ಮುತ್ತಿನಕೊಪ್ಪಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರು ಮಾಡಲು ಆಗ್ರಹ

| Published : Dec 16 2023, 02:01 AM IST

ಮುತ್ತಿನಕೊಪ್ಪಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರು ಮಾಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಮುತ್ತಿನಕೊಪ್ಪಕ್ಕೆ ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರು ಮಾಡಲು ಆಗ್ರಹ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರ ಒತ್ತಾಯ

-ಒಂದೇ ಕ್ಯಾಂಪಸ್ ನಲ್ಲಿದೆ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು । 8 ಎಕ್ರೆ ಜಾಗದಲ್ಲಿರುವ ಶಾಲೆ ಮುಖ್ಯರಸ್ತೆಯ ಪಕ್ಕದಲ್ಲಿದೆ । ಶಾಲೆಯ ಎಸ್‌.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಹಾಗೂ ಗ್ರಾಮಸ್ಥರ ಒತ್ತಾಯ

ಯಡಗೆರೆ ಮಂಜುನಾಥ್‌,

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಸರ್ಕಾರ ತಾಲೂಕು, ಹೋಬಳಿ ಕೇಂದ್ರಗಳಿಗೆ ಮಂಜೂರು ಮಾಡುತ್ತಿರುವ ಕರ್ನಾಟಕ ಪಬ್ಲಿಕ್‌ ಸ್ಕೂಲನ್ನು ತಾಲೂಕಿನ ಮುತ್ತಿನಕೊಪ್ಪಕ್ಕೆ ಒದಗಿಸುವಂತೆ ಸರ್ಕಾರಿ ಹಿರಿಯ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಇದಕ್ಕೆ ಮುಖ್ಯ ಕಾರಣ ಈ ಬಾರಿಯಾದರೂ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾದ ಮಾದರಿ ಶಾಲೆ ಕೆಪಿಎಸ್‌ಯನ್ನು ಮುತ್ತಿನಕೊಪ್ಪದಲ್ಲಿರುವ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜಿಗೆ ನೀಡಿ ಒಂದೇ ಆಡಳಿತಕ್ಕೆ ಒಳಪಡಿಸುವ ಮೂಲಕ ಸ್ಥಳಿಯ ವಿದ್ಯಾರ್ಥಿಗಳ ಕಲಿಕೆಗೆ ಸದವಕಾಶ ನೀಡಬೇಕೆಂಬ ಆಶಯ ಕಾಳಜಿ ಎದ್ದು ತೋರುತ್ತಿದೆ.

ಶಿಕ್ಷಣ ಇಲಾಖೆ ಹಲವು ವರ್ಷಗಳ ಹಿಂದೆ ಹೊಸದಾಗಿ ಜಾರಿಗೆ ತಂದ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಕಲ್ಪನೆಯ ಪ್ರಕಾರ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜನ್ನು ಒಂದೇ ಕಡೆ ಕೇಂದ್ರೀಕರಿಸಿ ಅದನ್ನು ಒಂದೇ ಆಡಳಿತಕ್ಕೆ ತಂದು ಸರ್ಕಾರ ಹೆಚ್ಚು ಅನುದಾನ ನೀಡಿ ಆ ಶಾಲೆಯಲ್ಲಿ ಅಭಿವೃದ್ಧಿ ಪಡಿಸುವುದಾಗಿದೆ. ಬೌದ್ದಿಕವಾಗಿ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡುವುದಾಗಿದೆ. ಆದರೆ ಈ ಕೆಪಿಎಸ್‌ ಶಾಲೆಯಾಗಿಸುವ ಅವಕಾಶ ಒಂದು ಬಾರಿ ಕೈತಪ್ಪಿದ್ದರಿಂದ ಈ ಬಾರಿಯಾದರೂ ಅವಕಾಶ ಕಲ್ಪಿಸಿ ಎಂಬುದು ಎಲ್ಲರ ಒತ್ತಾಯವಾಗಿದೆ.

--- ಬಾಕ್ಸ್‌--5 ವರ್ಷದ ಹಿಂದೆ ಪಟ್ಟಣಕ್ಕೆ ಪಬ್ಲಿಕ್‌ ಸ್ಕೂಲ್

ಕಳೆದ 5 ವರ್ಷಗಳ ಹಿಂದೆ ನರಸಿಂಹರಾಜಪುರ ತಾಲೂಕಿಗೆ ಪಟ್ಟಣದಲ್ಲಿದ್ದ ಶತಮಾನ ಕಂಡ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜಿಗೆ ಕರ್ನಾಟಕ ಪಬ್ಲಿಕ್‌ ಮಂಜೂರಾಗಿತ್ತು. ಆ ಸಂದರ್ಭದಲ್ಲಿ ಮುತ್ತಿನಕೊಪ್ಪದ ಸರ್ಕಾರಿ ಶಾಲೆಗಳ ಪೋಷಕರು ಮುತ್ತಿನಕೊಪ್ಪಕ್ಕೆ ಕರ್ನಾಟಕ ಪಬ್ಲಿಕ್‌ ಸ್ಕೂಲ್ ನೀಡುವಂತೆ ಒತ್ತಾಯಿಸಿದ್ದರು. ಆದರೆ, ಒಂದೇ ಕೆಪಿಎಸ್‌ ಮಂಜೂರಾಗಿದ್ದರಿಂದ ಪಟ್ಟಣಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು.

ಕಳೆದ 3 ವರ್ಷಗಳ ಹಿಂದೆ ಮತ್ತೆ ಮುತ್ತಿನಕೊಪ್ಪಕ್ಕೆ ಕೆಪಿಎಸ್‌ ಮಂಜೂರಾಗುವ ಹಂತದಲ್ಲಿತ್ತು. ಆದರೆ, ಕೊನೆ ಗಳಿಗೆಯಲ್ಲಿ ಕಾರಣಾಂತರದಿಂದ ಅದು ಕೈತಪ್ಪಿ, ತರೀಕೆರೆ ತಾಲೂಕಿನ ರಂಗೇನಹಳ್ಳಿಗೆ ವರ್ಗಾವಣೆಯಾಯಿತು ಎನ್ನುತ್ತಾರೆ ಶಾಲೆ ಆಡಳಿತ ಮಂಡಳಿಯವರು.ಶಾಲೆ ವಿಶೇಷತೆ ಏನು?

ಮುತ್ತಿನಕೊಪ್ಪದಲ್ಲಿ ವಿಶೇಷವಾಗಿ ಶಿವಮೊಗ್ಗ- ನರಸಿಂಹರಾಜಪುರ ಮುಖ್ಯ ರಸ್ತೆ ಪಕ್ಕದಲ್ಲಿಯೇ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು ಇದೆ. ಪದವಿಪೂರ್ವ ಕಾಲೇಜಿನಲ್ಲಿ 60 ವಿದ್ಯಾರ್ಥಿಗಳು, ಪ್ರೌಢ ಶಾಲೆಯಲ್ಲಿ 160 ಹಾಗೂ ಪ್ರಾಥಮಿಕ ಶಾಲೆಯಲ್ಲಿ 130 ಮಕ್ಕಳು ಸೇರಿ ಒಟ್ಟು 330 ಮಕ್ಕಳಿದ್ದಾರೆ. ವಿಶೇಷವಾಗಿ 3 ಶಾಲೆಯ ಕ್ಯಾಂಪಸ್ ಸೇರಿ ಒಟ್ಟು 8 ಎಕರೆ ವಿಶಾಲ ಜಾಗವಿದೆ. ಇದರಲ್ಲಿ 3 ಎಕರೆ ಆಟದ ಮೈದಾನವಿದೆ. ಶಾಲಾ ಕ್ಯಾಂಪಸ್‌ ಗೆ ಹೊಂದಿಕೊಂಡೇ ಬಿಸಿಎಂ ಬಾಲಕರ ಹಾಸ್ಟೆಲ್‌ ಇದೆ. ಪ್ರಾಥಮಿಕ ಶಾಲೆಯಲ್ಲಿ 16 ಕೊಠಡಿ, ಬಯಲು ರಂಗಮಂದಿರ ಇದೆ. ಪ್ರೌಢ ಶಾಲೆಯಲ್ಲಿ 10 ಕೊಠಡಿ. ಪದವಿ ಪೂರ್ವ ಕಾಲೇಜಿನಲ್ಲಿ 3 ಕೊಠಡಿ ಇದ್ದು,1 ರಿಂದ 10 ನೇ ತರಗತಿಯವರೆಗೆ ಕನ್ನಡ ಹಾಗೂ ಇಂಗ್ಲೀಷ್‌ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ. ನುರಿತ ಶಿಕ್ಷಕರು, ಉಪನ್ಯಾಸಕರೂ ಇದ್ದಾರೆ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸರ್ಕಾರದಿಂದ ಅಂದಾಜು 1 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಕೊಠಡಿಗಳು ನಿರ್ಮಾಣವಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಇದೆ. ಹೈಟೆಕ್‌ ಶೌಚಾಲಯದ ಕಾಮಗಾರಿ ಪ್ರಾರಂಭವಾಗಿದೆ. ದಾನಿಗಳಿಂದ ಸ್ಮಾರ್ಟ ಕ್ಲಾಸ್, ಕಂಪ್ಯೂಟರ್‌, ಸಿಸಿ ಕ್ಯಾಮರಾ, ಗ್ರೀನ್‌ ಬೋರ್ಡ, ತೆರೆದ ವೇದಿಕೆ ನಿರ್ಮಾಣವಾಗಿದೆ.

ಹೋರಾಟದ ಫಲ:

ಕಳೆದ 2 ವರ್ಷಗಳ ಹಿಂದೆ ಮುತ್ತಿನಕೊಪ್ಪ ಸರ್ಕಾರಿ ಪದವಿಪೂರ್ವ ಕಾಲೇಜನ್ನು ಇದ್ದಕ್ಕಿದ್ದಂತೆ ಉಡುಪಿ ಜಿಲ್ಲೆಗೆ ವರ್ಗಾವಣೆ ಮಾಡಿ ಆದೇಶ ಮಾಡಲಾಗಿತ್ತು. ಆಗ ಎಚ್ಚೆತ್ತ ಎಸ್‌ಡಿಎಂಸಿ, ಪೋಷಕರು, ಗ್ರಾಮಸ್ಥರು ಹಾಗೂ ಮಕ್ಕಳು ಪ್ರತಿಭಟನೆ ನಡೆಸಿದ್ದರು. ನಂತರ ಕಾಲೇಜನ್ನು ಇಲ್ಲೇ ಉಳಿಸಲಾಗಿತ್ತು. ಮುತ್ತಿನಕೊಪ್ಪ ಗ್ರಾಪಂ ಹಾಗೂ ಸುತ್ತ ಮುತ್ತ ಗ್ರಾಮೀಣ ಪ್ರದೇಶ ವಾಗಿದ್ದು ಉತ್ತಮ ಶಿಕ್ಷಣ ಪಡೆಯಲು 16 ಕಿ.ಮೀ. ದೂರದ ನರಸಿಂಹರಾಜಪುರಕ್ಕೆ ಅಥವಾ ಉಂಬಳೆ ಬೈಲು, ಶಿವಮೊಗ್ಗ, ಶಂಕರಘಟ್ಟಕ್ಕೆ ಹೋಗಬೇಕು. ಮುತ್ತಿನಕೊಪ್ಪದಲ್ಲೇ ಕರ್ನಾಟಕ ಪಬ್ಲಿಕ್‌ ಸ್ಕೂಲ್ ಮಾಡಿ ಗುಣಮಟ್ಟದ ಶಿಕ್ಷಣ, ಇನ್ನಷ್ಟು ಮೂಲಭೂತ ಸೌಕರ್ಯ ಒದಗಿಸಿದರೆ ಈ ಗ್ರಾಮೀಣ ಮಕ್ಕಳು ಸರ್ಕಾರಿ ಶಾಲೆಗೆ ಬರುತ್ತಾರೆ. ಬಹುತೇಕ ಬಡ ಮಕ್ಕಳೇ ಶಿಕ್ಷಣ ಪಡೆಯುತ್ತಿರುವ ಮುತ್ತಿನಕೊಪ್ಪ ಸರ್ಕಾರಿ ಪ್ರಾಥಮಿಕ, ಪ್ರೌಡ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಒಂದೇ ಆಡಳಿತಕ್ಕೆ ತರುವ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ನೀಡಬೇಕು ಎಂಬುದೇ ಈ 3 ಶಾಲೆಗಳ ಎಸ್‌ಡಿಎಂಸಿ ಸದಸ್ಯರು, ಪೋಷಕರು, ಮಕ್ಕಳು ಹಾಗೂ ಗ್ರಾಮಸ್ಥರ ಆಗ್ರಹವಾಗಿದೆ. ಈಗಾಗಲೇ ಮುತ್ತಿನಕೊಪ್ಪ ಶಾಲೆ ಎಸ್‌ಡಿಎಂಸಿ ಯಿಂದ ಶಾಸಕರಿಗೆ, ಜಿಲ್ಲಾ ಶಿಕ್ಷಣ ಉಪ ನಿರ್ದೇಶಕರಿಗೆ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ನೀಡುವಂತೆ ಮನವಿ ಮಾಡಲಾಗಿದೆ.

--- ಕೋಟ್ ---

ಸರ್ಕಾರದ ಕೆಪಿಎಸ್‌ ಯೋಜನೆ ಪ್ರಾರಂಭವಾದಾಗಿನಿಂದಲೂ ಮುತ್ತಿನಕೊಪ್ಪಕ್ಕೆ ಕೆಪಿಎಸ್‌ ನೀಡಬೇಕು ಎಂದು ಶಾಸಕರು ಹಾಗೂ ಡಿಡಿಪಿಐಗೆ ಮನವಿ ಸಲ್ಲಿಸಲಾಗಿದೆ. ಮುತ್ತಿನಕೊಪ್ಪ ಭಾಗದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚಾಗಿದ್ದು ಆ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದೇ ನಮ್ಮ ಕಳಕಳಿ. ಹಿಂದಿನ ಬಾರಿ ಮುತ್ತಿನಕೊಪ್ಪಕ್ಕೆ ಕೆಪಿಎಸ್ ಮಂಜೂರಾಗುವ ಹಂತದಲ್ಲಿದ್ದರೂ ಕಾರಣಾಂತರದಿಂದ ರಂಗೇನಹಳ್ಳಿಗೆ ಬದಲಾಗಿತ್ತು. ಈ ಬಾರಿ ಶಿಕ್ಷಣ ಇಲಾಖೆ ಹಾಗೂ ಶಾಸಕರು ಮುತ್ತಿನಕೊಪ್ಪಕ್ಕೆ ಕೆಪಿಎಸ್‌ ನೀಡುತ್ತಾರೆಂಬ ನಿರೀಕ್ಷೆಯಲ್ಲಿದ್ದೇವೆ.

- ಸಿ.ಎಲ್‌.ಮನೋಹರ್,

ಎಸ್‌ಡಿಎಂಸಿ ಅಧ್ಯಕ್ಷ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುತ್ತಿನಕೊಪ್ಪ

--- ಕೋಟ್‌---

ಮುತ್ತಿನಕೊಪ್ಪ ಸುತ್ತ ಮುತ್ತಲಿನ ಗ್ರಾಮೀಣ ಪ್ರದೇಶವಾದ ದೊಡ್ಡಿನ ತಲೆ, ಸಾತ್ಕೋಳಿ, ಕೆ.ಕಣಬೂರು, ಕೊರಲಕೊಪ್ಪ, ಲಿಂಗಾಪುರ, ಮಡಬೂರು, ಚಬ್ಬೆನಾಡು, ಹಸೂಡಿ ಮುಂತಾದ ಹಳ್ಳಿಗಳಿಂದ ಶಿಕ್ಷಣ ಪಡೆಯಲು ಮುತ್ತಿನಕೊಪ್ಪ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿಗೆ ಮಕ್ಕಳು ಬರುತ್ತಿದ್ದಾರೆ. ಕರ್ನಾಟಕ ಪಬ್ಲಿಕ್‌ ಸ್ಕೂಲ್ ಮಂಜೂರಾದರೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆತು, ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಶಿಕ್ಷಣ ಪಡೆಯಲು ಹೋಗುವುದನ್ನು ತಡೆಯಬಹುದು.

ವರ್ಗೀಸ್‌, ಪೋಷಕರು, ಸರ್ಕಾರಿ ಪ್ರೌಢ ಶಾಲೆ, ಮುತ್ತಿನಕೊಪ್ಪ

---- ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಸಜ್ಜಿತ ಶಾಲಾ ಕೊಠಡಿಗಳು ( 15.ಕೆಎನ್‌.ಆರ್‌.ಪಿ.1)

- ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು ( 15.ಕೆ.ಎನ್‌.ಆರ್‌.ಪಿ.2)