ಸಾರಾಂಶ
ಲಕ್ಕುಂಡಿ ಗ್ರಾಪಂ 2023-24 ಸಾಲಿನ ವಾರ್ಡ್ ಸಭೆ
ಗದಗ: ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮೂರು ದಿನಗಳಿಂದ ಇಲ್ಲಿಯ ಗ್ರಾಪಂಯಿಂದ ನಡೆದ ೨೦೨೩-೨೪ನೇ ಸಾಲಿನ ವಾರ್ಡ್ ಸಭೆಯಲ್ಲಿ ಸಮರ್ಪಕ ಕುಡಿಯುವ ನೀರು, ಗಟಾರು ಸ್ವಚ್ಛತೆ, ಅಂಗನವಾಡಿಗೆ ಮೂಲಭೂತ ಸೌಲಭ್ಯ, ಮನರೇಗಾ ಯೋಜನೆಯ ವಿವಿಧ ಕಾಮಗಾರಿಗಳು, ಸ್ಮಶಾನ, ನಿವೇಶನ ಹಂಚಿಕೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.ಈ ವೇಳೆ ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಇತಿಹಾಸ ಪ್ರಸಿದ್ಧ ಲಕ್ಕುಂಡಿ ಗ್ರಾಮಕ್ಕೆ ದೇವಸ್ಥಾನ ವೀಕ್ಷಿಸಲು ದಿನಾಲೂ ಪ್ರವಾಸಿಗರು ಬರುತ್ತಿದ್ದು, ಕಾಶಿ ವಿಶ್ವನಾಥ ದೇಗುಲ, ಶಾಲೆಗೆ ಹೋಗುವ ರಸ್ತೆಯಲ್ಲಿ ಮಲಮೂತ್ರ ವಿಸರ್ಜನೆ, ತಿಪ್ಪೆ ಹಾಕುವುದನ್ನು ನಿಲ್ಲಿಸಿ ಸ್ವಚ್ಛತೆಗೆ ಸಹಕರಿಸಬೇಕು. ಕೆಲವೇ ದಿನಗಳಲ್ಲಿ ಜೆಜೆಎಂ ಕಾಮಗಾರಿ ಪೂರ್ಣಗೊಳ್ಳಲಿದ್ದು ಇಡೀ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೊರೈಸಲಾಗವುದು. ಈ ಹಿಂದೆ ಆಯ್ಕೆಯಾಗಿರುವ ನಿವೇಶನಗಳ ಪಲಾನುಭವಿಗಳಿಗೆ ಈಗಿರುವ ೭ ಎಕರೆ ಜಮೀನಿನಲ್ಲಿ ಶೀಘ್ರವೇ ವಿತರಿಸುವ ಬಗ್ಗೆ ಡಿ. ೨೮ರಂದು ನಡೆಯುವ ಗ್ರಾಮ ಸಭೆಯಲ್ಲಿ ಅಂತಿಮಗೊಳಿಸಲಾಗವುದು. ನಂತರ ನಿವೇಶನ ರಹಿತರನ್ನು ಪಟ್ಟಿಯ ಆಧಾರದ ಮೇಲೆ ಮತ್ತೆ ಜಮೀನು ಖರೀದಿಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ಪ್ರಮುಖವಾಗಿ ಗ್ರಾಮದ ಎಲ್ಲಾ ವಾರ್ಡ್‌ಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೊರೈಕೆಯಾಗುತ್ತಿಲ್ಲ ಎಂದು ನಾಗರಿಕರು ದೂರಿದರು. ಗಟಾರು ಸ್ವಚ್ಛತೆಯಾಗುತ್ತಿಲ್ಲ. ಇದರಿಂದ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಗಲೀಜು ಆಗುತ್ತಿದೆ. ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ಕೊರವರ ಓಣಿಯ ನಿವಾಸಿಗಳು ದೂರಿದರು.ನಲ್ಲಿಯ ನೀರು, ಮಳೆ ನೀರು ಚರಂಡಿ ನಿರ್ಮಾಣವಿಲ್ಲದೇ ರಸ್ತೆ, ಮನೆ ಮುಂದೆ ನಿಂತು ಗಬ್ಬು ವಾಸನೆ ಬರುತ್ತದೆ ಎಂದು ೭ನೇ ವಾರ್ಡಿನ ನಾಗರಿಕರು ತಮ್ಮ ಅಳಲು ತೋಡಿಕೊಂಡರು. ಇನ್ನೂ ೫ನೇ ವಾರ್ಡಿನ ಕಾಶಿ ವಿಶ್ವನಾಥ ದೇಗುಲ ಹತ್ತಿರ ಸಾರ್ವಜನಿಕರು ಕಸ ಹಾಕುತ್ತಿರುವುದು, ಮಲಮೂತ್ರ ವಿಸರ್ಜನೆ ಮಾಡುವುದು. ೬ನೇ ವಾರ್ಡಿನಲ್ಲಿ ಖಾಸಗಿಯವರ ಜಾಗದಲ್ಲಿ ಗಲೀಜು ನಿರ್ಮಾಣದಿಂದ ಗಬ್ಬೆದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ವಾರ್ಡಿನಲ್ಲಿರುವ ಮಸೂತಿ ನಿರ್ವಹಣೆ ಲೆಕ್ಕ ಪತ್ರ ಮತ್ತು ಟ್ರಸ್ಟ್ ಬಗ್ಗೆ ಚರ್ಚಿಸಲಾಯಿತು.ನಲ್ಲಿಯ ನೀರು ಪೊರೈಕೆಯ ಪೈಪ್ ಲೈನ್ ರಸ್ತೆಯ ಮೇಲೆ ಇದ್ದು ಪೈಪ್ ತುಕ್ಕು ಹಿಡಿದು ಗಟಾರು ನೀರು ಸೇರುತ್ತದೆ ಇದನ್ನು ಸರಿಪಡಿಸಬೇಕು ಎಂದು ೧೦ನೇ ವಾರ್ಡಿನ ನಾಗರಿಕರು ಆಗ್ರಹಿಸಿದರು. ಇನ್ನೂ ೧೧ವಾರ್ಡಿನ ಅಂಬೇಡ್ಕರ ನಗರದ ಹಾಗೂ ಮಾರುತಿ ನಗರದ ನಿವಾಸಿಗಳು ಸುಲಭ ಶೌಚಾಲಯ, ಗಟಾರು ನಿರ್ಮಾಣ, ಶುದ್ಧ ನೀರಿನ ಘಟಕ ಆರಂಭಿಸುವಂತೆ ಸಭೆಗೆ ತಿಳಿಸಿದರು.ಸ್ಮಶಾನಕ್ಕೆ ಜಾಗ ಬೇಕು: ಗ್ರಾಮದಲ್ಲಿರುವ ಸ್ಮಶಾನ ಬಹಳ ದೂರವಾಗುತ್ತಿದೆ ಆದ್ದರಿಂದ ಅಂಬೇಡ್ಕರ ನಗರ ಹಾಗೂ ಅಧಿಕವಾಗಿ ಬೆಳೆಯುತ್ತಿರುವ ಮಾರುತಿ ನಗರಕ್ಕೆ ಸ್ಮಶಾನಕ್ಕೆ ಜಮೀನು ಖರೀದಿಸಬೇಕು. ಸುಮಾರು ೫೦೦ಕ್ಕೂ ಹೆಚ್ಚು ಕುಟುಂಬವಿರುವ ಈ ಪ್ರದೇಶಕ್ಕೆ ನ್ಯಾಯ ಬೆಲೆ ಅಂಗಡಿಯನ್ನು ಸ್ಥಾಪಿಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಕುಬೇರಪ್ಪ ಬಡಿಗೇರ, ನಿಂಗಪ್ಪ ದೊಡ್ಡಮನಿ, ಬಸವರಾಜ ಅಕ್ಕಿ ಸೇರಿದಂತೆ ಇತರರು ಒತ್ತಾಯಿಸಿದರು.
೨೦೨೪-೨೫ ನೇ ಸಾಲಿನ ಮನೇರೆಗಾ ಕ್ರೀಯಾ ಯೋಜನೆಯಲ್ಲಿ ಸಮುದಾಯ ಆಧಾರಿತ ಕಾಮಗಾರಿಗಾಗಿ ರಸ್ತೆ, ಸಿಸಿ ರಸ್ತೆ, ಒಳಚರಂಡಿ, ಶಾಲಾ ಮೈದಾನ ಕಂಪೌಂಡ, ಮಳೆ ನೀರು ಕೊಯ್ಲು, ವೈಯಕ್ತಿಕ ಆಧಾರಿತ ಕಾಮಗಾರಿಗಳು, ಉಚಿತ ಗಣಕ ಯಂತ್ರ ತರಬೇತಿ, ಅಂಗನವಾಡಿ ಕಾರ್ಯಕರ್ತರ, ಸಹಾಯಕರ ನೇಮಕ ಕುರಿತು ಲೆಕ್ಕಾಧಿಕಾರಿ ತುಕಾರಾಮ ಹುಲ್ಲಗಣ್ಣವರ ಸಭೆಗೆ ಮಾಹಿತಿ ನೀಡಿದರು.ಈ ವೇಳೆ ಗ್ರಾಪಂ ಅಧ್ಯಕ್ಷ ಕೆ.ಎಸ್.ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ಪಿಡಿಒ ರಾಜಕುಮಾರ ಭಜಂತ್ರಿ ಹಾಗೂ ಗ್ರಾಪಂ ಸದಸ್ಯರು ಇದ್ದರು.