ಕನ್ನಡಪ್ರಭ ವಾರ್ತೆ ಬೆಳಗಾವಿ
ಪರವಾನಗಿ ಭೂಮಾಪಕರನ್ನು ಕಾಯಂಗೊಳಿಸುವುದು ಸೇರಿದಂತೆ ಹಲವಾರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘದಿಂದ ನಗರದ ಚನ್ನಮ್ಮ ವೃತ್ತದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆ ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಗೆ ವಿವಿಧ ರೈತ ಸಂಘಟನೆಗಳು ಸಾಥ್ ನೀಡಿದವು. ಬಳಿಕ ಅಲ್ಲಿಂದ ಬೃಹತ್ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪರವಾನಗಿ ಭೂಮಾಪಕರು ಸರ್ಕಾರಿ ಭೂಮಾಪಕರಂತೆಯೇ ಸಮಾನ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತ ಬಂದಿದ್ದೇವೆ. ಆದರೂ,
ಪರವಾನಿಗೆ ಪಡೆದ ಭೂಮಾಪಕರಿಗೆ ಯಾವುದೇ ಸೌಲಭ್ಯ ಒದಗಿಸುತ್ತಿಲ್ಲ. ದಿನ ಕಳೆದಂತೆ ಭೂಮಾಪಕರ ಮೇಲೆ ಒತ್ತಡ, ಜವಾಬ್ದಾರಿಗಳು ಹೆಚ್ಚುತ್ತಿವೆ, ಹೊರತು ಸೌಲಭ್ಯಗಳು ಸಿಗುತ್ತಿಲ್ಲ. ಅದಲ್ಲದೆ, ರಾಜ್ಯ ಸರ್ಕಾರ ಮತ್ತು ಇಲಾಖೆ ಪರವಾನಗಿ ಪಡೆದ ಭೂಮಾಪಕರನ್ನು ಜೀತದಾಳದಂತೆ ದುಡಿಸಿಕೊಳ್ಳುತ್ತಿ ದ್ದಾರೆ. ಆದರೆ, ಸರಕಾರಿ ಭೂಮಾಪಕರಿಗೆ ಮಾತ್ರ ಸರ್ವ ಸವಲತ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.ಪರವಾನಗಿ ಭೂಮಾಪಕರ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸೇವಾ ಭದ್ರತೆ ಮತ್ತು ವೃತ್ತಿ ಗೌರವ ಕಲ್ಪಿಸಬೇಕು. ಫೈಲ್ ಗಳಿಗೆ ಇಂತಿಷ್ಟು ಎಂಬ ಪದ್ಧತಿ ಕೈ ಬಿಟ್ಟು, ಕನಿಷ್ಠ ವೇತನ ನಿಗದಿ ಮಾಡಬೇಕು. ಆರೋಗ್ಯ ವಿಮೆ, ಭವಿಷ್ಯ ನಿಧಿ, ಸೇವಾ ನಿವೃತ್ತಿ ಗೌರವಧನ ಕೊಡಬೇಕು. ಯಾವುದೇ ಕಾರಣಕ್ಕೂ ಸರ್ಕಾರಿ ಭೂಮಾಪಕರು ಮತ್ತು ಪರವಾನಗಿ ಭೂಮಾಪಕರ ಹೊಸ ನೇಮಕಾತಿ ಪ್ರಕ್ರಿಯೆ ನಡೆಸಬಾರದು. ನೇಮಕದ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ವೇಳೆ ಶಶಿಕಾಂತ ಗುರೂಜಿ ಮಾತನಾಡಿ, ಸಿಎಂ ಸಿದ್ದರಾಮಯ್ಯನವರು ಕಳೆದ ವರ್ಷ ವಿಶೇಷ ನೇಮಕಾತಿ ಮೂಲಕ
ಪರವಾನಗಿ ಭೂಮಾಪಕರನ್ನು ಕಾಯಂಗೊಳಿಸಲು ಗಂಭೀರ ಚಿಂತನೆ ನಡೆಸುತ್ತೇನೆ ಎಂದು ಹೇಳಿದ್ದರು. ಆದರೆ, ಈಗ ಅವರು, ಉಪ ಚುನಾವಣೆಯ ಚಿಂತೆನೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು. ರಾಜ್ಯದಲ್ಲಿ 2.86 ಲಕ್ಷ ಖಾಲಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಬೇಕು. ಅದಲ್ಲದೆ, ಕೆಪಿಎಸ್‌ಸಿ ಎಂಬ ಭ್ರಷ್ಟಾಚಾರದ ಕೋಪವನ್ನು ರದ್ದುಪಡಿಸಬೇಕು. ಈಗಾಗಲೇ ಕೆಪಿಎಸ್‌ಸಿ ಸದಸ್ಯರಾದವರ ಆಸ್ತಿ ಕುರಿತು ಸಮಗ್ರ ತನಿಖೆ ನಡೆಸಿ, ಅಕ್ರಮ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯ್ಷಕ್ಷ ಚೂನಪ್ಪ ಪೂಜಾರಿ ಮಾತನಾಡಿ, ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆ ಒಳಗಾಗಿ ಅಥವಾ ನಂತರ ರಾಜ್ಯ ಸರ್ಕಾರ ಪರವಾನಗಿ ಭೂಮಾಪಕರಿಗೆ ಸಿಹಿ ಸುದ್ದಿ ನೀಡಬೇಕು. ಇಲ್ಲವಾದಲ್ಲಿ ಬೆಂಗಳೂರಿನಲ್ಲಿ ಬೃಹತ್ ಮಟ್ಟದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಅಖಿಲ ಕರ್ನಾಟಕ ಸರ್ಕಾರಿ ಪರವಾನಗಿ ಭೂಮಾಪಕರ ಸಂಘ ಹಾಗೂ ವಿವಿಧ ರೈತ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.