ಸಾರಾಂಶ
ಹೋಂ ಸ್ಟೇ ಮಾಲೀಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಹೋಂ ಸ್ಟೇಗಳ ನೋಂದಣಿಗೆ ರಾಜ್ಯ ಸರ್ಕಾರದ ನಿಯಮಗಳನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಾಲಿಸಬೇಕೆಂದು ಆಗ್ರಹಿಸಿ ಜಿಲ್ಲಾ ಹೋಂ ಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಎನ್.ಆರ್.ತೇಜಸ್ವಿ ರಾಜ್ಯ ಸರ್ಕಾರ ರೂಪಿಸಿದ ಅತಿಥಿ ಕರ್ನಾಟಕ ಹೋಂ ಸ್ಟೇ ಯೋಜನೆ ಗೆಜೆಟ್ ಅಧಿಸೂಚನೆಯಂತೆ ವಾಣಿಜ್ಯೇತರ ಘಟಕ ಎಂದಿದೆ. ಹೋಂ ಸ್ಟೇಗಳ ಮಾಲೀಕರು ಆಸ್ತಿಗಳನ್ನು ಅನ್ಯಕ್ರಾಂತ ಗೊಳಿಸಬೇಕಾಗಿಲ್ಲ. ಐಷಾರಾಮಿ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದರು.ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂ ಸ್ಟೇಗಳ ನೋಂದಣಿಗೆ ಅನ್ಯಕ್ರಾಂತ ಕಡ್ಡಾಯ ಮಾಡಲಾಗಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಗ್ರಾಪಂ ಮಟ್ಟದಲ್ಲಿ ನಿರಾಕ್ಷೇಪಣಾ ಪತ್ರ ನೀಡಲು ಹೋಂ ಸ್ಟೇ ಮಾಲೀಕರಿಗೆ ಅಧಿಕ ಮೊತ್ತದ ಶುಲ್ಕ ವಿಧಿಸಲಾಗುತ್ತಿದೆ ಎಂದು ತಿಳಿಸಿದರು.
ಆ ನಿಟ್ಟಿನಲ್ಲಿ ಹೋಂ ಸ್ಟೇ ನೋಂದಣಿ ಸಂಬಂಧ ರಾಜ್ಯ ಸರ್ಕಾರ ಪತ್ರದ ಪ್ರಕಾರ ಅನ್ಯಕ್ರಾಂತ ಅವಶ್ಯಕತೆ ಇರುವುದಿಲ್ಲ ಹಾಗೂ ನಿಗಧಿತ ಏಕರೂಪದ ಶುಲ್ಕ ನಿಗಧಿಗೊಳಿಸುವುದು ಸೂಕ್ತ. ಇತ್ತೀಚೆಗೆ ಕೊಡಗು ಜಿಲ್ಲಾಧಿಕಾರಿ ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಪ್ರವಾಸೋದ್ಯಮಕ್ಕೆ ಆದೇಶ ಹೊರಡಿಸಿದ್ದಾರೆ. ಅದರಂತೆ ಜಿಲ್ಲೆಯಲ್ಲೂ ರಾಜ್ಯ ಸರ್ಕಾರದ ನಿಯಮ ಪಾಲನೆಗೆ ಆದೇಶಿಸಬೇಕು ಎಂದರು.ವಿದ್ಯುಚ್ಚಕ್ತಿ ಮತ್ತು ನೀರಿನ ಶುಲ್ಕವನ್ನು ಗೃಹ ಬಳಕೆ ದರದಲ್ಲಿ ಹಾಗೂ ವಸತಿ ಉದ್ದೇಶಗಳಿಗೆ ನಿರ್ದಿಷ್ಟಪಡಿಸಿರುವಂತೆ ಆಸ್ತಿ ತೆರಿಗೆ ದರಗಳನ್ನು ವಿಧಿಸಬೇಕು. ಹೋಂ ಸ್ಟೇಯನ್ನು ವಾಣಿಜ್ಯ ಚಟುವಟಿಕೆ ಎಂದು ಪರಿಗಣಿಸಬಾರದು, ಹೆಚ್ಚುವರಿ ತೆರಿಗೆ ವಿಧಿಸದಂತೆ ಸೂಚಿಸಬೇಕು ಎಂದು ಹೇಳಿದರು.
ಹೋಂಸ್ಟೇ ನಡೆಸಲು ನಿರಾಕ್ಷೇಪಣಾ ಪತ್ರ ನೀಡಲು ಗರಿಷ್ಠ ₹500 ಗಳ ಶುಲ್ಕ ಹಾಗೂ ಇತರೆ ಶಾಸನಬದ್ಧ ತೆರಿಗೆ ಗಳನ್ನು ನಿಯಮಾನುಸಾರ ವಿಧಿಸಲು ಕ್ರಮವಹಿಸಬೇಕು. ಪ್ರವಾಸೋದ್ಯಮ ಇಲಾಖೆಯಿಂದ ವಿವರಿಸಲಾದ ಹೋಂಸ್ಟೇಗಳ ವ್ಯಾಖ್ಯಾನ ವನ್ನು ಪೂರೈಸುವ ವಸತಿ ಘಟಕಗಳು ಭೂ ಉಪಯೋಗ ಬದಲಾವಣೆ ಕೈಗೊಳ್ಳಬೇಕಾಗಿರುವುದಿಲ್ಲ ಎಂದು ನಿರ್ದೇಶನ ನೀಡಬೇಕು ಎಂದರು.ಈ ಸಂದರ್ಭದಲ್ಲಿ ಅಸೋಸಿಯೇಷನ್‌ನ ಕಾರ್ಯದರ್ಶಿ ಅನ್ಸರ್ ಜೂಹರ್, ವಿವಿಧ ಹೋಂಸ್ಟೇ ಮಾಲೀಕರಾದ ರೇಷ್ಮಾ, ವೇಣುಗೋಪಾಲ್, ಸುಲ್ತಾನ್ ಅಹ್ಮದ್, ಪ್ರದೀಪ್, ತೇಜಸ್, ಸುಜಯ್, ಧೀರಜ್, ಅಜಯ್ ಇದ್ದರು. 30 ಕೆಸಿಕೆಎಂ 1
ಹೋಂ ಸ್ಟೇಗಳ ನೋಂದಣಿಗೆ ರಾಜ್ಯ ಸರ್ಕಾರದ ನಿಯಮಗಳನ್ನು ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಾಲಿಸಬೇಕೆಂದು ಆಗ್ರಹಿಸಿ ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಪದಾಧಿಕಾರಿಗಳು ಶನಿವಾರ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.