ಅಮಿತ ಕೋರೆಗೆ ಚಿಕ್ಕೋಡಿ ಲೋಕಸಭೆ ಬಿಜೆಪಿ ಟಿಕೆಟ್‌ ನೀಡಲು ಆಗ್ರಹ

| Published : Jan 10 2024, 01:45 AM IST

ಸಾರಾಂಶ

ಚಿಕ್ಕೋಡಿ ಭಾಗದ ಅಭಿವೃದ್ಧಿಗಾಗಿ ಸೇವೆ ಮಾಡಲು ಅಮಿತ್‌ ಕೋರೆ ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ಸುರೇಶ ಪಾಟೀಲ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಸಹಕಾರ, ಶಿಕ್ಷಣ, ಸಾಮಾಜಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಯುವ ನಾಯಕ ಹಾಗೂ ನವದೆಹಲಿಯ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ನಿರ್ದೇಶಕ ಅಮಿತ ಕೋರೆ ಅವರಿಗೆ ಬರುವ 2024ರ ಲೋಕಸಭೆ ಚುನಾವಣೆಗೆ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂದು ಅಂಕಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸುರೇಶ ಪಾಟೀಲ ಆಗ್ರಹಿಸಿದರು.

ಅಂಕಲಿಯ ಡಾ.ಪ್ರಭಾಕರ ಕೋರೆ ಸಹಕಾರಿ ಸಭಾಗೃಹದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಅಮಿತ ಕೋರೆ ಅವರು ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷರಾಗಿ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾಗಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಚಾರಿಟೇಬಲ ಆಸ್ಪತ್ರೆಯ ಚೇರಮನ್‌ರಾಗಿ, ಬಸವ ಇಂಟರನ್ಯಾಶನಲ್ ಸ್ಕೂಲ್, ನವದೆಹಲಿ ಚೇರಮನ್ನರಾಗಿ ಹಾಗೂ ಜನಶಕ್ತಿ ಫೌಂಡೇಶನ್‌ ಚಿಕ್ಕೋಡಿಯ ಸಂಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸುದೀರ್ಘ 55 ವರ್ಷಗಳ ಭವ್ಯ ಇತಿಹಾಸ ಹೊಂದಿರುವ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯು ಈ ಭಾಗದ ಕಬ್ಬು ಬೆಳೆಗಾರರ ಕಾಮಧೇನುವಾಗಿದ್ದು, ಡಾ.ಪ್ರಭಾಕರ ಕೋರೆ ಮಾರ್ಗದರ್ಶನದಲ್ಲಿ ಅಮಿತ ಕೋರೆ ಅವರು ಚೇರಮನ್‌ರಾದ ಬಳಿಕ ಮಹತ್ವಕಾಂಕ್ಷೆ ಮತ್ತು ಸೂಕ್ತ ನಿರ್ಣಯಗಳ ಫಲವಾಗಿ ಕಾರ್ಖಾನೆಯು ಇವತ್ತು 10,000 ಟಿಸಿಡಿ ಕಬ್ಬು ಅರೆಯುವ ಸಾಮರ್ಥ್ಯಕ್ಕೆ ಬೆಳೆದು ನಿಂತಿದೆ. 28.7 ಮೆ.ವ್ಯಾಟ್‌ ಸಹ ವಿದ್ಯುತ್, 30 ಕೆಎಲ್‌ಪಿಡಿ ಡಿಸ್ಟಿಲರಿ ಮತ್ತು ಇಥನಾಲ ಉಪ ಉತ್ಪಾದನಾ ಘಟಕಗಳು ಸಹ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅಂಕಲಿ ಗ್ರಾಮದಲ್ಲಿ ಕಾರ್ಖಾನೆಯ ಕಬ್ಬು ಸಂಶೋಧನಾ ಕೇಂದ್ರ ಮತ್ತು ಕಿಸಾನ್‌ ಬಜಾರ ಪ್ರಾರಂಭಿಸುವ ಮೂಲಕ ರಾಜ್ಯದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಮಾದರಿ ಕಾರ್ಖಾನೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.

ಕಾರ್ಖಾನೆಯ ಕಾರ್ಯಕ್ಷೇತ್ರದಲ್ಲಿ ನೀರಿನ ಆಭಾವವಿರುವ ಪ್ರದೇಶಕ್ಕೆ ಒಕ್ಕಲುತನಕ್ಕಾಗಿ ನೀರು ಪೂರೈಸಲು ರೈತರ ನೀರಾವರಿ ಸಂಘಗಳ ಸಹಯೋಗದೊಂದಿಗೆ ದೂಧಗಂಗಾ ಹಾಗೂ ಕೃಷ್ಣಾ ನದಿಗಳಿಂದ 7 ಬೃಹತ್ ಏತ-ಹನಿ ನೀರಾವರಿ ಯೋಜನೆಗಳನ್ನು ಮಾಡಿಸಿಕೊಡಲಾಗಿದ್ದು, ಇದರಿಂದ 2500-3000 ಎಕರೆ ಜಮೀನು ನೀರಾವರಿಗೊಂಡಿದೆ. ರೈತರಿಗೆ ಸಮಗ್ರ ಕೃಷಿ ಅಭಿವೃದ್ಧಿಗಾಗಿ ಕೃಷಿ ತಜ್ಞರು, ವಿಜ್ಞಾನಿಗಳ ಮಾರ್ಗದರ್ಶನ ಹಾಗೂ ಆಧುನಿಕ ಕೃಷಿ ಉಪಕರಣಗಳ ಬಳಕೆಯ ಕುರಿತು ಸಮಗ್ರ ಮಾಹಿತಿ ನೀಡಲು ರಾಷ್ಟ್ರಮಟ್ಟದ ಭವ್ಯ ಕೃಷಿ ಮೇಳಗಳನ್ನು ಆಯೋಜಿಸಿ ಯಶಸ್ಸಿಯಾಗಿದ್ದಾರೆ. ಕೃಷ್ಣಾ ನದಿಗೆ ಪ್ರವಾಹದಿಂದ ನೀರು ನುಗ್ಗಿದ ನದಿ ದಂಡೆಯ ಗ್ರಾಮಗಳ ಜನರು ಮತ್ತು ಜಾನುವಾರುಗಳಿಗೆ ಆಶ್ರಯ ಕಲ್ಪಿಸಿ ಊಟ, ಉಪಚಾರದ ವ್ಯವಸ್ಥೆ ಮಾಡಿಸಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಿ ಜನರಿಗೆ ಧೈರ್ಯ ತುಂಬಿದ್ದಾರೆ. ಇವರ ಆಡಳಿತಾವಧಿಯಲ್ಲಿ ಸಕ್ಕರೆ ಕಾರ್ಖಾನೆಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಲಭಿಸಿವೆ. ಆದ್ದರಿಂದ ಬರುವ ಚುನಾವಣೆಯಲ್ಲಿ ರೈತ ಪರ ಹಾಗೂ ಬಡವಾರ ಆಶಾಕಿರಣವಾಗಿರುವ ಸರಳ ಸಜ್ಜನ ಯುವ ನಾಯಕ ಅಮಿತ ಕೋರೆ ಅವರಿಗೆ ಚಿಕ್ಕೋಡಿ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ ನೀಡಿ ಈ ಭಾಗದ ಅಭಿವೃದ್ಧಿಗಾಗಿ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾಜಿ ಚೇರಮನ್ ಭರತೇಶ ಬನವಣೆ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ತನ್ನದೇ ಆದ ಸೇವೆಯನ್ನು ಸಲ್ಲಿಸಿ ಈ ಭಾಗದ ರೈತರ ಆಶಾಕಿರಣವಾಗಿರುವ ಅಮಿತ ಕೋರೆ ಅವರು ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಒಳ್ಳೆಯ ವ್ಯಕ್ತಿತ್ವ, ನೀರಾವರಿ, ಕೃಷಿ, ಉದ್ಯೋಗ ಕ್ಷೇತ್ರದಲ್ಲಿ ಸುಮಾರು 2500 ಜನ ನಿರುದ್ಯೋಗ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಬಹುಭಾಷೆಯನ್ನು ಬಲ್ಲವರಾಗಿರುವ ಲೋಕಸಭೆಯಲ್ಲಿ ಈ ಭಾಗದ ಜನರ ಸಮಸ್ಯೆಗಳನ್ನು ಮಂಡಿಸಬಲ್ಲ ವ್ಯಕ್ತಿತ್ವನ್ನು ಹೊಂದಿದ್ದಾರೆ. ಈ ಸಲ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಮಹಾಂತೇಶ ಪಾಟೀಲ, ಸಿದ್ದು ಮಗದುಮ್ಮ, ಪರಸಗೌಡ ಪಾಟೀಲ, ಅಣ್ಣಾಸಾಹೇಬ ಪಾಟೀಲ, ಪ್ರಪುಲ್ಲ ಶೆಟ್ಟಿ, ಪ್ರಸಾದ ಮೇದಾರ, ನಾಗೇಂದ್ರ ಧರನಾಯಕ್, ವಿವೇಕ ಕಮತೆ ಉಪಸ್ಥಿತರಿದ್ದರು.