ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ನಾನಾ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸಲಾಯಿತು.

ಕೊಪ್ಪಳ: ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ನಾನಾ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸಲಾಯಿತು.

ಜಿಲ್ಲೆಯಲ್ಲಿ ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಮೂರು ತಾಲೂಕುಗಳಲ್ಲಿ ಕಬ್ಬು ಬೆಳೆಗಾರರಿದ್ದು, ಜಿಲ್ಲೆ ಬೆಳೆಗಾರ ಜಿಲ್ಲೆಯ ಗಡಿ ಜಿಲ್ಲೆಗಳಾದ ಗದಗ, ಬಾಗಲಕೋಟೆ, ವಿಜಯಪುರ, ಬಳ್ಳಾರಿ ಜಿಲ್ಲೆಯ ಕಾರ್ಖಾನೆಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಶೇ. 9.5 ಸಕ್ಕರೆ ಇಳುವರಿ ಆಧಾರದಲ್ಲಿ ಟನ್ ಕಬ್ಬು ₹5,500ಗಳ ಬೆಲೆ ನಿಗದಿ ಮಾಡಬೇಕು. ಶೇ. 9.5 ಸಕ್ಕರೆ ಇಳುವರಿ ಆಧಾರ ಮೇಲೆ ಬೆಂಬಲ ಬೆಲೆ ನಿಗದಿ ಮಾಡಲು ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು. ಹರಿಯಾಣ, ಪಂಜಾಬ, ತಮಿಳುನಾಡು ಮಾದರಿಯಲ್ಲಿ ಎಸ್‌ಎಪಿಯನ್ನು ರಾಜ್ಯ ಸರ್ಕಾರ ₹1,000 ನಿಗದಿ ಮಾಡಬೇಕು. ಸಕ್ಕರೆ ಇಳುವರಿ ಪ್ರಕಟಣೆಯಲ್ಲಿ ಮತ್ತು ತೂಕದಲ್ಲಿ ಮೋಸ ತಡೆಯಲು ಪ್ರತಿ ಕಾರ್ಖಾನೆ ಮಟ್ಟದಲ್ಲಿ ರೈತರ ಸಮಿತಿ ರಚಿಸಬೇಕು. ಕಬ್ಬಿನ ಉಪ ಉತ್ಪನ್ನಗಳಾದ ಎಫೆನಾಲ್, ಮಲಾಸಸ್, ಕಾಕಂಬಿ ಇತರ ಉತ್ಪನ್ನಗಳಿಂದ ಬರುವ ಲಾಭದಲ್ಲಿ ಶೇ. 50 ಲಾಭಾಂಶವನ್ನು ರೈತರಿಗೆ ನೀಡಬೇಕು. ಕಬ್ಬು ಸರಬರಾಜು ಮಾಡಿದ 14 ದಿನದೊಳಗೆ ಹಣ ಪಾವತಿ ಮಾಡಬೇಕು. ವಿಳಂಬಕ್ಕೆ ಶೇ. 15ರಷ್ಟು ಬಡ್ಡಿ ಸೇರಿಸಿ ನೀಡಬೇಕು. ಸಕ್ಕರೆ ಕಾರ್ಖಾನೆಗಳು ಪ್ರಾರಂಭವಾಗುವ ಮುನ್ನ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಈ ಭಾಗದ ರೈತರ ಕುಂದು-ಕೊರತೆ ಆಲಿಸಬೇಕು. ಕಬ್ಬು ಕಟಾವು ಸಂದರ್ಭದಲ್ಲಿ ಲಗಾನಿ ಹೆಸರಿನಲ್ಲಿ ನಡೆಯುವ ಅವ್ಯವಹಾರ ತಡೆಗಟ್ಟಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ಆನಂತರ ಕೃಷಿ ಜಂಟಿ ನಿರ್ದೇಶಕರ ಜತೆ ಸಭೆ ನಡೆಸಿದರು. ಸಂಘದ ಜಿಲ್ಲಾಧ್ಯಕ್ಷ ಜಿ. ನಾಗರಾಜ, ದೊಡ್ಡನಗೌಡ ಪಾಟೀಲ್, ಚಂದ್ರಶೇಖರ ಕಮತರ, ಕಾಸಿಂ ಸರ್ದಾರ್, ಡಿ.ಎಂ. ಮುಗಳಿ, ವೀರಯ್ಯ ಮಠದ, ಬಸವರಾಜ ರೌಣಿಕಿ, ಯಮನೂರಪ್ಪ, ರಾಮಪ್ಪ, ಶರಣಪ್ಪ, ಗೋಪಾಳ ಗೌಸುಸಾಬ್, ಮೌನೇಶ್ ಬಡಿಗೇರ್, ಗವಿಸಿದ್ದಯ್ಯ ವಣಗೇರಿ ಇತರರಿದ್ದರು.