ಸತ್ಯಶೋಧನಾ ಸಮಿತಿ ರಚಿಸಲು ಒತ್ತಾಯ

| Published : Aug 15 2025, 01:00 AM IST

ಸಾರಾಂಶ

ಅನಾಮಿಕ ಮುಸುಕುಧಾರಿಯ ಹೇಳಿಕೆ ಅಧರಿಸಿ ಹಲವು ದಿನಗಳಿಂದ ಧರ್ಮಸ್ಥಳದಲ್ಲಿ ೧೩ ಜಾಗಗಳನ್ನು ಉತ್ಖನನ ನಡೆಸಲಾಗಿದೆ. ಆದರೆ ಯಾವುದೇ ಸಾಕ್ಷಾಧಾರಗಳು ಸಿಕ್ಕಿಲ್ಲ. ಇದಕ್ಕೆ ಕಾರಣನಾದ ಆರೋಪಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಈ ಘಟನೆ ಹಿಂದೆ ವಿದೇಶಗಳ ಕೈವಾಡ ಇರುವುದನ್ನು ಸರ್ಕಾರವು ತನಿಖೆ ನಡೆಸಲು ಸತ್ಯ ಶೋಧನಾ ಸಮಿತಿ ರಚಿಸಬೇಕು.

ಕನ್ನಡಪ್ರಭ ವಾರ್ತೆ ಕೋಲಾರ

ಧರ್ಮಸ್ಥಳ ಹಿಂದೂ ಧರ್ಮದ ಪವಿತ್ರ ಧಾರ್ಮಿಕ ಕ್ಷೇತ್ರ. ಈ ಕ್ಷೇತ್ರದ ಪವಿತ್ರತೆಗೆ ಧಕ್ಕೆ ಬರುವ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿರುವ ಕುತಂತ್ರಿಗಳನ್ನು ಕೂಡಲೇ ಬಂಧಿಸಿ ಸತ್ಯ ಶೋಧನಾ ಸಮಿತಿ ರಚಿಸಿ ಈ ಷಡ್ಯಂತ್ರದ ವಿರುದ್ದ ತನಿಖೆ ನಡೆಸುವಂತೆ ಒತ್ತಾಯಿಸಿ ಹಿಂದು ಪರ ಸಂಘಟನೆಗಳು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಿದವು. ನಗರದ ಜಿಲ್ಲಾಡಳಿತ ಕಚೇರಿಯ ಮುಂದೆ ಪ್ರತಿಭಟನಾ ಧರಣಿಯಲ್ಲಿ ಸಂಸದ ಎಂ.ಮಲ್ಲೇಶ್‌ಬಾಬು ಮಾತನಾಡಿ, ಅನಾಮಿಕ ಮುಸುಕುಧಾರಿಯ ಹೇಳಿಕೆ ಅಧರಿಸಿ ಹಲವು ದಿನಗಳಿಂದ ಧರ್ಮಸ್ಥಳದಲ್ಲಿ ೧೩ ಜಾಗಗಳನ್ನು ಉತ್ಖನನ ನಡೆಸಲಾಗಿದೆ. ಆದರೆ ಯಾವುದೇ ಸಾಕ್ಷಾಧಾರಗಳು ಸಿಕ್ಕಿಲ್ಲ. ಇದಕ್ಕೆ ಕಾರಣನಾದ ಆರೋಪಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಿ

ಸರ್ಕಾರ ಹಾಗೂ ಎಸ್.ಐ.ಟಿಯನ್ನು ದಿಕ್ಕು ತಪ್ಪಿಸಿ ಲಕ್ಷಾಂತರ ರುಪಾಯಿ ವ್ಯರ್ಥವಾಗುವಂತೆ ಮಾಡಿರುವ ಆರೋಪಗಳ ವಿರುದ್ದ ಹಾಗೂ ಧರ್ಮಸ್ಥಳಕ್ಕೆ ಅಪಮಾನವಾಗುವಂತೆ ಅಪಪ್ರಚಾರ ಮಾಡುತ್ತಿರುವ ಅನಾಮಿಕನ ವಿರುದ್ದ ಹಾಗೂ ಇದಕ್ಕೆ ಕುಮ್ಮಕ್ಕು ನೀಡಿರುವ ಮಟ್ಟಣ್ಣನವರ್, ತಿಮ್ಮರೆಡ್ಡಿ, ಸಾಮಾಜಿಕ ಜಾಲತಾಣದ ಸಮೀರ್ ವಿರುದ್ದ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು. ಧರ್ಮಸ್ಥಳದ ವಿರುದ್ಧ ಎಷ್ಟೇ ಅಪಪ್ರಚಾರ ಮಾಡಿದರೂ ಸಾರ್ವಜನಿಕರ ವಲಯದಲ್ಲಿ ಅದಕ್ಕಿರುವ ಶ್ರದ್ದಾ ಭಕ್ತಿ ಕಿಂಚತ್ತು ಕಡಿಮೆಯಾಗಿಲ್ಲ ಎಂದರು.

ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಹಿಂದುಗಳ ಪವಿತ್ರವಾದ ಸ್ಥಳವನ್ನು ಅಪವಿತ್ರಗೊಳಿಸುವಂತ ಷಢ್ಯಂತ್ರಗಳನ್ನು ಪಾಕಿಸ್ತಾನಿಗಳ ಏಜೆಂಟ್‌ಗಳು, ವಿದೇಶಗಳ ಕೈವಾಡ ಇರುವುದನ್ನು ಸರ್ಕಾರವು ತನಿಖೆ ನಡೆಸಲು ಸತ್ಯ ಶೋಧನಾ ಸಮಿತಿ ರಚಿಸಬೇಕು. ಅನಾಮಿಕನ ಮುಖವಾಡ ಕಳಚಿ ಸಾರ್ವಜನಿಕರಿಗೆ ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು.ಕನಿಷ್ಠ ಪ್ರಜ್ಞೆಯೂ ಇಲ್ಲ

ಅನಾಮಿಕ ಮಾಡಿದ ಆರೋಪಗಳ ಬಗ್ಗೆ ಆತನ ಮಾನಸಿಕ ಸ್ಥಿತಿಯ ಕುರಿತು ಪರಮಾರ್ಷಿಸದೆ ಎಸ್.ಐ.ಟಿ. ೨೦-೩೦ ಅಡಿಗಳು ಮಣ್ಣಿನಲ್ಲಿ ಶೋಧ ನಡೆಸುತ್ತಿರುವುದೇ ಅವೈಜ್ಞಾನಿಕವಾದದ್ದು ಒಂದು ರಾತ್ರಿ ಒಬ್ಬ ವ್ಯಕ್ತಿ ಅಷ್ಟೊಂದು ದೊಡ್ಡಮಟ್ಟದ ಹಳ್ಳವನ್ನು ಅಗೆದು ಶವವನ್ನು ಹಾಕಿ ಮುಚ್ಚಲು ಸಾಧ್ಯವೇ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದೆ ಆತನ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಹಾಸ್ಯಸ್ಪದ ಎಂದು ಟೀಕಿಸಿದರು. ಆರೋಪಿಸಿದ ವ್ಯಕ್ತಿ ಗುರುತಿಸಿರುವ ಸ್ಥಳಗಳನ್ನು ಆತನಿಂದಲೇ ಅಗೆಸಬೇಕಾಗಿತ್ತು. ನೂರಾರು ಶವಗಳನ್ನು ಸಮಾಧಿ ಮಾಡಿರುವುದಾಗಿ ಹೇಳಿರುವಂತ ಆರೋಪಿಯನ್ನು ಪೊಲೀಸರು ಬಂಧಿಸದೆ ಓರ್ವ ಅಧಿಕಾರಿಯಂತೆ ಬೆಳಗ್ಗೆ ಬಂದು ಸಂಜೆಯಾದರೆ ನಾಪತ್ತೆಯಾಗುತ್ತಾನೆ. ಈತನ ಕೈಕೆಳಗೆ ಎಸ್.ಐ.ಟಿ. ಇರುವಂತೆ ಆತನ ವರ್ತನೆಯಾಗಿದೆ ಎಂದು ಟೀಕಿಸಿದರು.

ಉತ್ಖನನ ಪ್ರತಿಫಲ ಶೂನ್ಯ

ಮಾಜಿ ಎಂಎಲ್ಸಿ ವೈ.ಎ.ಎನ್.ನಾರಾಯಣಸ್ವಾಮಿ ಮಾತನಾಡಿ, ಎಸ್.ಐ.ಟಿ. ೧೩ ಸ್ಥಳಗಳಲ್ಲಿನ ಶೋಧನೆಯು ಶೂನ್ಯವಾಗಿದೆ. ಇದರ ಹಿಂದೆ ಷಡ್ಯಂತರ ಇರುವುದು ಸ್ಪಷ್ಟವಾಗಿದೆ. ಸರ್ಕಾರ ಧರ್ಮದ್ರೋಹಿ ಕೆಲಸ ಮಾಡುತ್ತಿರುವವರ ಷಡ್ಯಂತ್ರವನ್ನು ಬಯಲಿಗೆಳೆಯಬೇಕು, ಅನಾಮಿಕ ಮುಸುಕುದಾರಿಯನ್ನು ಮಾನಸಿಕ ವೈದ್ಯಕೀಯ ಪರೀಕ್ಷೆಗೆ ಒಳಪಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು. ಏಳ್ಗೆ ಸಹಿಸದೆ ಅಪಪ್ರಚಾರ

ಜೆಡಿಎಸ್ ಮುಖಂಡ ಸಿ.ಎಂ.ಆರ್. ಶ್ರೀನಾಥ್ ಮಾತನಾಡಿ, ಧರ್ಮಸ್ಥಳ ಧಾರ್ಮಿಕ ಸಂಸ್ಥೆಯು ಅಕ್ಷರ, ಅನ್ನ ದಾಸೋಹ ನಡೆಸುತ್ತಿದೆ, ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನಾ ಸಂಸ್ಥೆಯನ್ನು ರಾಜ್ಯಾದ್ಯಂತ ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿ ಮಾಡಲು ಸಾಲ ಸೌಲಭ್ಯ ಸೇರಿದಂತೆ ನೂರಾರು ಸಮಾಜಮುಖಿ ಕೆಲಗಳನ್ನು ಮಾಡುತ್ತಿದೆ. ಈ ಸಂಸ್ಥೆಯ ಏಳ್ಗೆಯನ್ನು ಸಹಿಸದೆ ಅಪಪ್ರಚಾರ ಮಾಡಲಾಗುತ್ತಿರುವವರನ್ನು ರಾಷ್ಟ್ರ ದ್ರೋಹಿಗಳೆಂದು ಪರಿಗಣಿಸಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕ ವೈ.ಸಂಪಂಗಿ, ವಕೀಲ ಕೆ.ವಿ.ಶಂಕರಪ್ಪ, ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾವು ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ವಾಸು, ಬಿಜೆಪಿ ಮಹಿಳಾ ನಾಯಕಿ ಅರುಣಮ್ಮ, ಮಾಗೇರಿ ನಾರಾಯಣಸ್ವಾಮಿ, ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್, ಕೆ.ಯು.ಡಿ.ಎ. ಮಾಜಿ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಕುರುಬರ ಸಂಘದ ತಂಬಳ್ಳಿ ಮುನಿಯಪ್ಪ ಮತ್ತಿತರರು ಇದ್ದರು.