತ್ಯಾಗರಾಜ್, ಇಂದುಮತಿ ರವೀಂದ್ರ, ಬಿ.ಎ. ಸುರೇಂದ್ರ, ಕೆ. ಶೇಖರ್, ಅಲ್ಲಂಗಡ ಉತ್ಪಪ್ಪ, ಮತ್ತಾರಿ ಶ್ರೀನಿವಾಸ್, ಕೆ.ಎಂ. ಇಸ್ಮಾಯಿಲ್, ಕೆ.ಎಸ್. ಅಣ್ಣಯ್ಯ, ಕಿರಣ್ ಮಂಜು, ಅನುಜ ರಾಕೇಶ್, ಕೆದಂಬಾಡಿ ಪ್ರಸನ್ನ ಕುಮಾರ್, ಪೊನ್ನೇಟಿ ಪ್ರಸನ್ನ ಪಿ.ಎಂ. ಇಬ್ರಾಹಿಂ, ಜಿಮ್ಮಿ ಕೆದಂಬಾಡಿ ಹರೀಶ್, ಕೆ. ಶಿವಕುಮಾರ್, ಸತ್ಯಭಾಮ ಸೋಮ ಮತ್ತಿತರರು ಸಭೆಯಲ್ಲಿ ಪಾಲ್ಗೊಡಿದ್ದರು.
ಸಭೆಯ ನಂತರ ಚೆಟ್ಟಿಮಾನಿ ಪಟ್ಟಣದಲ್ಲಿ 10 ನಿಮಿಷ ಸಾಂಕೇತಿಕವಾಗಿ ರಸ್ತೆ ತಡೆ ಪ್ರತಿಭಟನೆ ನಡೆಸಿ ವರದಿಯ ವಿರುದ್ಧ ಘೋಷಣೆ ಕೂಗಿದರು. ವರದಿಗೆ ಆಕ್ಷೇಪ ವ್ಯಕ್ತಪಡಿಸಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮೂಲಕ ಮನವಿ ಪತ್ರ ಸಲ್ಲಿಸಿದರು. ಆ.13ರಂದು ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸರಕಾರಕ್ಕೆ ಆಕ್ಷೇಪಣೆ ಪತ್ರ ಸಲ್ಲಿಸಲು ನಿರ್ಧರಿಸಿದರು.