ಉದ್ಯೋಗ ಮೀಸಲಾತಿಯಲ್ಲಿ ಬಣಜಿಗ ಸಮುದಾಯವನ್ನು ಪ್ರವರ್ಗ–2ಎ ಅಡಿಯಲ್ಲಿಯೇ ಪರಿಗಣಿಸಿ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ತಕ್ಷಣ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಣಜಿಗ ಸಮಾಜ ಕುಷ್ಟಗಿ ತಾಲೂಕು ಘಟಕದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕುಷ್ಟಗಿ: ಉದ್ಯೋಗ ಮೀಸಲಾತಿಯಲ್ಲಿ ಬಣಜಿಗ ಸಮುದಾಯವನ್ನು ಪ್ರವರ್ಗ–2ಎ ಅಡಿಯಲ್ಲಿಯೇ ಪರಿಗಣಿಸಿ, ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವನ್ನು ತಕ್ಷಣ ಜಾರಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಣಜಿಗ ಸಮಾಜ ಕುಷ್ಟಗಿ ತಾಲೂಕು ಘಟಕದ ಪದಾಧಿಕಾರಿಗಳು ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ ಅವರ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಮೈಸೂರು ಜಿಲ್ಲೆಯ ಕೊಳ್ಳೇಗಾಲದ ಶಿಕ್ಷಕಿ ಸುಮಿತ್ರಾ ಅವರು ರಾಜ್ಯ ಸರ್ಕಾರದ ವಿರುದ್ಧ ಸಲ್ಲಿಸಿದ್ದ ಪ್ರಕರಣದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಬಣಜಿಗ ಸಮುದಾಯದ ವರ್ಗೀಕರಣ ಕುರಿತು ಮಹತ್ವದ ಆದೇಶ ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಒಂದು ಪ್ರವರ್ಗ ಹಾಗೂ ಉದ್ಯೋಗ ಮೀಸಲಾತಿಯಲ್ಲಿ ಮತ್ತೊಂದು ಪ್ರವರ್ಗದಡಿ ಪರಿಗಣಿಸುತ್ತಿರುವುದು ಸಂವಿಧಾನದ ಪರಿಚ್ಛೇದ 16(4)ರ ಆಶಯಕ್ಕೆ ವಿರುದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಆದ್ದರಿಂದ ಉದ್ಯೋಗ ಮೀಸಲಾತಿಯಲ್ಲಿಯೂ ಬಣಜಿಗ ಸಮುದಾಯವನ್ನು ಪ್ರವರ್ಗ–2ಎ ಅಡಿಯಲ್ಲಿಯೇ ಪರಿಗಣಿಸಿ ಸರ್ಕಾರ ಅಗತ್ಯ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದರು.

ಬಣಜಿಗ ಸಮುದಾಯವು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ್ದು, ಉದ್ಯೋಗ ಮೀಸಲಾತಿಯಲ್ಲಿ ಉಂಟಾಗಿರುವ ಅಸಮಾನ ವರ್ಗೀಕರಣದಿಂದ ಸಾವಿರಾರು ಯುವಕರು ಸರ್ಕಾರಿ ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿದ್ದರೂ ಅದರ ಅನುಷ್ಠಾನ ವಿಳಂಬವಾಗುತ್ತಿರುವುದು ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ನ್ಯಾಯಾಲಯದ ಆದೇಶವನ್ನು ಗೌರವಿಸಿ ತಕ್ಷಣ ಜಾರಿಗೆ ತರುವ ಮೂಲಕ ಬಣಜಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಸಂವಿಧಾನದ ಆಶಯದಂತೆ ಎಲ್ಲ ಹಿಂದುಳಿದ ಸಮುದಾಯಗಳಿಗೆ ಸಮಾನ ಅವಕಾಶ ದೊರೆಯಬೇಕು. ಬಣಜಿಗ ಸಮುದಾಯದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಶಿಕ್ಷಣ ಮತ್ತು ಉದ್ಯೋಗ ಎರಡರಲ್ಲೂ ಒಂದೇ ಪ್ರವರ್ಗದಡಿ ಮೀಸಲಾತಿ ಸೌಲಭ್ಯ ಪಡೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಯಾವುದೇ ವಿಳಂಬ ಮಾಡದೆ ಸಂಬಂಧಿಸಿದ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ವೀರೇಶ ಬಂಗಾರಶೆಟ್ಟರ, ತಾಲೂಕು ಅಧ್ಯಕ್ಷ ಶಶಿಧರ ಕವಲಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಪಾಟೀಲ್, ಗೌರವಾಧ್ಯಕ್ಷ ಸೋಮಶೇಖರ ವೈಜಾಪುರ, ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಪಡಿ, ಉಮೇಶ ಅಕ್ಕಿ, ರಾಜಶೇಖರ ಹೊಕ್ರಾಣಿ, ವೀರೇಶ ಕಲಕಬಂಡಿ, ಮಲ್ಲಿಕಾರ್ಜುನ ದೋಟಿಹಾಳ, ವೀರೇಶ ಕರಡಿ, ಸಚಿನ ಕುಡತಿನಿ ಉಪಸ್ಥಿತರಿದ್ದರು.