ಮುಖ್ಯಮಂತ್ರಿಯನ್ನಾಗಿ ಸಚಿವರಾದ ಡಾ.ಜಿ ಪರಮೇಶ್ವರ್ ಅವರನ್ನು ಮಾಡುವಂತೆ ಒತ್ತಾಯಿಸಿ ತಾಲೂಕಿನ ಛಲವಾದಿ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಗುಬ್ಬಿ
ಮುಖ್ಯಮಂತ್ರಿಯನ್ನಾಗಿ ಸಚಿವರಾದ ಡಾ.ಜಿ ಪರಮೇಶ್ವರ್ ಅವರನ್ನು ಮಾಡುವಂತೆ ಒತ್ತಾಯಿಸಿ ತಾಲೂಕಿನ ಛಲವಾದಿ ಮಹಾಸಭಾ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಛಲವಾದಿ ಮಹಾಸಭಾದ ಅಧ್ಯಕ್ಷ ಟಿ ಈರಣ್ಣ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕೂಗು ಕೇಳಿ ಬರುತ್ತಿದ್ದು, ಒಕ್ಕಲಿಗ ಸ್ವಾಮೀಜಿ ಡಿಕೆಶಿ ಯನ್ನ ರಾಜ್ಯದ ಮುಖ್ಯಮಂತ್ರಿ ಮಾಡುವಂತೆ ಒತ್ತಾಯಮಾಡುತ್ತಿದ್ದಾರೆ. ಹಾಗಾಗಿ ತಾಲೂಕಿನ ಛಲವಾದಿ ಮಹಾಸಭಾ ವತಿಯಿಂದ ಡಾ.ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡುವಂತೆ ಒತ್ತಾಯಿಸುತ್ತಿದ್ದೂ ಕಾಂಗ್ರೆಸ್ ಪಕ್ಷಕ್ಕೆ ತಮ್ಮದೇ ಆದಂತಹ ಸೇವೆ ನೀಡುತ್ತಿರುವಂತಹ ಡಾ.ಜಿ ಪರಮೇಶ್ವರ್ ಅವರಿಗೆ ಸಾಕಷ್ಟು ಅನುಭವವಿದೆ. ಅವರನ್ನು ಮುಖ್ಯಮಂತ್ರಿ ಮಾಡುವುದರಿಂದ ಹಿಂದುಳಿದ ಸಮುದಾಯಕ್ಕೆ ಹಾಗೂ ರಾಜ್ಯಕ್ಕೂ ಕೂಡ ಅತ್ಯಂತ ಹೆಚ್ಚಿನ ಅನುಕೂಲವಾಗುತ್ತದೆ ಎಂದು ಹೇಳಿದರು. ಕ್ಷೇತ್ರದ ಶಾಸಕ ಎಸ್ ಆರ್ ಶ್ರೀನಿವಾಸ್ ಅವರಿಗೆ ಸಚಿವ ಸಂಪುಟ ಸ್ಥಾನ ನೀಡಬೇಕು. ವಾಸಣ್ಣ ಅವರು ಐದು ಬಾರಿ ಶಾಸಕರಾಗಿ ಆಯ್ಕೆ ಯಾಗಿದ್ದು, ಯಾವುದೇ ಭೇದ ಭಾವ ಮಾಡದೆ ಎಲ್ಲಾ ಸಮುದಾಯವನ್ನು ಒಂದೇ ಎಂಬ ಮನೋಭಾವವನ್ನು ಇಟ್ಟುಕೊಂಡಿದ್ದಾರೆ. ಹಾಗಾಗಿ ಅಂತಹ ವ್ಯಕ್ತಿಗೆ ಸಚಿವ ಸ್ಥಾನವನ್ನು ಹೈಕಮಾಂಡ್ ನೀಡುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕಿಟ್ಟದ ಗುಪ್ಪೆ ನಾಗರಾಜ್, ಕುಂದರನಹಳ್ಳಿ ರವೀಶ್, ಪ್ರಧಾನ ಕಾರ್ಯದರ್ಶಿ ಗೋಪಾಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುಳಾ, ಕೃಷ್ಣಪ್ಪ, ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.