ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ವತಿಯಿಂದ 30 ದಿನ ಬೇಸಿಗೆ ರಜೆ ನೀಡಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಹಿರಿಯೂರು
2025ರಲ್ಲಿ ನೀಡಿದಂತೆ 2026ನೇ ಸಾಲಿನಲ್ಲಿಯೂ 30 ದಿನಗಳ ಬೇಸಿಗೆ ರಜೆಗಳನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕು ಸಮಿತಿ ವತಿಯಿಂದ ಮಂಗಳವಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಅಂಗನವಾಡಿ ಕೇಂದ್ರಗಳಿಗೆ 2025ರಲ್ಲಿ ಒಂದು ತಿಂಗಳ ಬೇಸಿಗೆ ರಜೆ ನೀಡುವ ಆದೇಶವಾಗಿತ್ತು. ಕಳೆದ ವರ್ಷ ಏ.15ರಿಂದ ಮೇ.14ರವರೆಗೆ ರಜೆ ನೀಡಲಾಗಿತ್ತು. ಆದರೆ 2026ನೇ ಸಾಲಿನ ಆದೇಶದಲ್ಲಿ 40 ದಿನಗಳ ಬೇಸಿಗೆ ರಜೆಯನ್ನು ನೀಡಲಾಗಿದ್ದು, ಏಪ್ರಿಲ್ 16 ರಿಂದ ಏಪ್ರಿಲ್ 30ರವರೆಗೆ ಮಾತ್ರ ಬೇಸಿಗೆ ರಜೆಯ ಅವಧಿಯಾಗಿದೆ. ಉಳಿದಂತೆ 10 ದಿನಗಳ ನೋಂದಣಿ ಅಭಿಯಾನ ಮತ್ತು 15 ದಿನ ಹೊರತುಪಡಿಸಿ ಉಳಿದಂತ ದಿನಗಳಲ್ಲಿ ಕೇಂದ್ರ ತೆರದಿರಬೇಕೆಂದು ಆದೇಶಿಸಲಾಗಿದೆ. ಈ ಆದೇಶ ಬದಲಾವಣೆ ಮಾಡಬೇಕು. ಈ ಹಿಂದಿನಂತೆಯೇ ಬೇಸಿಗೆ ರಜೆ ಒಂದು ತಿಂಗಳು ನೀಡಬೇಕು. ಉಳಿದ ದಿನಗಳಲ್ಲಿ ನೋಂದಣಿ ಅಭಿಯಾನ, ಟಿಎಚ್‌ಆರ್ ಹಾಕುವ ಕೆಲಸಗಳನ್ನು ಹಾಕಬೇಕು. ಆದ್ದರಿಂದ ಈಗಿರುವ ಆದೇಶವನ್ನು ಬದಲಾವಣೆ ಮಾಡಿ ಪುನರ್ ಆದೇಶ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷೆ ಅನಸೂಯಮ್ಮ, ಅಧ್ಯಕ್ಷೆ ಬಿಪಿ ನಿರ್ಮಲ, ಖಜಾಂಚಿ ಎಸ್.ಕವಿತ, ಪ್ರಧಾನ ಕಾರ್ಯದರ್ಶಿ ಜೆ.ಕ್ರೀಷ್ಟಿ ಜುನೇಟಾ, ಅನಿತಶ್ರೀ, ಶ್ರೀದೇವಿ, ಹೇಮಲತಾ ಮುಂತಾದವರು ಹಾಜರಿದ್ದರು.