ಸಚಿವ ಸಂಪುಟ ಸಭೆಯಲ್ಲಿ ರೈತರ ಬೇಡಿಕೆ ಈಡೇರಿಸಲು ಆಗ್ರಹ

| Published : Apr 22 2025, 01:51 AM IST

ಸಾರಾಂಶ

ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ರೈತ ಮುಖಂಡರ ಸಭೆ ನಡೆಯಿತು.

ಚಾಮರಾಜನಗರ: ಮಾದಪ್ಪನ ಸನ್ನಿಧಿಯಲ್ಲಿ ಏ.24 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರೈತರ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಡೇರಿಸಬೇಕು ಎಂದು ರಾಜ್ಯ ರೈತ ಸಂಘದ ಕಾಯಂ ಆಹ್ವಾನಿತರಾದ ಮಹೇಶ್‌ಕುಮಾರ್ ಒತ್ತಾಯಿಸಿದರು.

ಜಿಲ್ಲಾಡಳಿತ ಭವನದಲ್ಲಿ ಸಚಿವ ಸಂಪುಟದ ಸಂಬಂಧ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರ 45 ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ರೈತ ಸಂಘಟನೆಗಳು, ಮುಖಂಡರು ಮನವಿ ಸಲ್ಲಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಪಡಿತರ ಚೀಟಿ 5 ವರ್ಷದಿಂದ ಒಬ್ಬರಿಗೂ ಕೊಟ್ಟಿಲ್ಲ. ಹಾಗಾಗಿ ಹೊಸ ಪಡಿತರ ಚೀಟಿ ವಿತರಿಸಬೇಕು. ದೇಶವಳ್ಳಿ ಗಣಿಗಾರಿಕೆ ವಿರುದ್ಧ ಶಿಸ್ತುಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು. ಕಬಿನಿ 2ನೇ ಹಂತ ಜಾರಿ ಸೇರಿದಂತೆ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ಆನ್‌ಲೈನ್ ಗೇಮ್‌ಗಳನ್ನು ಸ್ಥಗಿತಗೊಳಿಸಿರುವ ನಿರ್ಧಾರ ಸ್ವಾಗತಾರ್ಹವಾಗಿದ್ದು, ಆಯಾ ರಾಜ್ಯಗಳಿಗೆ ಸರ್ವಾಧಿಕಾರವನ್ನು ಸಂಸತ್ ಅಂಗೀಕಾರ ಮಾಡಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಜೂಜಾಟ ರದ್ದುಪಡಿಸಿದ ಮಾದರಿಯಲ್ಲಿ ಅನ್‌ಲೈನ್ ರಮ್ಮಿ ಸೇರಿದಂತೆ ಇತರೇ ಗೇಮ್‌ಗಳನ್ನು ಸಚಿವ ಸಂಪುಟದ ಸಭೆಯಲ್ಲಿ ರದ್ದುಗೊಳಿಸಿ ದೇಶಕ್ಕೆ ಕರ್ನಾಟಕ ರಾಜ್ಯ ನಂಬರ್ ಒನ್ ಆಗಿ ಮಾಡಬೇಕು ಆಗ್ರಹಿಸಿದರು.

ಜಿಲ್ಲಾಧಿಕಾರಿ ಸಿಟಿ ಶಿಲ್ಪಾನಾಗ್‌, ಎಸ್ಪಿ ಡಾ.ಬಿ.ಟಿ. ಕವಿತಾ, ಸಿಇಒ ಮೋನಾ ರೋತ್‌, ರೈತ ಮುಖಂಡರಾದ ಎ.ಎಂ.ಮಹೇಶ್‌ಪ್ರಭು, ಹೊನ್ನೂರು ಪ್ರಕಾಶ್‌, ಹಳ್ಳಿಕೆರೆಹುಂಡಿ ಭಾಗ್ಯರಾಜು, ಬಸವಣ್ಣ, ಜಿಲ್ಲಾ ಕಾರ್ಯದರ್ಶಿ ದೇಮಳ್ಳಿ ಮಹಾದೇವಸ್ವಾಮಿ, ತಾಲೂಕು ಸಂಘಟನಾ ಕಾರ್ಯದರ್ಶಿ ಕಾಡಹಳ್ಳಿ ಚಿನ್ನಸ್ವಾಮಿ ಹಾಜರಿದ್ದರು.