ಸಾರಾಂಶ
ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಸದಸ್ಯರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಕುರುಗೋಡುರೈತರ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸದಸ್ಯರು ಪಟ್ಟಣದಲ್ಲಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಇಲ್ಲಿನ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ನೀರಾವರಿ ಕಚೇರಿ ಆವರಣದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಸಮಾವೇಶಗೊಂಡಿತು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಘಟಕದ ಅಧ್ಯಕ್ಷ ಕರೂರು ಮಾಧವ ರೆಡ್ಡಿ ಮಾತನಾಡಿ, ಕಂಪ್ಲಿ ಹಾಗೂ ಕುರುಗೋಡು ತಾಲೂಕುಗಳಲ್ಲಿ ಶೇ. 83ರಷ್ಟು ರೈತರು ತುಂಗಭದ್ರಾ ಜಲಾಶಯ ಹಾಗೂ ಬೋರ್‌ವೇಲ್ ಆಶ್ರಯಿಸಿ ವಿವಿಧ ಬೆಳೆ ಬೆಳೆಯುತ್ತಿದ್ದರೂ ಈವರೆಗೂ ಸರಿಯಾದ ಕೃಷಿ ಮಾರುಕಟ್ಟೆ ಇಲ್ಲದೆ ರೈತರು ಪರದಾಡುವಂತಾಗಿದೆ ಎಂದರು.
ರೈತರಿಗೆ ಸಕಾಲಕ್ಕೆ ಬೀಜ, ರಸಗೋಬ್ಬರ ಪೂರೈಸುವ ಜತೆಗೆ ಗ್ರಾಪಂ ವ್ಯಾಪ್ತಿಯಲ್ಲಿ ದಾಸ್ತಾನು ಮಳಿಗೆ ತೆರೆಯಬೇಕು. ಬೆಳೆಗಳಿಗೆ ಸೂಕ್ತಬೆಲೆ ದೊರೆಯದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷ ನಷ್ಟದ ಕೂಪಕ್ಕೆ ಬೀಳುತ್ತಿರುವ ರೈತರು ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಮುಖಂಡ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ ಮಾತನಾಡಿ, ಕುರುಗೋಡು ಮತ್ತು ಕಂಪ್ಲಿ ತಾಲೂಕಿನಲ್ಲಿ ಶೇ. ೪೫ರಷ್ಟು ಕೃಷಿ ಭೂಮಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ಒಳಪಟ್ಟಿದೆ. ಪ್ರಧಾನವಾಗಿ ಒಣ ಮೆಣಸಿನಕಾಯಿ, ಭತ್ತ, ಮುಸುಕಿನ ಜೋಳ, ಜೋಳ, ಸಜ್ಜೆ, ನವಣೆ ಸೂರ್ಯಕಾಂತಿ, ಹತ್ತಿ, ತೊಗರಿ ಮತ್ತು ತೋಟಗಾರಿಕೆ ಬೆಳೆ ಬೆಳೆಯುತ್ತಾರೆ. ಆದರೆ ಮಾರುಕಟ್ಟೆ ಸಮಸ್ತೆ ಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ರೈತರ ಕೃಷಿ ಪಂಪ್ ಸೆಟ್‌ಗಳಿಗೆ ನಿರಂತರ ೧೦ ಗಂಟೆ ವಿದ್ಯುತ್ ನೀಡಬೇಕು. ಸಮಯಕ್ಕೆ ಸರಿಯಾಗಿ ಬೀಜ, ಗೊಬ್ಬರ ಪೂರೈಸಬೇಕು. ಗುಂಡಿಗನೂರು ಕೆರೆಯನ್ನು ಪುನರ್ ನಿರ್ಮಾಣ ಮಾಡಬೇಕು. ಒಣಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಬೇಕು. ತುಂಗಭದ್ರಾ ಜಲಾಶಯದ ಗೇಟ್‌ಗಳನ್ನು ಶೀಘ್ರ ಬದಲಿಸಿ ಎರಡನೇ ಬೆಳೆಗೆ ನೀರು ಕೊಡಬೇಕು ಸೇರಿದಂತೆ ೧೯ ಬೇಡಿಕೆಯ ಮನವಿಯನ್ನು ತಹಶೀಲ್ದಾರ್ ನರಸಪ್ಪಗೆ ಸಲ್ಲಿಸಿದರು.ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀಶೈಲ ಸಂಡೂರು ಮಾತನಾಡಿದರು.
ಮುಖಂಡರಾದ ಜಿ.ಪಂಪಾಪತಿ, ಸುರೇಂದ್ರ, ಚಾನಳಾ ವಿರುಪಾಕ್ಷ. ಶಪುರ್ ಗುರು ಗಾದಿಲಿಂಗಪ್ಪ, ನಾಗೇಶ್ವರ ರಾವು, ವೀರೇಶಪ್ಪ, ಆರ್.ವೇದಾವತಿ, ಆದಿಗೌಡ, ರಾಮಚಂದ್ರಪ್ಪ, ಬಸವರಾಜ ಮತ್ತು ಹನುಮಂತರೆಡ್ಡಿ, ಎಂ ಉಮಾಪತಿ ಗೌಡ, ಬಸವರಾಜರೆಡ್ಡಿ, ಕಲ್ಲುಕಂಬ ಗೊಲ್ಲರ ಪಂಪಣ್ಣ, ಗುಂಡರೆಡ್ಡಿ, ವೀರೇಶಪ್ಪ, ಆರ್. ಪಂಪಾಪತಿ, ಶ್ರೀನಿವಾಸ್, ಬಿ, ಸುರೇಂದ್ರ, ಗೋವರ್ದನರೆಡ್ಡಿ, ಆದಿ ಗೌಡ ರಾಮಚಂದ್ರಪ್ಪ, ಎ. ಬಸವರಾಜ, ಹನುಮಂತರೆಡ್ಡಿ ಇದ್ದರು.