ಸಾರಾಂಶ
೨೦೦೬ರ ನಂತರ ನೇಮಕವಾದ ಅನುದಾನಿತ ಹಾಗೂ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು.
ಕಾರವಾರ: ಅನುದಾನಿತ ಪ್ರೌಢಶಾಲೆಗಳ ಸಿಬ್ಬಂದಿ ಹಾಗೂ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಘಟಕದಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಈಗಾಗಲೇ ಉಪವಾಸ ಸತ್ಯಾಗ್ರಹ, ಪಾದಯಾತ್ರೆ, ಬೆಂಗಳೂರು ಚಲೋ, ಪ್ರತಿಭಟನೆಗಳನ್ನು ಮಾಡುವುದರ ಮೂಲಕ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದರೂ ಇಲ್ಲಿಯವರೆಗೆ ನಮ್ಮ ಯಾವುದೇ ನ್ಯಾಯಸಮ್ಮತವಾದ ಬೇಡಿಕೆಗಳು ಈಡೇರಿಲ್ಲ ಎಂದು ಅಸಮಾಧಾನ ಹೊರಹಾಕಿದರು.೨೦೦೬ರ ನಂತರ ನೇಮಕವಾದ ಅನುದಾನಿತ ಹಾಗೂ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ೨೦೦೬ಕ್ಕಿಂತ ಪೂರ್ವದಲ್ಲಿ ಇಲಾಖೆಯಿಂದ ಪರವಾನಗಿ ಪಡೆದು ನೇಮಕವಾದ ಅನುದಾನಿತ ನೌಕರರಿಗೆ ಸರ್ಕಾರಿ ನೌಕರರಿಗೆ ಜಾರಿಗೊಳಿಸುವಂತೆ ಹಳೆ ಪಿಂಚಣಿ ಯೋಜನೆಗೆ ಒಳಪಡಿಸಬೇಕು. ೨೦೧೫ರ ನಂತರ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು. ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ, ಬಸವರಾಜ ಹೊರಟ್ಟಿ ಅವರ ಕಾಲ್ಪನಿಕ ವೇತನ ವರದಿ ಯಥಾವತ್ತಾಗಿ ಜಾರಿಗೊಳಿಸಬೇಕು. ೧೯೯೫ ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಪ್ರಭಾಕರ ಬಂಟ್, ಜಿಲ್ಲಾ ಸಂಯೋಜಕ ಎಂ.ಟಿ. ಗೌಡ, ಜಿಲ್ಲಾ ಕಾರ್ಯದರ್ಶಿ ಎಂ.ಎಲ್. ಹೆಗಡೆ, ಜೈರಂಗನಾಥ ಮೊದಲಾದವರು ಇದ್ದರು.