ಸಾರಾಂಶ
ಶಿರಸಿ: ಶಿರೂರು ಗುಡ್ಡ ಕುಸಿತದಲ್ಲಿ ಸಿಲುಕಿರುವ ಜಗನ್ನಾಥ ನಾಯ್ಕ ಹಾಗೂ ಲೋಕೇಶ ನಾಯ್ಕ ಅವರ ಶವಗಳನ್ನು ಹೊರತೆಗೆದು, ನೊಂದ ಕುಟುಂಬಗಳಿಗೆ ನೆರವು ಒದಗಿಸಬೇಕು ಎಂದು ಆಗ್ರಹಿಸಿ, ಬ್ರಹ್ಮರ್ಷಿ ನಾರಾಯಣಗುರು ಧರ್ಮ ಪರಿಪಾಲನಾ ಸಂಘ ಶಿರಸಿ ಹಾಗೂ ಯುವ ನಾಮಧಾರಿ ಸಂಘದಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಲ್ಲಿ ನಾಮಧಾರಿ ಸಮುದಾಯದ ಜಗನ್ನಾಥ ನಾಯ್ಕ ಮತ್ತು ಲೋಕೇಶ ನಾಯ್ಕ ಅವರು ದುರಂತದಲ್ಲಿ ಬಲಿಯಾಗಿದ್ದಾರೆ. ಅದರಲ್ಲಿ ಮೃತರಾದ ಕೇರಳ ಮೂಲದ ಲಾರಿ ಚಾಲಕ ಅರ್ಜುನನ ಶವವನ್ನು ಪತ್ತೆ ಹಚ್ಚಲು ಸರ್ಕಾರ ತೋರಿದ ತ್ವರಿತ ಆಸಕ್ತಿ ಮತ್ತು ಪ್ರಯತ್ನವು ಪ್ರಶಂಸನೀಯ. ಆದರೆ, ಅದೇ ಆಸಕ್ತಿ ಮತ್ತು ಪರಿಶ್ರಮವನ್ನು ನಮ್ಮ ರಾಜ್ಯದ ಸ್ಥಳೀಯರಾದ ಜಗನ್ನಾಥ ನಾಯ್ಕ ಮತ್ತು ಲೋಕೇಶ ನಾಯ್ಕ ಶವಗಳನ್ನು ಪತ್ತೆ ಹಚ್ಚಲು ಸರ್ಕಾರ ತೋರಿಸಿಲ್ಲ. ಈ ನಿರ್ಲಕ್ಷ್ಯವು ಅವರ ಕುಟುಂಬಗಳಿಗೆ ಮತ್ತು ನಾಮಧಾರಿ ಸಮುದಾಯದ ಜನರಿಗೆ ತೀವ್ರ ಬೇಸರವನ್ನು ಉಂಟುಮಾಡಿದೆ. ಸರ್ಕಾರವು ತಕ್ಷಣ ಕ್ರಮ ಕೈಗೊಂಡು ಈ ಅವೈಜ್ಞಾನಿಕ ಕಾಮಗಾರಿಗಳನ್ನು ನಡೆಸಿದ ಐಆರ್‌ಬಿ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಜಗನ್ನಾಥ ನಾಯ್ಕ ಮತ್ತು ಲೋಕೇಶ ನಾಯ್ಕ ಅವರ ಶವಗಳನ್ನು ಶೀಘ್ರವೇ ಪತ್ತೆಹಚ್ಚಿ, ನೊಂದ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸಲು ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮೂಲಕ ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಜಗದೀಶ ನಾಯ್ಕ, ಮಧುಕರ ನಾಯ್ಕ ಮತ್ತಿತರರು ಇದ್ದರು.
ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಜನಾಂದೋಲನ ಅಗತ್ಯಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆ ರಚನೆಯಾಗಬೇಕು ಎಂಬ ಬೇಡಿಕೆ ಧನಾತ್ಮಕವಾಗಿ ಕೇಳಿಬರುತ್ತಿದೆ. ಹೋರಾಟದ ಕುರಿತು ಘಟ್ಟದ ಮೇಲಿನ ಎಲ್ಲ ತಾಲೂಕುಗಳ ಜನರ ಹೃದಯ ತಟ್ಟುವ ಕೆಲಸ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ ಎಂದು ರಿಸೋರ್ಸ್ ಫಾರ್ ಕ್ರಿಯೆಟಿವ್ ಡೆಮಾಕ್ರಸಿ ಸಂಸ್ಥೆಯ ಕೃಷ್ಣಮೂರ್ತಿ ಪನ್ನೆ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ನಾತಕೋತ್ರ ಕೇಂದ್ರ, ವಿಶ್ವವಿದ್ಯಾಲಯ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ವೈದ್ಯಕೀಯ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಶಿರಸಿ ಪ್ರತ್ಯೇಕ ಜಿಲ್ಲೆಯಾದರೆ ಇಲ್ಲಿ ಅನುಷ್ಠಾನಗೊಳ್ಳುತ್ತದೆ. ಶಿರಸಿ ಜಿಲ್ಲಾ ಕೇಂದ್ರಕ್ಕೆ ಶಿರಸಿ, ಯಲ್ಲಾಪುರ, ಮುಂಡಗೋಡ ತೀರಾ ಸಮೀಪದಲ್ಲಿದ್ದು, ಅಲ್ಲಿನ ಎಲ್ಲ ಜನರಿಗೂ ಪ್ರಯೋಜನ ಲಭಿಸಲಿದೆ. ಕೇಂದ್ರ ಸರ್ಕಾರದ ರೈಲ್ವೆ ಯೋಜನೆಯೂ ಅನುಷ್ಠಾನಗೊಳ್ಳಲು ಅವಕಾಶ ಹೆಚ್ಚಿರುತ್ತದೆ ಎಂದರು.ಶಿರಸಿ ಹೊಸ ಜಿಲ್ಲೆ ರಚನೆಯ ಅವಶ್ಯಕತೆ ಮತ್ತು ಅನಿವಾರ್ಯತೆಯ ಬಗ್ಗೆ ವಿದ್ಯಾವಂತರು, ಎಲ್ಲ ಸಂಘ- ಸಂಸ್ಥೆಗಳು, ಪ್ರತಿನಿಧಿಗಳು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಅಭಿಪ್ರಾಯವನ್ನು ವ್ಯಾಪಕವಾಗಿ ಮಾಧ್ಯಮಗಳ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಬೆಂಬಲ ವ್ಯಕ್ತಪಡಿಸಿ, ಜನಾಭಿಪ್ರಾಯ ಕ್ರೋಢಿಕರಣಕ್ಕೆ ಸಹಕರಿಸಬೇಕು ಎಂದು ವಿನಂತಿಸಿದರು.ಸುದ್ದಿಗೋಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಸಿ.ಎಫ್. ಈರೇಶ, ಪ್ರಮುಖರಾದ ಆರ್.ಜಿ. ಭಟ್ಟ, ಎಂ.ಎಸ್. ಹೆಗಡೆ, ಸುಭಾಸ್ ಕಾನಡೆ, ಬಿ.ಕೆ. ಕೆಂಪರಾಜು, ರಮಾನಂದ ನಾಯ್ಕ, ಜಿ.ವಿ. ಹೆಗಡೆ ಮತ್ತಿತರರು ಇದ್ದರು.