ಶೃಂಗೇರಿಪಟ್ಟಣದ ಹೊರವಲಯದ ಕೆರೆ ಆಂಜನೇಯ ರಸ್ತೆ ರಾಷ್ಟ್ರೀಯ ಹೆದ್ದಾರಿ 169 ಕ್ಕೆ ಸಂಪರ್ಕ ಕಲ್ಪಿಸುವ ಹನುಮಂತನಗರ ಶೃಂಗೇರಿ ಸಂಪರ್ಕ ರಸ್ತೆಯಲ್ಲಿ ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಅಳವಡಿಕೆ , ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಅಗೆಯಲಾಗಿದ್ದ ರಸ್ತೆ ಸರಿಪಡಿಸದೇ ಉಂಟಾದ ಅವ್ಯವಸ್ಥೆಯಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

- ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಅಳವಡಿಕೆ , ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಪಟ್ಟಣದ ಹೊರವಲಯದ ಕೆರೆ ಆಂಜನೇಯ ರಸ್ತೆ ರಾಷ್ಟ್ರೀಯ ಹೆದ್ದಾರಿ 169 ಕ್ಕೆ ಸಂಪರ್ಕ ಕಲ್ಪಿಸುವ ಹನುಮಂತನಗರ ಶೃಂಗೇರಿ ಸಂಪರ್ಕ ರಸ್ತೆಯಲ್ಲಿ ಅಮೃತ್ ಯೋಜನೆಯಡಿ ಕುಡಿಯುವ ನೀರಿನ ಪೈಪ್ ಅಳವಡಿಕೆ , ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಗೆ ಅಗೆಯಲಾಗಿದ್ದ ರಸ್ತೆ ಸರಿಪಡಿಸದೇ ಉಂಟಾದ ಅವ್ಯವಸ್ಥೆಯಿಂದ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಟ್ಟಣದಿಂದ 10 ನೇ ವಾರ್ಡ್ ಹಾಗೂ 11 ನೇ ವಾರ್ಡ್ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿ ಸುವ ಕೇಂದ್ರ ರಸ್ತೆ ಇದಾಗಿದೆ. ಸುಮಾರು 300 ಕ್ಕೂ ಹೆಚ್ಚು ಮನೆಗಳಿದ್ದು,1000 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪ್ರದೇಶ ವಾಗಿದೆ. ಈ ಎಲ್ಲಾ ಪ್ರದೇಶಗಳಿಂದ ಜನರು ಶೃಂಗೇರಿಗೆ ಬರಬೇಕಾದರೆ ಈ ರಸ್ತೆಯೇ ಪ್ರಮುಖ ಆಧಾರವಾಗಿದೆ ಎಂದರು.

ರಸ್ತೆ ಕಿತ್ತು ಹಾಕಿರುವುದರಿಂದ ರಸ್ತೆ ಹೊಂಡಗಳಿಂದ ಕೂಡಿದ್ದಲ್ಲದೇ ರಸ್ತೆಯುದ್ದಕ್ಕೂ ಮಣ್ಣು ದೂಳುಮಯವಾಗಿದೆ.ರಸ್ತೆ ಇಳಿಜಾರಿನಿಂದ ಕೂಡಿದ್ದು ರಸ್ತೆಯಲ್ಲಿ ಮಣ್ಣಿನ ರಾಶಿ,ಹೊಂಡಗಳಿಂದ ಅನೇಕರು ಜಾರಿ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರಿದ್ದಾರೆ.ಶಾಲಾ ಕಾಲೇಜು ವಿದ್ಯಾರ್ಥಿಗಳು,ವೃದ್ದರು,ಮಹಿಳೆಯರು ಓಡಾಡಲು ಹರಸಾಹಸ ಪಡಬೇಕಿದೆ.ಈ ದಾರಿ ಬಿಟ್ಟರೆ ಬೇರೆ ದಾರಿಯಿಲ್ಲ.ಇತ್ತ ಓಡಾಟ ಆನಿವಾರ್ಯ,ಅತ್ತ ಜೀವ ರಕ್ಷಣೆಯೂ ಅಮೂಲ್ಯ.ಈಗ ಮಣ್ಣು, ದೂಳುಮಯವಾಗಿದ್ದರೆ, ಮಳೆ ಬಂದರೆ ಕೆಸರುಮಯ ವಾಗಲಿದೆ. ಕೆಸರುಗೆದ್ದೆ ಓಟದ ಅನುಭವ ಖಚಿತ.

ಈ ಬಗ್ಗೆ ಸ್ಥಳೀಯರಾದ ರಾಜೇಶ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ ಪೈಪ್ ಅಳವಡಿಕೆಗೆ ರಸ್ತೆ ಕಿತ್ತು ಹಾಕಿ ತಿಂಗಳುಗಳೇ ಕಳೆದಿದೆ. ಮಂದಗತಿಯಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಸುತ್ತಿರುವುದರಿಂದ ನಮಗೆ ಓಡಾಡಲು ರಸ್ತೆಯೇ ಇಲ್ಲದಂತಾಗುತ್ತಿದೆ. ಈಗಾಗಲೇ ಸಾಕಷ್ಟು ಜನರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಈಗಾಗಲೇ ಅನೇಕ ಬಾರಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು, ತಹಸೀಲ್ದಾರ್ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ.

ವಾಹನ ಚಾಲನೆ, ಪಾದಾಚಾರಿಗಳು ಓಡಾಡಲು ಸಾಕಷ್ಟು ತೊಂದರೆಯಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನಾದರೂ ಸಾರ್ವಜನಿಕರ ಸುರಕ್ಷತೆ ಹಿತದೃಷ್ಠಿಯಿಂದ ಪಟ್ಟಣ ಪಂಚಾಯಿತಿ, ತಾಲೂಕು ಆಡಳಿತ, ಹೆದ್ದಾರಿ ಇಲಾಖೆ ಇತ್ತಮ ಗಮನ ಹರಿಸಿ ರಸ್ತೆ ದುರಸ್ಥಿಪಡಿಸಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆ ಸರಿಪಡಿಸಿಕೊಡಬೇಕಿದೆ ಎಂದರು.

10 ಶ್ರೀ ಚಿತ್ರ 1-ಶೃಂಗೇರಿ ಹನುಮಂತನಗರ ಸಂಪರ್ಕ ರಸ್ತೆ ಅವ್ಯವಸ್ಥೆಯಿಂದ ಕೂಡಿರುವುದು.