ಕೊಪ್ಪಳ ನಗರದ ಮುಸ್ಲಿಂ ಸಮುದಾಯದ ವಿವಿಧ ಮೂಲಭೂತ, ಶೈಕ್ಷಣಿಕ ಹಾಗೂ ಧಾರ್ಮಿಕ ಅಗತ್ಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಮುಸ್ಲಿಂ ಯುನಿಟಿ ಜಿಲ್ಲಾ ಹಾಗೂ ತಾಲೂಕು ಸಮಿತಿಯ ಪದಾಧಿಕಾರಿಗಳು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದರು.
ಕೊಪ್ಪಳ: ನಗರದ ಮುಸ್ಲಿಂ ಸಮುದಾಯದ ವಿವಿಧ ಮೂಲಭೂತ, ಶೈಕ್ಷಣಿಕ ಹಾಗೂ ಧಾರ್ಮಿಕ ಅಗತ್ಯಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಮುಸ್ಲಿಂ ಯುನಿಟಿ ಜಿಲ್ಲಾ ಹಾಗೂ ತಾಲೂಕು ಸಮಿತಿಯ ಪದಾಧಿಕಾರಿಗಳು ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಪ್ರಮುಖರು, ನಗರದ ಜನಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಈದ್ ನಮಾಜ್ ನೆರವೇರಿಸಲು ಈಗಿರುವ ಈದ್ಗಾ ಸ್ಥಳ ಸಾಕಾಗುತ್ತಿಲ್ಲ. ಎರಡು ಎಕರೆ ಜಾಗವನ್ನು ಈದ್ಗಾಕ್ಕೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಲಾಗಿದೆ.ನಗರದಲ್ಲಿರುವ ಖಬರಸ್ಥಾನ (ಮುಸ್ಲಿಂ ರುದ್ರಭೂಮಿ) ಜನಸಂಖ್ಯೆಗೆ ಅನುಗುಣವಾಗಿ ಸಾಕಾಗುತ್ತಿಲ್ಲ. ಹೀಗಾಗಿ, 5 ಎಕರೆ ಹೊಸ ಜಾಗವನ್ನು ಖಬರಸ್ಥಾನಕ್ಕಾಗಿ ಮಂಜೂರು ಮಾಡಬೇಕು. ಈಗಿರುವ ಖಬರಸ್ಥಾನಗಳಲ್ಲಿ ರಾತ್ರಿ ವೇಳೆಯ ದಫನ್ ಕಾರ್ಯಗಳಿಗೆ ಅನುಕೂಲವಾಗುವಂತೆ ಹೈಮಾಸ್ಟ್ ದೀಪಗಳನ್ನು ಅಳವಡಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮುಸ್ಲಿಂ ಸಮುದಾಯದ ಶೈಕ್ಷಣಿಕ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಮೌಲಾನಾ ಆಜಾದ್ ಶಾಲೆ ಮತ್ತು ಕಾಲೇಜಿಗೆ ಸರ್ಕಾರದ ನಿಯಮಾನುಸಾರ ಸ್ವಂತ ಜಾಗದಲ್ಲಿ ಕಟ್ಟಡ, ಆಟದ ಮೈದಾನ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಬೇಕು ಎಂದು ಕೋರಿದರು.ಅಂಚೆ ಕಚೇರಿ ಸಮೀಪವಿರುವ ಹಳೆಯ ಉರ್ದು ಪ್ರೌಢಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಎಲ್ಲ ಸೌಲಭ್ಯಗಳನ್ನು ಒಳಗೊಂಡ ನೂತನ ಶಾಲಾ ಕಟ್ಟಡ ನಿರ್ಮಿಸಬೇಕು. ನಗರದ ಪ್ರಸಿದ್ಧ ಹಜರತ್ ಮರ್ದಾನೆ ಗೈಬ್ ದರ್ಗಾದಲ್ಲಿನ ಶಾದಿಮಹಲ್ ಕಾಮಗಾರಿ ಹಲವು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದು, ಅಗತ್ಯ ಅನುದಾನ ನೀಡಿ ಶೀಘ್ರ ಪೂರ್ಣಗೊಳಿಸಬೇಕು. ಜತೆಗೆ ದರ್ಗಾ ಹಾಗೂ ಹುಲಿಕೆರೆಗೆ ಸಂಪರ್ಕಿಸುವ ರಸ್ತೆಯ ಎರಡೂ ಬದಿಗಳಲ್ಲಿ ಸುರಕ್ಷತಾ ತಡೆಗೋಡೆ ನಿರ್ಮಿಸಬೇಕು. ದರ್ಗಾದ ಬಳಿಯ ಮೋತಿ ಕೆರೆಯನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ರೂಪಿಸಲು ವಿಶೇಷ ಅನುದಾನ ಮಂಜೂರು ಮಾಡಬೇಕು. ಮುಸ್ಲಿಂ ಸಮುದಾಯದ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಸಂಬಂಧಿಸಿದ ಮೇಲಿನ ಎಲ್ಲ ಬೇಡಿಕೆಗಳನ್ನು ಸರ್ಕಾರದ ಮಟ್ಟದಲ್ಲಿ ಶೀಘ್ರ ಈಡೇರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕರ್ನಾಟಕ ಮುಸ್ಲಿಂ ಯೂನಿಟಿಯ ರಾಜ್ಯಾಧ್ಯಕ್ಷ ಕೆ.ಎಂ. ಸೈಯದ್, ಜಿಲ್ಲಾಧ್ಯಕ್ಷ ಮೊಹಮ್ಮದ್ ಜೀಲಾನ್ ಕಿಲ್ಲೇದಾರ, ಉಪಾಧ್ಯಕ್ಷ ಸೀರಾಜ್ ಮನಿಯಾರ್, ಪ್ರಧಾನ ಕಾರ್ಯದರ್ಶಿ ಮುಸ್ತಫಾ ಕುದರಿಮೋತಿ, ಜಿಲ್ಲಾ ವಕ್ತಾರ ನಜೀರ್ ಅಹ್ಮದ್ ಮುದಗಲ್, ತಾಲೂಕು ಅಧ್ಯಕ್ಷ ಫಕ್ರುಸಾಬ್ ನದಾಫ್, ಕಾರ್ಯದರ್ಶಿ ಹಜರತ್ ಅಲಿ ಮುಜಾವರ್, ಆಸೀಫ್ ಕರ್ಕಿಹಳ್ಳಿ, ಪಾಷಾ, ಖಾಜಾವಲಿ ಗುಡಗೇರಿ, ನಸೀರುದ್ದೀನ್, ಅಜೀಜ್ ಮಾನ್ವಿಕರ್, ಮಾಜಿ ನಗರಸಭೆ ಸದಸ್ಯ ಅಜೀಮ್ ಅತ್ತಾರ ಉಪಸ್ಥಿತರಿದ್ದರು.