ಸಾರಾಂಶ
ಹಾವೇರಿ: ತಾಲೂಕಿನ ಗಾಂಧಿಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಬಸ್‌ಪಾಸ್ ಹಾವೇರಿ ನಗರದವರೆಗೂ ವಿಸ್ತರಿಸುವಂತೆ ಒತ್ತಾಯಿಸಿ, ಗ್ರಾಮೀಣ ಭಾಗದ ಬಸ್ ಸಮಸ್ಯೆಗಳ ಪರಿಹಾರಕ್ಕಾಗಿ ಹಾಗೂ ನಗರ ಸಾರಿಗೆ ಪ್ರಾರಂಭಿಸಲು ಆಗ್ರಹಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗಾಂಧಿಪುರ ಕಾಲೇಜ್ ಎದುರು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಹಾವೇರಿ ಜಿಲ್ಲಾ ಕೇಂದ್ರದಿಂದ ದೂರವಿರುವ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉನ್ನತ ಅಭ್ಯಾಸಕ್ಕಾಗಿ ಗ್ರಾಮೀಣ ಭಾಗದ ೨೮೯೦ಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ವರ್ಷದಿಂದ ಸರ್ಕಾರಿ ಸಾರಿಗೆ ಇಲಾಖೆ ವಿದ್ಯಾರ್ಥಿ ವಿರೋಧಿ ನಿಯಮ ಜಾರಿ ಮಾಡಿ ಕೇವಲ ವಿದ್ಯಾರ್ಥಿಯ ಹಳ್ಳಿಯಿಂದ ಕಾಲೇಜಿನವರೆಗೆ ಮಾತ್ರ ಬಸ್ ಪಾಸ್ ವಿತರಣೆ ಮಾಡಿದ್ದು ನಗರಕ್ಕೆ ಹೋಗಲು ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡಬೇಕು ಎಂದು ಹೇಳುತ್ತಾರೆ. ಬಸ್‌ಪಾಸ್ ಪಡೆಯಲು ಕೂಡ ನಗರದಲ್ಲಿರುವ ಕಂಪ್ಯೂಟರ್ ಸೆಂಟರ್‌ಗೆ ಹೋಗಲೇಬೇಕು. ಇನ್ನೂ ಹಾಸ್ಟೆಲ್, ಸ್ಕಾಲರ್‌ಶಿಪ್, ಪುಸ್ತಕ ಖರೀದಿ, ಟ್ಯೂಶನ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್, ಸೇರಿದಂತೆ ಇತರೆ ಕೆಲಸಗಳಿಗೆ ಹೋಗುವ ಅನಿವಾರ್ಯತೆ ಇದ್ದೆ ಇರುತ್ತದೆ. ಆದರಿಂದ ಈ ನೀತಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಈ ನೀತಿಯನ್ನು ಹಿಂಪಡೆದು ಹಾವೇರಿ ನಗರದವರೆಗೂ ಬಸ್‌ಪಾಸ್ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಎಸ್‌ಎಫ್‌ಐ ಕಾಲೇಜ್ ಘಟಕ ಅಧ್ಯಕ್ಷ ತಿರಕಪ್ಪ ಬಾತಿ ಮಾತನಾಡಿ, ಹಳ್ಳಿಗಳಿಗೆ ಹೋಗಲು ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಸರಿಯಾದ ಸಮಯಕ್ಕೆ ಬಸ್ ಬರುವುದಿಲ್ಲ ಆದ್ದರಿಂದ ಸರಿಯಾಗಿ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಎಷ್ಟೋ ಬಸ್‌ಗಳು ಗಾಂಧಿಪುರದಲ್ಲಿ ವಿದ್ಯಾರ್ಥಿಗಳನ್ನು ನೋಡಿ ನಿಲ್ಲಿಸಿದೆ ಹೋಗುತ್ತವೆ. ಈಗಿರುವ ಬಸ್ ಪಾಸ್ ಅನ್ನು ನಗರದ ವರೆಗೂ ವಿಸ್ತರಿಸಬೇಕು, ಇಲ್ಲವಾದಲ್ಲಿ ಇಲ್ಲಿರುವ ಕಾಲೇಜನ್ನು ಹಾವೇರಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.ಮನವಿ ಪತ್ರ ಸ್ವೀಕರಿಸಿದ ಘಟಕ ವ್ಯವಸ್ಥಾಪಕ ಜಿ.ಬಿ.ಅಡರಗಟ್ಟಿ ಮಾತನಾಡಿ, ವಿದ್ಯಾರ್ಥಿಗಳು ನೀಡಿದ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲಾಗುವುದು ಹಾಗೂ ಅನೇಕ ಸಮಸ್ಯೆಗಳ ಕುರಿತು ಶೀಘ್ರದಲ್ಲೇ ಸಭೆಯನ್ನು ಕರೆದು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಎಸ್‌ಎಫ್‌ಐ ಉಪಾಧ್ಯಕ್ಷ ಲಿಂಗರಾಜ ಸಿ.ಎಂ, ಜ್ಯೋತಿ ಪಟ್ಟಣಶೆಟ್ಟಿ, ಸಹ ಕಾರ್ಯದರ್ಶಿ ಸಂಜನಾ ಬಾರ್ಕಿ, ವಿನುತಾ ಕೆ, ಪೂರ್ಣಿಮಾ ಎಸ್.ಎಚ್, ಶ್ವೇತಾ ಮಾಳಗೇರ, ಕಾರ್ತಿಕ ಹೊಂಬರಡಿ, ನಾಗರಾಜ ಆರ್.ಎಚ್, ಮನೋಜ್ ಮ್ಯಾಗೇರಿ, ಪ್ರವೀಣ್ ಅರಕಸಾಲಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಇದ್ದರು.