ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಇತ್ತೀಚಿಗೆ ಮುಂಗಾರು ಹಂಗಾಮಿನ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡಿರುವ ಪರಿಹಾರದ ಮೊತ್ತದ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಅದರ ಬಗ್ಗೆ ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡಿ, ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಕೇಂದ್ರ ಸರಕಾರ ನೀಡಿರುವ ಬರ ಪರಿಹಾರದ ಮೊತ್ತದ ಸಮನಾಗಿ ರಾಜ್ಯ ಸರಕಾರ ಕೂಡಾ ಕೊಡಬೇಕು ಎಂಬ ನಿಯಮಾಳಿ ಇದೆ. ಅಂದರೆ ಕೇಂದ್ರ ಸರಕಾರ ಒಂದು ಹೆಕ್ಟೇರ್‌ಗೆ ₹೮೫೦೦ ರೂ ಗರಿಷ್ಟ ೨ ಹೆಕ್ಟೇರ್ ಅಂದರೆ ೧೭೦೦೦ ಹಣ ಕೊಡಬಹುದು, ಅದಕ್ಕೆ ಸರಿಸಮನಾಗಿ ರಾಜ್ಯ ಸರಕರ ಕೂಡಾ ೮೫೦೦ ಒಂದು ಹೆಕ್ಟೆರಗೆ ಗರಿಷ್ಠ ೨ ಹೆಕ್ಟೇರ್ ಅಂದರೆ ಅವರು ಕೂಡಾ ೧೭೦೦೦ ಸೇರಿಸಿ ಒಟ್ಟಾರೆಯಾಗಿ ೨ ಹೆಕ್ಟೇರ್ ಇರುವ ರೈತರಿಗೆ ೩೪೦೦೦ ಪರಿಹಾರ ನೀಡಬೇಕೆಂಬುದು ಒಂದು ಮಾಹಿತಿ. ಆದರೆ ಇತ್ತೀಚಿಗೆ ಕೇಂದ್ರ ಸರಕಾರ ನೀಡಿರುವ ಹಣದಲ್ಲಿ ರಾಜ್ಯ ಸರಕಾರ ಚುನಾವಣಾ ಸಂದರ್ಭದಲ್ಲಿ ಮುಂಗಡ ನೀಡಿರುವ ₹೨೦೦೦ ಹಣ ಮುರಿದುಕೊಂಡು ಉಳಿದ ಹಣವನ್ನು ರೈತರಿಗೆ ಹಾಕಿದ್ದಾರೆ ಎನ್ನುವುದು ಕಣ್ಣಿಗೆ ಕಾಣುತ್ತಿದೆ. ಆದ್ದರಿಂದ ಈ ಕುರಿತು ಸ್ಪಷ್ಟತೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಇನ್ನು ಸುಮಾರು ೧೫೦೦೦ಕ್ಕೂ ಹೆಚ್ಚಿನ ರೈತರಿಗೆ ಬರಗಾಲ ಪರಿಹಾರ ಬಂದಿಲ್ಲ. ರೈತರು ಈ ಬಗ್ಗೆ ಆತಂಕಗೊಂಡಿರುತ್ತಾರೆ. ಅವರಿಗೆ ಇಲಾಖೆಯ ಅಧಿಕಾರಿಗಳು ತಪ್ಪು ಸಂದೇಶ ನೀಡುತ್ತಿದ್ದಾರೆ. ಹೊಲದಲ್ಲಿ ತೊಗರಿ ಬೆಳೆ ಇದ್ದರೆ ಬರುವುದಿಲ್ಲ ಹೀಗೆ ಬೇರೆ ಬೇರೆ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಕೂಡಲೇ ತಂತ್ರಜ್ಞಾನದ ಅವಘಡದಿಂದ ಆಗಿರುವ ತಪ್ಪುಗಳನ್ನು ಸರಿಪಡಿಸಿ ಜಿಲ್ಲೆಯಲ್ಲಿ ಈ ವರ್ಷ ಸಂಪೂರ್ಣ ಬರಗಾರ ಎಂದು ಸರಕಾರವೇ ಘೋಷಣೆ ಮಾಡಿದೆ. ಆದ್ದರಿಂದ ಎಲ್ಲರಿಗೂ ತಪ್ಪದೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ತಾಲೂಕಾಧ್ಯಕ್ಷ ಮಹಾದೇವಪ್ಪ ತೇಲಿ, ಗೌರವಾಧ್ಯಕ್ಷ ಕಲ್ಲಪ್ಪ ಪಾರಶೆಟ್ಟಿ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ತಿಕೋಟಾ ತಾ.ಉಪಾಧ್ಯಕ್ಷ ಶಾನೂರ ನಂದರಗಿ, ಯುವ ಘಟಕದ ತಾಲೂಕಾಧ್ಯಕ್ಷ ಪ್ರಭುಲಿಂಗ ಕಾರಜೋಳ ಇದ್ದರು.