ಸಾರಾಂಶ
ಹಾನಗಲ್ಲ: ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ೯ ಸಾವಿರ ಶಿಕ್ಷಕರು ಹಾಗೂ ಸಾವಿರಾರು ಶಿಕ್ಷಕೇತರ ಖಾಲಿ ಹುದ್ದೆಗಳನ್ನು ತುಂಬುವ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಹಾವೇರಿ ಜಿಲ್ಲಾ ಅನುದಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಕಾರ್ಯದರ್ಶಿ ಬಸವರಾಜ ಹಾದಿಮನಿ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿದ ಅವರು, ಅದರಿಂದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವೆ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಹೇಳಿದ್ದಾರೆ.ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೊದಲೆ, ಶಿಕ್ಷಣ ಸಂಸ್ಥೆಗಳನ್ನು ತೆರೆದು ಸರ್ಕಾರ ಮಾಡುವ ಶೈಕ್ಷಣಿಕ ಸೇವೆಯನ್ನು ಖಾಸಗಿ ಸಂಸ್ಥೆಗಳು ಮಾಡಿವೆ. ಆದರೆ ಈಗ ಸರ್ಕಾರ ಅಂತಹ ಶಿಕ್ಷಣ ಸಂಸ್ಥೆಯಲ್ಲಿನ ಖಾಲಿ ಹುದ್ದೆಗಳನ್ನು ತುಂಬಲು ನಿರಾಕರಣೆ ಮಾಡುತ್ತಿದೆ. ನ್ಯಾಯಾಲಯದಿಂದಲೂ ಹುದ್ದೆ ತುಂಬಲು ಆದೇಶವಾಗಿದ್ದರೂ, ಮತ್ತೆ ಅದಕ್ಕೆ ಸರ್ಕಾರ ತಡೆಯಾಜ್ಞೆ ತಂದಿದೆ. ೨೦೧೫ರಿಂದ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳನ್ನು ತುಂಬದ ಕಾರಣ ಖಾಸಗಿ ಶಿಕ್ಷಣ ಸಂಸ್ಥೆಗಳು ಬಹು ದೊಡ್ಡ ಆರ್ಥಿಕ ಹೊರೆ ನಿಭಾಯಿಸಬೇಕಾಗಿದೆ. ಗ್ರಾಮಾಂತರ ಹಿಂದುಳಿದ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಕಲ್ಪಕ್ಕೆ ಸರ್ಕಾರ ಹುದ್ದೆ ತುಂಬಲು ಅವಕಾಶ ನೀಡದೇ ಆತಂಕ ಸೃಷ್ಟಿಸಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿನ ಖಾಸಗಿ ಶಿಕ್ಷಣ ಸಂಸ್ಥೆಗಳು ಬೀದಿಗಿಳಿದು ಹೋರಾಡುವ ಸಂದರ್ಭಕ್ಕೂ ಮೊದಲು ಸರ್ಕಾರ ತನ್ನ ನಿಲುವು ಪ್ರಕಟಿಸಲಿ ಎಂದು ಮನವಿ ಮಾಡಿದ್ದಾರೆ.